Log In
BREAKING NEWS >
ಮಾ.28ರ೦ದು ಸ೦ಜೆ 6.30ಕ್ಕೆ ಪಣಿಯಾಡಿ ಶ್ರೀಅನ೦ತಾಸನ ಶ್ರೀಲಕ್ಷ್ಮೀಪದ್ಮನಾಭ ದೇವಸ್ಥಾನದ ವಠಾರದಲ್ಲಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನಾ ಸಮಾರ೦ಭ ಜರಗಲಿದೆ....

ಬೆಂಗಳೂರು ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಕರ್ನಾಟಕ ಹೈಕೋರ್ಟ್!

ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

ಬೆಂಗಳೂರಿನ ನಾಗವಾರದ ಹೆಣ್ಣೂರು ಕ್ರಾಸ್‌ ಬಳಿ ಮೆಟ್ರೊ ಪಿಲ್ಲರ್‌ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಈಚೆಗೆ ಕುಸಿದು ಬಿದ್ದು ತಾಯಿ ಮತ್ತು ಗಂಡು ಮಗು ಸಾವನ್ನಪ್ಪಿದ ಪ್ರಕರಣ ಹಾಗೂ ಬ್ರಿಗೇಡ್‌ ರಸ್ತೆಯಲ್ಲಿ ಗುಂಡಿ ಬಿದ್ದಿರುವ ವಿಚಾರದ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿದೆ.

ಇಂದು ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ ಎಸ್. ಕಿಣಗಿ ಅವರಿದ್ದ ನ್ಯಾಪೀಠ, ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಪ್ರಸ್ತಾಪಿಸಿತು. ಅಲ್ಲದೇ ಈ ರೀತಿಯ ಘಟನೆ ದುರಾದೃಷ್ಟಕರ ಎಂದು ತಿಳಿಸಿತು. ಬೆಂಗಳೂರಿನಲ್ಲಿ ಜನವರಿ 11 ಮತ್ತು 13ರಂದು ಪ್ರತ್ಯೇಕವಾಗಿ ನಡೆದಿರುವ ಪ್ರಕರಣಗಳು ಸಂಜ್ಞೇಯ ಪರಿಗಣಿಸುವಂತೆ ಮಾಡಿವೆ ಎಂದು ವಿಭಾಗೀಯ ಪೀಠವು ಆದೇಶದಲ್ಲಿ ಹೇಳಿದೆ.

ವಿಸ್ತೃತ ನೆಲೆಯಲ್ಲಿ ರಸ್ತೆಗಳ ಪರಿಸ್ಥಿತಿಯು ಕಳಕಳಿ ಮತ್ತು ಪ್ರಶ್ನೆ ಹುಟ್ಟುಹಾಕಿದ್ದು, ಇಂಥ ಕಾಮಗಾರಿ ನಡೆಸುವಾಗ ಯಾವ ರೀತಿಯ ಸುರಕ್ಷತಾ ಕ್ರಮಕೈಗೊಳ್ಳಲಾಗಿದೆ? ಸುರಕ್ಷತಾ ಕ್ರಮಗಳು ಟೆಂಡರ್‌ ದಾಖಲೆ ಅಥವಾ ಗುತ್ತಿಗೆಕಾರರಿನಲ್ಲಿ ಉಲ್ಲೇಖವಾಗಿದೆಯೇ? ಒಂದೊಮ್ಮೆ ಸುರಕ್ಷತಾ ಕ್ರಮಗಳು ಟೆಂಡರ್‌ ದಾಖಲೆ/ಗುತ್ತಿಗೆ ಕರಾರಿನಲ್ಲಿ ಉಲ್ಲೇಖವಾಗಿರದಿದ್ದರೆ, ಸರ್ಕಾರದ ಆದೇಶ ಅಥವಾ ಅಧಿಸೂಚನೆಯ ರೂಪದಲ್ಲಿ ಸುರಕ್ಷತಾ ಕ್ರಮಕೈಗೊಳ್ಳಲು ಸೂಚಿಸಲಾಗಿದೆಯೇ? ಒಂದೊಮ್ಮೆ ಸುರಕ್ಷತಾ ಕ್ರಮ ಉಲ್ಲೇಖಿಸಿದ್ದರೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಮೇಲಿಂದ ಮೇಲೆ ಅವುಗಳನ್ನು ಪರಿಶೀಲಿಸಲು ಯಾವ ವ್ಯವಸ್ಥೆ ಮಾಡಲಾಗಿದೆ? ಸುರಕ್ಷತಾ ಕ್ರಮ ನಿರ್ವಹಿಸಲು ಹೊಣೆಗಾರಿಕೆ ನಿಗದಿ ಮಾಡಲಾಗಿದೆಯೇ? ಎನ್ನುವ ಪ್ರಶ್ನೆಗಳನ್ನು ನ್ಯಾಯಾಲಯ ಎತ್ತಿದೆ.

ಗುತ್ತಿಗೆ ನಡೆಸುತ್ತಿರುವ ಸಂಸ್ಥೆ ಅಥವಾ ಕಾಮಗಾರಿಯ ಮೇಲುಸ್ತುವಾರಿ ನಿಭಾಯಿಸುತ್ತಿರುವ ಅಧಿಕಾರಿಗಳ ಕುರಿತಾದ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹೀಗಾಗಿ, ಮೇಲೆ ಉಲ್ಲೇಖಿಸಿದ ವಿಚಾರಗಳ ಕುರಿತು ಸಂಜ್ಞೇ ಪರಿಗಣಿಸಬೇಕಿದೆ. ಈ ನೆಲೆಯಲ್ಲಿ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಪ್ರಕರಣ ದಾಖಲಿಸಲು ಆದೇಶಿಸಲಾಗಿದೆ ಎಂದು ಪೀಠವು ಹೇಳಿತು.

ರಾಜ್ಯ ಸರ್ಕಾರದ ಸಂಬಂಧಿತ ಇಲಾಖೆಗಳು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ‌ (ಬಿಬಿಎಂಪಿ), ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ (ಬಿಎಂಆರ್‌ಸಿಎಲ್), ಸಂಬಂಧಿತ ಗುತ್ತಿಗೆದಾರರನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲು ನ್ಯಾಯಾಲಯವು ಆದೇಶಿಸಿದೆ.

ಜನವರಿ 11ರಂದು ಮಕ್ಕಳನ್ನು ಪ್ಲೇಸ್ಕೂಲ್‌ಗೆ ಬಿಡಲು ಸಾಫ್ಟ್‌ವೇರ್‌ ಎಂಜಿಯರ್‌ ಆದ ತೇಜಸ್ವಿನಿ ಮತ್ತು ಅವರ ಪತಿ ಲೋಹಿತ್‌ ಕುಮಾರ್‌ ಸುಲಾಖೆ ಅವರು ತೆರಳುತ್ತಿದ್ದರು. ಈ ಸಂದರ್ಭದಲ್ಲಿ 12 ಮೀಟರ್‌ ಎತ್ತರದ ಕಬ್ಬಿಣದ ಚೌಕಟ್ಟು ಅವರ ಮೇಲೆ ಬಿದ್ದ ಪರಿಣಾಮ ತೇಜಸ್ವಿನಿ ಮತ್ತು ಅವರ ಎರಡೂವರೆ ವರ್ಷದ ಪುತ್ರ ವಿಹಾನ್‌ ಮೃತಪಟ್ಟಿದ್ದರು. ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣದಲ್ಲಿ ಸಂಬಂಧಪಟ್ಟ ಐವರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಗುತ್ತಿಗೆದಾರ ಸಂಸ್ಥೆ ನಾಗಾರ್ಜುನ ಕನಸ್ಟ್ರಕ್ಷನ್‌ ಮತ್ತು ಬಿಎಂಆರ್‌ಸಿಎಲ್‌ನ ಕೆಲವು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಘಟನೆ ಮಾಸುವ ಮುನ್ನವೇ ಗುರುವಾರ ಬ್ರಿಗೇಡ್‌ ರಸ್ತೆಯಲ್ಲಿ ದೊಡ್ಡದಾದ ರಸ್ತೆ ಗುಂಡಿ ನಿರ್ಮಾಣಗೊಂಡಿದ್ದು, ಬೈಕ್‌ ಸವಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಎರಡೂ ಪ್ರಕರಣಗಳನ್ನು ಆಧರಿಸಿ ನ್ಯಾಯಾಲಯವು ಈಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

No Comments

Leave A Comment