Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಹಿಂದುಳಿದ ವರ್ಗ ಆಯೋಗದ ಮಧ್ಯಂತರ ವರದಿ: ಕಾನೂನಾತ್ಮಕ ಚರ್ಚೆ ನಂತರ ತೀರ್ಮಾನ- ಸಿಎಂ ಬೊಮ್ಮಾಯಿ

ಬೆಳಗಾವಿ: ಹಿಂದುಳಿದ ವರ್ಗ ಆಯೋಗದ ಮಧ್ಯಂತರ ವರದಿ ಕುರಿತು ಶೀಘ್ರವೇ ಕಾನೂನಾತ್ಮಕ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುವರ್ಣಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ,  ಇಂದು ಬೆಳಿಗ್ಗೆ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಭೇಟಿಯಾಗಿ ಮಧ್ಯಂತರ ವರದಿ ನೀಡಿದ್ದಾರೆ. ಈ ವರದಿಯನ್ನು ಪರಿಶೀಲಿಸಿ, ಕಾನೂನು ಮತ್ತುಸಂಸದೀಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ನಾಗಮೋಹನ್ ದಾಸ್ ವರದಿ ಬಂದು ಒಂದು ವರ್ಷದ ನಂತರ ವಿವರಗಳನ್ನು ನೀಡಲಾಗಿತ್ತು.  ಸದಾಶಿವ ಆಯೋಗ ವರದಿ ಬಂದು ಹತ್ತು ವರ್ಷವಾಗಿದ್ದು, ಸರ್ಕಾರದ ಒಪ್ಪಿಗೆ ಪಡೆದಿಲ್ಲವಾದ್ದರಿಂದ ಇನ್ನೂ ವಿವರ ನೀಡಲಾಗಿಲ್ಲ. ಕಾಂತರಾಜು ವರದಿ ಇನ್ನೂ ಆಯೋಗದಲ್ಲೇ ಇದ್ದು, ಸರ್ಕಾರದ ಮಟ್ಟಕ್ಕೆ ಬಂದಿಲ್ಲವಾದ್ದರಿಂದ ವಿವರ ನೀಡಲಾಗಿಲ್ಲ. ಆದರೆ ಹಿಂದುಳಿದ ವರ್ಗದ ಆಯೋಗದ ಮಧ್ಯಂತರ ವರದಿ ಬಗ್ಗೆ ಕಾನೂನು ರೀತ್ಯ  ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಅವಧಿ ಮುನ್ನ ಚುನಾವಣೆಯ ಪ್ರಸ್ತಾವನೆ ಇಲ್ಲ : ಅವಧಿಗೂ ಮುನ್ನವೇ ಚುನಾವಣೆ ಮಾಡುವ ಯಾವುದೇ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ಸ್ಪಷ್ಟೀಕರಿಸುತ್ತೇನೆ ಎಂದರು.

ಸಚಿವ ಸಂಪುಟ ವಿಸ್ತರಣೆ : ಮಾಜಿ ಸಚಿವರಾದ ಈಶ್ವರಪ್ಪಹಾಗೂ ರಮೇಶ ಜಾರಕಿಹೊಳಿಯವರು ನಿನ್ನೆ ಭೇಟಿಯಾಗಿದ್ದು, ತಮ್ಮನ್ನು ಸಚಿವ ಸಂಪುಟದಲ್ಲಿ ವಿಸ್ತರಿಸುವ ಬಗ್ಗೆ ಕೇಳಿದ್ದರು. ನಾನು ನವದೆಹಲಿಗೆ ಹೋದಾಗ ಈ ಬಗ್ಗೆ ಮಾಡಿರುವ ಚರ್ಚೆಯ ವಿವರಗಳನ್ನು ಅವರಿಗೆ ನೀಡಿದ್ದೇನೆ. ಇಷ್ಟರಲ್ಲಿಯೇ ಮತ್ತೊಮ್ಮೆ ನವದೆಹಲಿಗೆ ಭೇಟಿ ನೀಡಿ ಈ ವಿಚಾರ ಹಾಗೂ ಇನ್ನಿತರ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ  ನಡೆಸಲಾಗುವುದು. ಈಗಾಗಲೇ ಸಚಿವ ಸಂಪುಟ ವಿಸ್ತರಣೆ, ಅದರ ಅಗತ್ಯತೆಗಳ ಬಗ್ಗೆ ವಿವರಿಸಲಾಗಿದೆ. ಈ ಬಾರಿ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನವನ್ನು ನೀಡಲಿದೆ ಎಂಬ ವಿಶ್ವಾಸವಿದೆ ಎಂದರು.

ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ  ತನ್ನ ನಿಲುವನ್ನು ಗಟ್ಟಿಯಾಗಿ ಮಂಡಿಸಲಿದೆ: ಮಹಾರಾಷ್ಟ್ರದಿಂದ ನೀರು ಬಿಡುವ ಬಗ್ಗೆ ಯೋಚಿಸಬೇಕಾಗುತ್ತದೆ ಎಂಬ ಮಹಾರಾಷ್ಟ್ರ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈ ಹೇಳಿಕೆಯನ್ನು ವಿಪಕ್ಷ ಸದಸ್ಯರು ಹೇಳಿದ್ದು, ಎಲ್ಲ ನದಿಗಳು ಮೂರ್ನಾಲ್ಕು ರಾಜ್ಯಗಳಲ್ಲಿ ಹರಿಯುತ್ತಿದೆ. ಅಂತರರಾಜ್ಯ ನದಿಗಳು ಅಂತರರಾಜ್ಯ ಜಲ ವಿವಾದ  ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.  ರಾಜ್ಯಗಳ ನಡುವೆ ನಿಲುವುಗಳಲ್ಲಿ ವ್ಯತ್ಯಾಸವಿದ್ದರೂ,  ಇಂತಹ ಹೇಳಿಕೆಗಳನ್ನು ನೀಡಬಾರದು. ಇಂತಹ ಉದ್ಘಟತನದ ಮಾತುಗಳಿಂದ ಏನೂ ಪ್ರಯೋಜನವಿಲ್ಲ. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ಕಾರ್ಯಗತ ಮಾಡುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸಂಜಯ್ ರಾವತ್  ಚೀನಾ ಸೇನೆ ಭಾರತಕ್ಕೆ ನುಗ್ಗಿದಂತೆ, ಬೆಳಗಾವಿಗೆ ನುಗ್ಗುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ,. ಸಂಜಯ್ ರಾವತ್ ಅವರ ಪ್ರಾಮುಖ್ಯತೆ ಏನು ಎಂದು ಎಲ್ಲರಿಗೂ ತಿಳಿದಿದೆ. ಅವರು ಸದಾ ಪ್ರಚೋದನಕಾರಿ ಹೇಳಿಕೆಗಳನ್ನೇ ನೀಡುತ್ತಾರೆ. ಅವರು ಚೈನಾದಂತೆ ಬಂದರೆ ಕನ್ನಡಿಗರು ಭಾರತೀಯ ಸೈನ್ಯದಂತೆ ಅವರನ್ನು ಹಿಮ್ಮೆಟ್ಟಿಸುತ್ತೇವೆ ಎಂದರು.

No Comments

Leave A Comment