ಉಡುಪಿ: ಮಂಗಳಮುಖಿಯರಿಂದ ಅನೈತಿಕ ದಂಧೆ – ಕಾರ್ಯಾಚರಣೆಗೆ ಇಳಿದ ಎಸ್ಪಿ
ಉಡುಪಿ, ಡಿ 16: ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪ ಮಂಗಳಮುಖಿಯರು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಕುರಿತ ದೂರಿನ ಹಿನ್ನೆಲೆಯಲ್ಲಿ ಡಿ.16ರಂದು ತಡರಾತ್ರಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚಿಂದ್ರ ಸ್ವತಃ ತಾವೇ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಇಬ್ಬರು ಪಿಂಪ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಗರದ ಸಿಟಿ ಬಸ್ ನಿಲ್ದಾಣ ಹಾಗೂ ಸರ್ವಿಸ್ ನಿಲ್ದಾಣದ ಸಮೀಪ ಅನೈತಿಕ ದಂಧೆಯಲ್ಲಿ ತೊಡಗಿಸಿಕೊಂಡಿರುವ ಕೆಲವು ಮಂಗಳಮುಖಿಯರು, ವಾಹನಗಳನ್ನು ಅಡ್ಡ ಹಾಕಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಾರೆ, ದಾರಿದೀಪವನ್ನು ಒಡೆದು ಹಾಕಿದ್ದಾರೆ ಮತ್ತು ಜನರಿಂದ ಹಣ ವಸೂಲಿ ಮಾಡುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಎಸ್ಪಿ ಈ ಕಾರ್ಯಾಚರಣೆಗೆ ಇಳಿದಿದ್ದರು.
ಸ್ವತಃ ಎಸ್ಪಿಯವರೇ ಸ್ಥಳಕ್ಕೆ ಆಗಮಿಸಿ ಮಂಗಳಮುಖಿಯನ್ನು ಅಲ್ಲಿಂದ ತೆರವುಗೊಳಿಸಲು ಮುಂದಾದರು. ಎಸ್ಪಿ ಎಂಬುದನ್ನು ತಿಳಿಯದ ಕೆಲವು ಮಂಗಳಮುಖಿಯರು ಎಸ್ಪಿ ಜೊತೆ ವಾಗ್ವಾದಕ್ಕೆ ಇಳಿದು ಅವಾಚ್ಯ ಶಬ್ದಗಳಿಂದ ಬೈದರೆನ್ನಲಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನು ಚದುರಿಸಿದರು. ಈ ವೇಳೆ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದೇ ವೇಳೆ ಗ್ರಾಹಕರನ್ನು ರಿಕ್ಷಾದಲ್ಲಿ ಕರೆ ತಂದು ಅನೈತಿಕ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಇಬ್ಬರು ಪಿಂಪ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಅವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ