Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಆರು ಮಂದಿ ಸಾವು, ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಣೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ. ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಬಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆಲದ ಮರಕ್ಕೆ ಬೊಲೆರೊ ವಾಹನ ಡಿಕ್ಕಿಯಾಗಿದೆ. ಈ ಪರಿಣಾಮ 6 ಜನ ಮೃತಪಟ್ಟಿದ್ದಾರೆ.

ಹನುಮವ್ವ(25), ದೀಪಾ(31), ಸವಿತಾ(17), ಸುಪ್ರಿತಾ(11), ಮಾರುತಿ(42), ಇಂದಿರವ್ವಾ(24) ಮೃತ ದುರ್ದೈವಿಗಳಾಗಿದ್ದಾರೆ. ಇವರೆಲ್ಲರೂ ಹುಲಕುಂದ ಗ್ರಾಮದಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ. ಅಪಘಾತಕ್ಕೀಡಾದ ಪಿಕ್ ಅಪ್ ಬೊಲೆರೊ ವಾಹನದಲ್ಲಿ 23 ಜನ ಪ್ರಯಾಣಿಸುತ್ತಿದ್ದರು. ಈ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಒಬ್ಬರು ಮೃತಪಟ್ಟಿದ್ದಾರೆ. ಸದ್ಯ ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಾದಯಾತ್ರೆ ಹೊರಟವರು ಯಮನ ಪಾದ ಸೇರಿದರು: ಮೃತರು ಯಾತ್ರಾರ್ಥಿಗಳಾಗಿ ನಡೆದುಕೊಂಡು ಯಲ್ಲಮ್ಮ ದೇವಸ್ಥಾನಕ್ಕೆ ಹೊರಟ್ಟಿದ್ದರು. ಈ ವೇಳೆ ಪಾದಯಾತ್ರೆ ಹೊರಟವರನ್ನು ನಿಲ್ಲಿಸಿ ಬೊಲೆರೊ ವಾಹನದ ಚಾಲಕ ಡ್ರಾಪ್ ಕೊಡುವುದಾಗಿ  ಹತ್ತಿಸಿಕೊಂಡಿದ್ದಾನೆ. ಯಾತ್ರಾರ್ಥಿಗಳು ವಾಹನ ಹತ್ತಿದ ಕೆಲವೇ ನಿಮಿಷಗಳಲ್ಲಿ ಅಪಘಾತವಾಗಿ ಆರು ಜನ ಮೃತಪಟ್ಟಿದ್ದಾರೆ.

ರಾಜ್ಯ ಸರ್ಕಾರ ಪರಿಹಾರ: ಮೃತಪಟ್ಟ ಯಾತ್ರಿಗರಿಗೆ ಕಂಬನಿ ಮಿಡಿದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ತಕ್ಷಣವೇ ಪರಿಹಾರ ಒದಗಿಸುವ ಕೆಲಸ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

No Comments

Leave A Comment