Log In
BREAKING NEWS >
ನವೆ೦ಬರ್ 28ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹಮಹೋತ್ಸವ ಆರ೦ಭ....ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಮಂಗಳೂರು ಆಟೋ ಸ್ಫೋಟ; ಟಾರ್ಗೆಟ್ ಸಿಎಂ?, ಕುಕ್ಕರ್ ನಲ್ಲಿ ಟೈಮ್ ಬಾಂಬ್, ಶಂಕಿತನ ಗುರುತು ಪತ್ತೆ, ಕೊಯಮತ್ತೂರು ಸ್ಪೋಟಕ್ಕೂ ಲಿಂಕ್!

ಮಂಗಳೂರು: ಮಂಗಳೂರು ಆಟೋ ಸ್ಫೋಟ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು ಬೆಳಗ್ಗೆ ಸ್ವತಃ ಡಿಜಿಪಿ ಪ್ರವೀಣ್ ಸೂದ್ ಅವರು ಉಗ್ರ ಕೃತ್ಯ ಎಂದು ಸ್ಪಷ್ಟ ಪಡಿಸಿದ್ದು, ಟಾರ್ಗೆಟ್ ಸಿಎಂ ಬೊಮ್ಮಾಯಿ ಆಗಿದ್ದರೇ ಎಂಬ ಅನುಮಾನ ಮೂಡುತ್ತಿದೆ.

ಈ ಸಂಬಂಧ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮಂಗಳೂರಿನಲ್ಲಿರುವಾಗಲೇ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದ ವಿಚಾರ ಈಗ ಬಯಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಪಂಪ್‌ವೆಲ್ ವೃತ್ತದ ಬಳಿ ಈ ಕುಕ್ಕರ್ ಬಾಂಬ್ ಸ್ಫೋಟಿಸಲು (Cooker Blast) ಸಂಚು ರೂಪಿಸಲಾಗಿತ್ತು ಎಂಬ ಅನುಮಾನ ಎದ್ದಿದೆ. ಪಂಪ್‌ವೆಲ್ ಬಳಿ ಜನ ಸಂಚಾರ ಜಾಸ್ತಿ ಇರುತ್ತದೆ. ಕೇರಳಕ್ಕೆ ಹೋಗುವ ವಾಹನಗಳು ಈ ರಸ್ತೆಯ ಮೂಲಕ ಸಾಗುತ್ತದೆ. ಅಷ್ಟೇ ಅಲ್ಲದೇ ಹಾಸನ, ಪುತ್ತೂರು ಇತ್ಯಾದಿ ಕಡೆಗೆ ಹೋಗುವ ವಾಹನಗಳು ಇಲ್ಲೇ ಸಾಗುತ್ತದೆ. ಈ ಕಾರಣಕ್ಕೆ ಇಲ್ಲಿ ಸ್ಫೋಟಿಸಲು ದುಷ್ಕರ್ಮಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಕುಕ್ಕರ್ ನಲ್ಲಿ ಟೈಮ್ ಬಾಂಬ್?
ಇನ್ನು ಸ್ಫೋಟವಾದ ಆಟೋದಲ್ಲಿ ಕುಕ್ಕರ್ ಪತ್ತೆಯಾಗಿದ್ದು ಕುಕ್ಕರ್ ನಲ್ಲಿ ಬ್ಯಾಟರಿ, ವಯರ್, ನಟ್, ಬೋಲ್ಟ್, ಸರ್ಕ್ಯೂಟ್ ರೀತಿಯ ವಸ್ತುಗಳು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಟೈಮ್ ಬಾಂಬ್ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಟೈಮರ್ ಸೆಟ್ ಮಾಡಿ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ ಯಾವುದೋ ದೋಷದಿಂದ ಮಾರ್ಗಮಧ್ಯೆಯೇ ಬಾಂಬ್ ಸ್ಫೋಟಗೊಂಡಿದೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಶಂಕಿತನ ಗುರುತು ಪತ್ತೆ
ಇನ್ನು ಮಂಗಳೂರು ಕಂಕನಾಡಿ ಸಮೀಪ ಆಟೊದಲ್ಲಿ ಕುಕ್ಕರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿತನೋರ್ವನ ಗುರುತು ಪತ್ತೆ ಮಾಡಿದ್ದು, ಮೈಸೂರು ಲೋಕನಾಯಕ ನಗರದ 10ನೇ ಕ್ರಾಸ್‌ನಲ್ಲಿ ಶಂಕಿತ ವ್ಯಕ್ತಿಯು ಮೋಹನ್ ಕುಮಾರ್ ಅವರ ಕಟ್ಟಡದಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಬಾಡಿಗೆ ಪಡೆಯಲು ಮಾಡಿಕೊಂಡಿದ್ದ ಕರಾರು ಪತ್ರದಲ್ಲಿ ತನ್ನ ಹೆಸರನ್ನು ಪ್ರೇಮ್ ರಾಜ್ ಎಂದು ನಮೂದಿಸಿದ್ದ. ತನ್ನ ಮೂಲ ಊರು ಮತ್ತು ವಿಳಾಸವಾಗಿ ಹುಬ್ಬಳ್ಳಿಯ ಪ್ರದೇಶವೊಂದನ್ನು ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರೂಮಿನಲ್ಲಿ ಸ್ಫೋಟಕ ವಸ್ತುಗಳು
ಆತನ ಕೊಠಡಿ ಪ್ರವೇಶಿಸಿದ ಪೊಲೀಸರಿಗೆ ಸ್ಫೋಟಕ್ಕೆ ಬಳಸುವ ಹಲವು ವಸ್ತುಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ. ಸರ್ಕೀಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮೊಬೈಲ್, ಮರದಹೊಟ್ಟು, ಅಲ್ಯುಮಿನಿಯಂ, ಮಲ್ಟಿಮೀಟರ್, ವೈರ್​ಗಳು, ಮಿಕ್ಸರ್ ಜಾರ್​ಗಳು, ಪ್ರೆಶರ್ ಕುಕ್ಕರ್ ಸೇರಿದಂತೆ ಹಲವು ಸ್ಪೋಟಕಗಳು ಪತ್ತೆಯಾಗಿವೆ. ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಫಿನೋ ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಯಾಣಿಕ ನಕಲಿ ಗುರುತಿನ ಚೀಟಿ
ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದು, ಅವರ ದೇಹ ಶೇ.50 ರಷ್ಟು ದೇಹ ಸುಟ್ಟು ಹೋಗಿದೆ. ಆಧಾರ್ ಕಾರ್ಡ್ನಲ್ಲಿ ಹುಬ್ಬಳ್ಳಿಯ ಪ್ರೇಮ್ ರಾಜ್ ಹೆಸರಿನ ವಿಳಾಸವಿರುವುದು ಪತ್ತೆಯಾಗಿದೆ. ಆದರೆ ಇದು ನಕಲಿ ಐಡಿ ಕಾರ್ಡ್ ಎಂಬುದು ದೃಢಪಟ್ಟಿದೆ. ಆತನ ಹೇಳಿಕೆ ಆಧರಿಸಿ ಪೊಲೀಸರ ತಂಡ ಮೈಸೂರಿನಲ್ಲಿ ತನಿಖೆ ನಡೆಸುತ್ತಿದೆ. ಪ್ರೇಮ್ ರಾಜ್ ತನ್ನ ಅಣ್ಣ ಎಂದು ತಿಳಿಸಿ ಬಾಬುರಾವ್ ಎಂಬವರ ನಂಬರ್ ನೀಡಿದ್ದಾನೆ. ಆದರೆ ಆ ನಂಬರ್‌ಗೆ ಕರೆ ಮಾಡಿದಾಗ ಪ್ರೇಮ್ ರಾಜ್ ತನ್ನ ಸಂಬಂಧಿಯೇ ಅಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಆತ ತನ್ನ ರೂಂನಲ್ಲಿದ್ದ. ಬೆಂಗಳೂರಿಗೆ ಹೋಗುತ್ತೇನೆ ಎಂದು ತಿಳಿಸಿದ್ದ. ಆತನ ಬಗ್ಗೆ ಬೇರೆ ಏನೂ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಟಾರ್ಗೆಟ್ ಸಿಎಂ?
ಸಿಎಂ ಬೊಮ್ಮಾಯಿ ಮಂಗಳೂರು ಭೇಟಿ ಬೆನ್ನಲ್ಲೇ ಸ್ಫೋಟ ಸಂಭವಿಸಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಶನಿವಾರ ಸ್ವಾತಂತ್ರ‍್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಲೋಕಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಆಗಮಿಸಿದ್ದರು. ಸ್ಫೋಟವನ್ನು ರಾಜ್ಯ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನಿಂದ ಮತ್ತಷ್ಟು ಬಾಂಬ್ ತಜ್ಞರ ತಂಡ ಘಟನಾ ಸ್ಥಳಗ್ಗೆ ಆಗಮಿಸಲಿದೆ. ಇಂದು ಮಂಗಳೂರಿಗೆ ಎನ್‌ಐಎ ತಂಡವೂ ಆಗಮಿಸುವ ಸಾಧ್ಯತೆಯಿದೆ.

ಕೊಯಮತ್ತೂರು ಸ್ಪೋಟಕ್ಕೂ ಲಿಂಕ್
ಇನ್ನು ಇದೇ ಪ್ರಯಾಣಿಕ ಈ ಹಿಂದೆ ತಮಿಳುನಾಡಿನ ಕೊಯಮತ್ತೂರಿಗೂ ಪ್ರಯಾಣಿಸಿದ್ದ ಕುರಿತು ಪೊಲೀಸರು ಮಾಹಿತಿ ಕಲೆಹಾಕಿದ್ದು, ಹೀಗಾಗಿ ಕಯಮತ್ತೂರು ಸ್ಫೋಟಕ್ಕೂ ಈ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಕಳೆದ ಅಕ್ಟೋಬರ್ 23ರಂದು ಬೆಳಗ್ಗೆ 4ರ ಹೊತ್ತಿನಲ್ಲಿ ಕಾರಿನಲ್ಲಿದ್ದ ಎಲ್ ಪಿಜಿ ಸಿಲಿಂಡರ್ ಸ್ಫೋಟವಾಗಿತ್ತು. ಈ ಘಟನೆಯಲ್ಲಿ 29 ವರ್ಷದ ಉಕ್ಕಡಂ ನಿವಾಸಿ ಚಾಲಕ ಜಮೇಷಾ ಮಬೀನ್ ಸಾವನ್ನಪ್ಪಿದ್ದರು.

ಸ್ಥಳಕ್ಕಾಗಮಿಸಿದ್ದ ಪೊಲೀಸರು ಸ್ಫೋಟಗೊಂಡ ಕಾರಿನ ಬಳಿ ಮುಬೀನ್ ದೇಹದ ಸುಟ್ಟ ಅವಶೇಷಗಳು, ನಜ್ಜುಗುಜ್ಜಾಗಿದ್ದ ಎಲ್‌ಪಿಜಿ ಸಿಲಿಂಡರ್, ಎರಡು ಇಂಚು ಉದ್ದದ ಕಬ್ಬಿಣದ ಮೊಳೆಗಳು, ಸಣ್ಣ ಗಾಜಿನ ಮಾರ್ಬಲ್‌ಗಳು ಮತ್ತು ಕಪ್ಪು ಪುಡಿಯಂತಹ ವಸ್ತುವನ್ನು  ವಶಪಡಿಸಿಕೊಂಡಿದ್ದರು. ಆಗಲೂ ಕೂಡ ಇದು ಭಯೋತ್ಪಾದಕ ಕೃತ್ಯ ಎಂದು ಆರೋಪಿಸಿ ಕೇಂದ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕೆಂದು ವಿರೋಧ ಪಕ್ಷ ಬಿಜೆಪಿ ಒತ್ತಾಯಿಸಿತ್ತು.  ಆರಂಭದಲ್ಲಿ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರಾದರೂ ಬಳಿಕ ಸರ್ಕಾರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿತ್ತು. ಇದೀಗ ಈ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದೆ.

No Comments

Leave A Comment