ಶಿಕ್ಷಣ ವಿಚಾರದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ: ವಿವೇಕ ಶಾಲಾ ಕೊಠಡಿಗಳ ಯೋಜನೆಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ಕಲಬುರಗಿ: ಕಲಬುರಗಿ ತಾಲ್ಲೂಕಿನ ಮಡಿಹಾಳ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಆಯೋಜಿಸಿದ್ದ ವಿವೇಕ ಶಾಲಾ ಕೊಠಡಿಗಳ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಇದು ಸದಾ ಕಾಲ ನೆನಪಿಡುವ ದಿನವಾಗಿದೆ. ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವ ಮಹತ್ವದ ಕೆಲಸಕ್ಕೆ ನಾವು ಮುಂದಡಿ ಇಟ್ಟಿದ್ದೇವೆ. ಕರ್ನಾಟಕ ಉದಯವಾದ ಮೇಲೆ ಒಂದೇ ವರ್ಷದಲ್ಲಿ ಇಷ್ಟೊಂದು ಕೊಠಡಿ ನಿರ್ಮಿಸುವ ಕೆಲಸ ಎಂದಿಗೂ ನಡೆದಿರಲಿಲ್ಲ. ಆದರೆ, ನಮ್ಮ ಸರ್ಕಾರವು ಒಂದೇ ಬಾರಿಗೆ 7,601 ಕೊಠಡಿ ನಿರ್ಮಿಸಲು ಮುಂದಾಗಿದೆ. ಇದೊಂದು ದಾಖಲೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಎರಡು ಸಾವಿರ ಕೊಠಡಿಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರ್ಮಿಸಲಿದ್ದೇವೆ. ಒಂದು ಸಲ ಒಳ್ಳೆಯ ಕೆಲಸಗಳು ಆರಂಭವಾದರೆ ಅದು ನಿರಂತರವಾಗಿ ನಡೆಯುತ್ತದೆ. ಮುಂದಿನ ಅವಧಿಗೂ ನಮ್ಮದೇ ಸರ್ಕಾರ ಬರುತ್ತದೆ. ನಾಡಿನ ಕಟ್ಟಕಡೆಯ ವ್ಯಕ್ತಿಯ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಲು ನಾವು ಶ್ರಮಿಸುತ್ತೇವೆ ಎಂದು ಆಶ್ವಾಸನೆ ನೀಡಿದರು.
ಇದೇ ವೇಳೆ ರಾಜ್ಯದ ಸರ್ಕಾರಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರ ಕುರಿತು ಎದ್ದಿರುವ ವಿವಾದ ಕುರಿತು ಮಾತನಾಡಿ, ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಕೈಹಾಕಿದರೂ ಅದನ್ನು ವಿವಾದವಾಗಿಸಲು ಕೆಲವರು ಯತ್ನಿಸುತ್ತಾರೆ. ಹೀಗೆ ಟೀಕೆ ಮಾಡುವವರಿಗೆ ಅಭಿವೃದ್ಧಿ ಚಟುವಟಿಕೆಗಳು ಬೇಕಿಲ್ಲ. ಶಾಲಾ ಕೊಠಡಿಗಳ ನಿರ್ಮಾಣದಲ್ಲೂ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕೇಸರಿ ಎಂದರೆ ನಿಮಗೇಕೆ ಭಯ? ನಮ್ಮ ರಾಷ್ಟ್ರಧ್ವಜದಲ್ಲೂ ಕೇಸರಿ ಇದೆ. ಸ್ವಾಮಿ ವಿವೇಕಾನಂದರು ಕೂಡ ಕೇಸರಿ ಬಟ್ಟೆ ಹಾಕಿಕೊಳ್ಳುತ್ತಿದ್ದರು ಎಂದು ವಿವರಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ಸಿಎಂ ಬೊಮ್ಮಾಯಿ ಸಿಹಿ ತಿನ್ನಿಸಿದರು.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದಾಗಲೆಲ್ಲವೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ‘ವಿವೇಕ ಯೋಜನೆ’ಯು ಶಿಕ್ಷಣಕ್ಕೆ ಆದ್ಯತೆ ನೀಡುವ ಪ್ರಯತ್ನದ ಒಂದು ಭಾಗವಷ್ಟೇ ಆಗಿದೆ ಎಂದು ಹೇಳಿದರು.
ಮಕ್ಕಳಿಗೆ ವಿವೇಕಾನಂದರ ವಿಚಾರದ ಬಗ್ಗೆ ಪರಿಚಯವಾಗಬೇಕು. ಹೀಗಾಗಿ ವಿವೇಕ ಯೋಜನೆ ಎಂಬ ಹೆಸರನ್ನು ಇಡಲಾಗಿದೆ. ಎಲ್ಲಾ ತಾಲೂಕುಗಳಲ್ಲಿಯೂ ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸುತ್ತೇವೆ. ಮುಂದಿನ ತಿಂಗಳು 15 ಸಾವಿರ ಶಿಕ್ಷಕರಿಗೆ ನೇಮಕಾತಿ ಪತ್ರ ವಿತರಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರನ್ನು ನೇಮಿಸಲಾಗುವುದು ಎಂದು ತಿಳಿಸಿದರು.
ಮಕ್ಕಳಿಗೆ ಧ್ಯಾನ ಏಕೆ? ಯೋಗ ಏಕೆ ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಅವರ ಕೈಲಿ ಅಧಿಕಾರವಿದ್ದಾಗ ಅವರು ಕೇವಲ 4,000 ಕೊಠಡಿಗಳನ್ನು ನಿರ್ಮಿಸಿದ್ದರು. ಆದರೆ ಈಗ ನಾವು ಇದರ ದುಪ್ಪಟ್ಟು ಸಂಖ್ಯೆಯ ಕೊಠಡಿಗಳನ್ನು ನಿರ್ಮಿಸುತ್ತಿದ್ದೇವೆ. ವಿವೇಕ ಯೋಜನೆಯಡಿ ನಿರ್ಮಿಸುವ ಕೊಠಡಿಗಳಿಗೆ ಹೋದ ಮೇಲೆ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಬಲಿಷ್ಠವಾಗಬೇಕು. ವಿವೇಕ ಎಂದರೆ ಮಕ್ಕಳ ಜ್ಞಾನ ಹೆಚ್ಚಾಗಬೇಕು, ಅವರಿಗೆ ವಿವೇಕಾನಂದರ ವಿಚಾರಗಳ ಪರಿಚಯವಾಗಬೇಕು. ಹೀಗಾಗಿ ವಿವೇಕ ಅಂತ ಹೆಸರು ಇಡಲಾಗಿದೆ.
ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ವಿವೇಕ ಶಾಲಾ ಕೊಠಡಿಗಳ ಶಂಕುಸ್ಥಾಪನೆ ನಡೆಯುತ್ತಿದೆ. ಕೊರೋನಾ ಕಾಲದಲ್ಲಿ ಯಾಕೆ ಶಾಲೆ ಪ್ರಾರಂಭಿಸುತ್ತೀರಿ ಎಂದು ಹಲವರು ಕೇಳಿದ್ದರು. ಆದರೆ ದೇಶದಲ್ಲಿ ಮೊದಲು ಶಾಲೆ ಆರಂಭಿಸಿದ್ದು ಕರ್ನಾಟಕ ಎಂದು ಸ್ಮರಿಸಿದರು.
ಇದೇ ವೇಳೆ ಕೊಠಡಿಗಳಿಗೆ ಕೇಸರಿ ಬಣ್ಣ ಹಚ್ಚುವಂತೆ ಆದೇಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೊಠಡಿ ನಿರ್ಮಿಸುವ ಎಂಜಿನಿಯರ್ ಕೇಸರಿ ಬಣ್ಣ ಹಚ್ಚಿದರೆ ಹಚ್ಚಬಹುದು. ಅದರಿಂದ ತಪ್ಪೇನೂ ಇಲ್ಲ. ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಪ್ರತಿಯೊಂದನ್ನೂ ವಿವಾದ ಮಾಡುತ್ತಿವೆ ಎಂದು ಹೇಳಿದರು.
ಸಮಾರಂಭದಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಸಂಸದ ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಮೊದಲಾದವರು ಉಪಸ್ಥಿತರಿದ್ದರು.