Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ: ಕಳವಳ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿ

ವಿಜಯಪುರ: ಖ್ಯಾತ ಪ್ರವಚನಕಾರರು, ನಡೆದಾಡುವ ದೇವರಂದೆ ಇಡೀ ವಿಶ್ವದಾದ್ಯಂತ ಪ್ರಖ್ಯಾತಿಗೆ ಕಾರಣರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ  ಎಂದು ಭಾನುವಾರ ತಿಳಿದುಬಂದಿದೆ.

ಕಳೆದ ಒಂದು ವಾರಕ್ಕಿಂತಲೂ ಹೆಚ್ಚು ದಿನದಿಂದ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರುವ ಸ್ವಾಮೀಜಿಗಳ ದರ್ಶನಕ್ಕಾಗಿ ನಿತ್ಯ ಸಾವಿರಾರು ಭಕ್ತರು, ಜನಪ್ರತಿನಿಧಿಗಳು, ಸಚಿವರು, ಶಾಸಕರುಗಳು ಆಶ್ರಮಕ್ಕೆ ಭೇಟಿ ನೀಡುತ್ತಿದ್ದಾರೆ.

ಶ್ರೀಗಳ ಅನಾರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಬಿಎಲ್​ಡಿಇ ಸಂಸ್ಥೆಯ ಬಿ. ಎಂ ಪಾಟೀಲ್ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ವೈದ್ಯರ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದೆ. ಯುರೋಲಾಜಿಸ್ಟ್​​ ಡಾ. ಎಸ್​.ಬಿ. ಪಾಟೀಲ್, ಬಿ‌.ಎಂ ಪಾಟೀಲ್ ಮೆಡಿಕಲ್ ಕಾಲೇಜ್​ ಪ್ರಾಂಶುಪಾಲರಾದ ಡಾ. ಅರವಿಂದ ಪಾಟೀಲ್, ಡಾ. ಮಲ್ಲಣ್ಣ ಮೂಲಿಮನಿ ಎಂಡಿ ಅವರ ನೇತೃತ್ವದಲ್ಲಿ ಶ್ರೀಗಳಿಗೆ‌ ಚಿಕಿತ್ಸೆ ನೀಡಲಾಗುತ್ತಿದೆ.

ಈ ನಡುವೆ ಶ್ರೀಗಳ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ವಾಮೀಜಿಗಳ ದರ್ಶನಕ್ಕೆ ಸಿಎಂ ಬೊಮ್ಮಾಯಿ ಅವರು ಬೆಂಗಳೂರಿನಿಂದ ವಿಜಯಪುರಕ್ಕೆ ಭೇಟಿ ನೀಡಿದ್ದು, ಶ್ರೀಗಳ ದರ್ಶನ ಪಡೆದುಕೊಂಡಿದ್ದಾರೆ.

ಶ್ರೀಗಳ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ಕಳವಳಕಾರಿ ಆಗಿದ್ದರಿಂದ ನಾನು ಬಂದಿದ್ದೇನೆ. ಶ್ರೀಗಳ ಆರೋಗ್ಯ ವಿಚಾರವನ್ನು ನಾನು ಕಳೆದ ಒಂದು ವಾರದಿಂದ ನಿತ್ಯ ಪೋನ್​ನಲ್ಲಿ ವಿಚಾರಿಸುತ್ತದ್ದೇನೆ. ಎರಡು ದಿನಗಳ ಹಿಂದೆ ಕರೆ ಮಾಡಿ ಮಾತನಾಡಿದಾಗ ಶ್ರೀಗಳು ಒಂದೆರಡು ಮಾತಾಡಿದ್ದರು. ಶ್ರೀಗಳ ಆರೋಗ್ಯ ಆಶ್ಚರ್ಯಕರ ರೀತಿಯಲ್ಲಿ ಸುಧಾರಿಸಿದೆ. ಈಗ ಪ್ರಧಾನಿಗಳು ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಕುರಿತು ಜೋಶಿ ಅವರೊಂದಿಗೆ ಮಾತನಾಡಿದ್ದಾರೆ‌. ಶ್ರೀಗಳು ಆದಷ್ಟು ಬೇಗ ಗುಣ ಆಗಲಿ ಎಂದು ನರೇಂದ್ರ ಮೋದಿ ಅವರು ಹಾರೈಸಿದ್ದಾರೆ. ಶ್ರೀಗಳ ಬದುಕೇ ಮಾದರಿಯಾಗಿದೆ. ನಡೆ, ನುಡಿ ನಮ್ಮೆಲ್ಲರಿಗೂ ದಾರಿ ದೀಪವಾಗಿದೆ ಎಂದು ಹೇಳಿದರು.

ವಿಜಯಪುರ ಪುಣ್ಯ ಭೂಮಿಯನ್ನು ಅವರ ಕರ್ಮ ಭೂಮಿ ಮಾಡಿಕೊಂಡಿದ್ದು ನಮ್ಮ ಪುಣ್ಯವಾಗಿದೆ. ಸಿದ್ದೇಶ್ವರ ಸ್ವಾಮಿಗಳು ನಡೆದಾಡುವ ದೇವರು. ಅವರ ಆಚರಣೆ, ವಿಚಾರ ಎಲ್ಲವೂ ಪರಿಶುದ್ಧವಾಗಿದೆ. ಶ್ರೀಗಳು ಅಪರೂಪದ ತತ್ವಜ್ಞಾನಿಯಾಗಿದ್ದಾರೆ, ಬದುಕಿನ ಸೂಕ್ಷ್ಮತೆಯನ್ನು ನಿಖರವಾಗಿ ಸ್ಪಷ್ಟವಾಗಿ ತಿಳಿದುಕೊಂಡವರು ಸಿದ್ದೇಶ್ವರ ಸ್ವಾಮೀಜಿ. ಸಾಮಾನ್ಯ ಮನುಷ್ಯನ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಕೊಟ್ಟ ಮಹಾತ್ಮರು. ಅವರ ಮಾತುಗಳನ್ನು ಕೇಳಿ ನಾವೆಲ್ಲ ಬದಲಾಗಿದ್ದೇವೆ. ಹಲವಾರು ಬಾರಿ ಶ್ರೀಗಳು ರೈತರ ಬಗ್ಗೆ, ನೀರಾವರಿ ಬಗ್ಗೆ, ತತ್ವಗಳ ಬಗ್ಗೆ ಗಂಟೆಗಟ್ಟಲೇ ಚರ್ಚೆ ಮಾಡಿದ್ದೇವೆ, ಆಗ ಸಮಯ ಹೋಗಿದ್ದೇ ಗೊತ್ತಾಗುತ್ತಿರಲಿಲ್ಲಾ. ನನ್ನನ್ನು ಅತ್ಯಂತ ಸಮಾಧಾನವಾಗಿ ಪ್ರೀತಿ ವಿಶ್ವಾಸದಿಂದ ಕಂಡಿದ್ದಾರೆ. ನಾನು ಸಿಎಂ ಆದ ಸಂದರ್ಭದಲ್ಲಿ ಫೋನ್ ಮಾಡಿದಾಗ ಬಹಳ ಸಂತೋಷವಾಗಿದೆ, ನಿನ್ನಿಂದ ನಾಡಿಗೆ ಒಳ್ಳೇದಾಗುತ್ತೆ ಎಂದು ಆಶೀರ್ವದಿಸಿದ್ದರು ಎಂದು ತಿಳಿಸಿದರು.

ಅವರ ಎಲ್ಲಾ ವೈದ್ಯಕೀಯ ವರದಿ​ಗಳು ಸಾಮಾನ್ಯವಾಗಿವೆ. ಅವರು ಇನ್ನಷ್ಟು ದಿನ ಬದುಕಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುವಂತಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಸಿದ್ದೇಶ್ವರ ಸ್ವಾಮೀಜಿ ಧರ್ಮದ ಚೌಕಟ್ಟನ್ನು ಮೀರಿ ತತ್ವಗಳ‌ ಮೇಲೆ ನಿಂತವರು, ಸಮಾಜದಲ್ಲಿ ಮೌಲ್ಯಗಳನ್ನು ಜೀವಂತವಾಗಿಡಲು ಶ್ರೀಗಳ ಅವಶ್ಯಕತೆ ಇದೆ ಎಂದರು.

ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ವೈರಾಗ್ಯ ಮೂರ್ತಿ ನಡೆದಾಡುವ ದೇವರು ನಮ್ಮೆಲ್ಲರಿಗೂ ಒಂದಲ್ಲಾ ಒಂದು ರೀತಿ ಮಾರ್ಗದರ್ಶನ ಮಾಡಿ ಪ್ರೇರಣೆ ನೀಡಿದವರು ಸಿದ್ದೇಶ್ವರ ಸ್ವಾಮೀಜಿ. ಸಾರ್ವಜನಿಕ ಬದುಕಿನ ಬಗ್ಗೆ ಸಾರ್ವಜನಿಕ ಬದುಕಿನ ಮೌಲ್ಯಗಳನ್ನು ಕಲಿಸಿದ ಗುರುಗಳು. ನಡೆದಂತೆ ನುಡಿದು ಇತರರಿಗೆ ಆದರ್ಶ ಪ್ರಾಯವಾದಂತಹ ಜೀವನವನ್ನು ನಡೆಸುತ್ತಿದ್ದಾರೆ. ಅವರ ಆರೋಗ್ಯ ಕಳವಳಕಾರಿಯಾಗಿದೆ ಎಂದು ಕೆಲ ದಿನಗಳಿಂದ ನಮಗೆ ಗೊತ್ತಾಗಿದೆ. ಸ್ವಾಮೀಜಿಗಳ ಆಕ್ಸಿಜನ್ ರೇಟ್ ಕಡಿಮೆಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ ಕಾರಣ ನಾವು ಧಾವಿಸಿ ಬಂದಿದ್ದೇವೆ. ಶ್ರೀಗಳ ಆರೋಗ್ಯದ ಬಗ್ಗೆ ಪ್ರಧಾನಿ ಮೋದಿ ಅವರು ವಿಚಾರಿಸಿದ್ದಾರೆ ಎಂದು ಹೇಳಿದರು.

No Comments

Leave A Comment