Log In
BREAKING NEWS >
ಉಡುಪಿಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ 4ನೇ ಪರ್ಯಾಯಕ್ಕೆ ಗುರುವಾರದ೦ದು ಅದ್ದೂರಿಯ ಅಕ್ಕಿಮುಹೂರ್ತ ಕಾರ್ಯಕ್ರಮ ಸ೦ಪನ್ನ.....

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿಯಲ್ಲಿ ಚಾಲನೆ, ಅಕ್ಷರ ಜಾತ್ರೆ ಆರಂಭ: ಕಲಾ ತಂಡಗಳ ಮೆರುಗು

ಹಾವೇರಿ: ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ಶುಕ್ರವಾರ ಕನ್ನಡ ತಾಯಿ ಭುವನೇಶ್ವರಿಯ ಆರಾಧನೆ ಕನ್ನಡ ಅಕ್ಷರ ಜಾತ್ರೆ ಆರಂಭವಾಗಿದೆ. ಹಾವೇರಿಯಲ್ಲಿ ಇಂದು ಬೆಳಗ್ಗೆ 3 ದಿನಗಳ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿದ್ದು ಅಂಗವಾಗಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನಿಗದಿತ ಸಮಯಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಂಡಿತು.

ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಜನವರಿ 6-8 ವರೆಗೆ ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡಿಗರನ್ನು ಒಂದುಗೂಡಿಸುವ, ಸಾಹಿತ್ಯ ಕ್ಷೇತ್ರಕ್ಕೆ ಶಕ್ತಿ ನೀಡುವ ಈ ಹಬ್ಬ ಯಶಸ್ವಿಯಾಗಲಿ ಎಂದು ನಾಡಿನ ಗಣ್ಯರು ಶುಭಹಾರೈಸುತ್ತಿದ್ದಾರೆ.

ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯ 130 ಎಕರೆ ವಿಸ್ತೀರ್ಣ ಜಾಗದಲ್ಲಿ ಕನಕ-ಶರೀಫ-ಸರ್ವಜ್ಞ ವೇದಿಕೆ ಮುಂಭಾಗ ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣ ನೆರವೇರಿತು. ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಸಾಹಿತ್ಯ ಪರಿಷತ್ತಿನ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಮಹೇಶ್ ಜೋಶಿ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಬಿ ಹೀರೇಮಠ ನಾಡ ಧ್ವಜದ ಧ್ವಜಾರೋಹಣ ನೆರವೇರಿಸಿದರು.

ವಿವಿಧ ಕಲಾತಂಡಗಳು ಸಾಹಿತ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ನೀಡಿದವು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್, ‘ನ ಭೂತೋ, ನ ಭವಿಷ್ಯತಿ ಎನ್ನುವ ರೀತಿಯಲ್ಲಿ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡಿಗರು ಮತ್ತು ಸಾಹಿತ್ಯಾಸಕ್ತರ ನೆನಪಿನಲ್ಲಿ ಉಳಿಯುವಂತೆ ಆಯೋಜಿಸಲಾಗಿದೆ. ಕನ್ನಡಿಗರ ಬಗ್ಗೆ, ಭಾಷೆ, ನಾಡು-ನುಡಿಯ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವವರಿಗೆ ತಕ್ಕ ಉತ್ತರ ನೀಡಲಾಗುವುದು. ನಾಡು ನುಡಿ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಹಾವೇರಿಗೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಜಿಲ್ಲಾಡಳಿತ ವತಿಯಿಂದ ಅದ್ದೂರಿ ಸ್ವಾಗತ ನೀಡಲಾಗಿದೆ. ಸಮ್ಮೇಳನ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆಯಲಿ ಎಂದು ನಿಗದಿತ ಸಮಯಕ್ಕೆ ಧ್ವಜಾರೋಹಣ ಮಾಡಿದ್ದೇವೆ. ಕನ್ನಡ ನಾಡು ನುಡಿ ಭಾಷೆ ಬಗ್ಗೆ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಉತ್ತಮ ಚರ್ಚೆ ನಡೆಯಲಿದೆ. ಸಮ್ಮೇಳನದಲ್ಲಿ ಯಾವುದೇ ಅಭಾಸ, ಕುಂದುಕೊರತೆಯಾಗದಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚರಿಕೆಯಿಂದ ಕೆಲಸ ಮಾಡಿದೆ. ಕನ್ನಡವೇ ಸತ್ಯ-ಕನ್ನಡವೇ ನಿತ್ಯ ಎಂಬ ಘೋಷಣೆಯನ್ನು ಜಾರಿಗೆ ತರಲು ಸರ್ಕಾರ ಸರ್ವರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು. ನಾಡು ನುಡಿಯ ವಿಚಾರದಲ್ಲಿ ಭಿನ್ನತೆ ಮರೆತು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ನಾನು ಎಡವೂ ಅಲ್ಲ, ಬಲವೂ ಅಲ್ಲ: ನಿನ್ನೆ ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಸಮ್ಮೇಳನಾಧ್ಯಕ್ಷ ಡಾ ದೊಡ್ಡರಂಗೇಗೌಡ, ನಾನು ಎಡವೂ ಅಲ್ಲ, ಬಲವೂ ಅಲ್ಲ, ಕನ್ನಡ ಪಂಥೀಯ. ಕನ್ನಡವು ನಮ್ಮ ತಾಯಿ ಭಾಷೆಯಾಗಿದೆ. ನಮ್ಮೆದೆಗೆ ನಾಲ್ಕಕ್ಷರಗಳು ಬಿದ್ದರೆ ಬದುಕು ಬಂಗಾರವಾಗಲಿದೆ. ಜ್ಞಾನದ ಬೆಳಕಿನೆಡೆಗೆ ಹೋಗಲು ಸಾಧ್ಯವಾಗಲಿದೆ ಎಂದಿದ್ದರು.

ಲೇಖಕ ಪುರುಷೋತ್ತಮ ಬಿಳಿಮಲೆಯರವ ಬಗ್ಗೆ ನನಗೆ ಗೌರವವಿದೆ, ಅವರ ಅಭಿಪ್ರಾಯ ಹೇಳುವ ಹಕ್ಕು ಅವರಿಗಿದೆ. ಪರ್ಯಾಯ ಸಾಹಿತ್ಯ ಸಮ್ಮೇಳನ ಮಾಡುವ ಅಧಿಕಾರವೂ ಅವರಿಗಿದೆ. ಭಿನ್ನಾಭಿಪ್ರಾಯ ಹೊಂದಿರುವವರು ಸಮ್ಮೇಳನಕ್ಕೆ ಬರಬೇಕು. ಈ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಬೇಕು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಅವನ್ನು ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿದ್ದಾರೆ.

No Comments

Leave A Comment