ಮತದಾರರ ಮಾಹಿತಿ ಕಳವು ಪ್ರಕರಣ: ಬಿಬಿಎಂಪಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು
ಬೆಂಗಳೂರು: ಮತದಾರರ ಮಾಹಿತಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ (ಸಿಇಸಿ) ಹಿರಿಯ ಅಧಿಕಾರಿಗಳು ಗುರುವಾರ ಬೆಂಗಳೂರಿಗೆ ಭೇಟಿ ನೀಡಿ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಉಪಚುನಾವಣಾ ಆಯುಕ್ತ ಅಜಯ್ ಭಾದೂ ಮತ್ತು ಕಾರ್ಯದರ್ಶಿ ಬಿ.ಸಿ.ಪಾತ್ರ ಅವರು ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಭಾದೂ ಅವರ ನಿರ್ದೇಶನದ ಆಧಾರದ ಮೇಲೆ, ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ಬೆಂಗಳೂರು ಮತ್ತು ಇತರ ಕೆಲವು ಕ್ಷೇತ್ರಗಳ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾ ನೋಂದಣಾಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರ್ನಾಥ್ ಅವರು ತಮ್ಮ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದು, ಚಿಲುಮೆ ಎನ್‌ಜಿಒ ವಿರುದ್ಧ ಇತ್ತೀಚಿನ ವರದಿ ಮತ್ತು ನಕಲಿ ಐಡಿ ಕಾರ್ಡ್‌ಗಳನ್ನು ಪೂರೈಸಿದ ಬಿಬಿಎಂಪಿ ಕಂದಾಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡ ವರದಿ ಸೇರಿದಂತೆ ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಈಗಾಗಲೇ ಮೂವರು ಕಂದಾಯ ಅಧಿಕಾರಿಗಳನ್ನು (ಆರ್‌ಒಗಳು), ಭೀಮಾ ಶಂಕರ್, ಚಂದ್ರಶೇಖರ್ ಮತ್ತು ಸುಹೇಲ್ ಎಸ್ ಅವರನ್ನು ಅಮಾನತುಗೊಳಿಸಿದೆ. ಹಗರಣದಲ್ಲಿ ಮತ್ತಷ್ಟು ಅಧಿಕಾರಿಗಳು ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರು ನಕಲು ಮಾಡಿರುವುದನ್ನು ಪರಿಶೀಲಿಸುವಂತೆ ದೆಹಲಿಯ ಅಧಿಕಾರಿಗಳು ಪಾಲಿಕೆಗೆ ಸೂಚಿಸಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂಲಗಳು ತಿಳಿಸಿವೆ.
“ಹೆಚ್ಚಿನ ಸಂಖ್ಯೆಯ ಯುವ ಮತ್ತು ಮೊದಲ ಬಾರಿಗೆ ಮತದಾರರನ್ನು ಪಟ್ಟಿಗೆ ಸೇರಿಸಲು ನಮಗೆ ತಿಳಿಸಲಾಗಿತ್ತು. ಈ ವಿಚಾರವನ್ನು ಆಯೋಗಕ್ಕೆ ತಿಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.