ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಭೂಪೇಂದ್ರ ಪಟೇಲ್ ಆಯ್ಕೆ, ಎರಡನೇ ಬಾರಿ ಗುಜರಾತ್ ಸಿಎಂ
ಅಹಮದಾಬಾದ್: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶನಿವಾರ ಮರು ಆಯ್ಕೆಯಾಗಿದ್ದು, ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.
ಇಂದು ಗಾಂಧಿನಗರದಲ್ಲಿರುವ ಬಿಜೆಪಿ ರಾಜ್ಯ ಕೇಂದ್ರ ಕಚೇರಿ ‘ಕಮಲಂ’ನಲ್ಲಿ ನಡೆದ ನೂತನ ಶಾಸಕರ ಸಭೆಯಲ್ಲಿ
60 ವರ್ಷದ ಪಟೇಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು.
ಪಕ್ಷದ ಕೇಂದ್ರ ವೀಕ್ಷಕರಾಗಿ ಬಿಜೆಪಿಯ ಹಿರಿಯ ನಾಯಕರಾದ ರಾಜನಾಥ್ ಸಿಂಗ್, ಬಿ ಎಸ್ ಯಡಿಯೂರಪ್ಪ ಮತ್ತು ಅರ್ಜುನ್ ಮುಂಡಾ ಅವರು ಸಭೆಯಲ್ಲಿ ಹಾಜರಿದ್ದರು.
ಭೂಪೇಂದ್ರ ಪಟೇಲ್ ಅವರು ಸೋಮವಾರ ಎರಡನೇ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಈಗಷ್ಟೇ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 156 ಸ್ಥಾನಗಳನ್ನು ಪಡೆಯುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ.