ನವದೆಹಲಿ: 9 ಹೈಕೋರ್ಟ್ ಜಡ್ಜ್‌ಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸ್ಸು ಮಾಡಲಾಗಿದ್ದು, ಕರ್ನಾಟಕಕ್ಕೆ ಇಬ್ಬರು ನ್ಯಾಯಾಧೀಶರು ನೇಮಕವಾಗಲಿದ್ದಾರೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸುಪ್ರೀಂ ಕೋರ್ಟ್ (Supreme Court) ಕೊಲಿಜಿಯಂ ಸಭೆಯಲ್ಲಿ 7 ನ್ಯಾಯಾಧೀಶರು ಮತ್ತು ಇಬ್ಬರು ನ್ಯಾಯವಾದಿಗಳನ್ನು ವಿವಿಧ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ.
ಮೂಲಗಳ ಪ್ರಕಾರ ನ್ಯಾಯಾಧೀಶರಾದ ರಾಮಚಂದ್ರ ದತ್ತಾತ್ರೇಯ ಹುದ್ದಾರ್ ಮತ್ತು ವೆಂಕಟೇಶ್ ನಾಯ್ಕ್ ಥಾವರ್ಯನಾಯ್ಕ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಶಿಫಾರಸು ಮಾಡಲಾಗಿದ್ದ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ಜಡ್ಜ್ ಆಗಿ ನೇಮಕ ಮಾಡಲು ಮತ್ತೆ ಶಿಫಾರಸು ಮಾಡಲಾಗಿದೆ.
ಜನವರಿ 10ರಂದು ಕೊಲಿಜಿಯಂ ಸಭೆ ನಡೆಯಿತು. ಇದೇ ವೇಳೆ, ಬಾಂಬೆ ಹೈಕೋರ್ಟ್ ಜಡ್ಜ್ ಆಗಿ, ನ್ಯಾಯವಾದಿ ನೀಲಾ ಕೇದಾರ್ ಗೋಕಲೆ ಅವರನ್ನು ಶಿಫಾರಸು ಮಾಡಲಾಗಿದ್ದು, ಗುವಾಹಟಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನ್ಯಾಯಾಧೀಶರಾದ ಮೃದುಲ್ ಕುಮಾರ್ ಕಲಿತಾ ಅವರನ್ನು ಹೆಸರಿಸಲಾಗಿದೆ. ಉಳಿದಂತೆ ನ್ಯಾಯಾಧೀಶರಾದ ಪಿ ವೆಂಕಟ್ ಜ್ಯೋತಿರ್ಮಯಿ, ವಿ ಗೋಪಾಲಕೃಷ್ಣ ರಾವ್ ಅವರಿಗೆ ಆಂಧ್ರ ಪ್ರದೇಶ ಹೈಕೋರ್ಟ್ ಜಡ್ಜ್ ಗಳಾಗಿ ಬಡ್ತಿಗೆ ಒಪ್ಪಿಗೆ ಸೂಚಿಸಲಾಗಿದ್ದು, ಮಣಿಪುರ್ ಹೈಕೋರ್ಟ್‌ಗೆ ಜುಡಿಷಿಯಲ್ ಆಫೀಸರ್‌ಗಳಾದ ಅರಿಬಮ್ ಗುಣೇಶ್ವರ್ ಶರ್ಮಾ ಮತ್ತು ಗೋಲ್ಮೆಯಿ ಗೈಫುಲ್ಶಿಲ್ಲು ಕಬುಯಿ ಅವರನ್ನು ಜಡ್ಜ್ ಆಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ.