Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಮದ್ಯ ಸೇವನೆ, ಸ್ನಾನಕ್ಕೆ ತೆರಳಿ ಬೆನ್ನುಜ್ಜುವಂತೆ ಬಲವಂತ:’ಖಾವಿ’ ಸ್ವಾಮಿಯ ಕಾಮಪುರಾಣ; ಪೊಲೀಸರ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಅತ್ಯಾಚಾರ ಆರೋಪದ ಜೊತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಧಾರ್ಮಿಕ ಸ್ಥಳಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ, ಎಂಬುದನ್ನು ಉಲ್ಲೇಖಿಸಲಾಗಿದೆ.  ಶಿವಮೂರ್ತಿ ಮುರುಘಾ ಶರಣರು ಮತ್ತು ಇತರರ ವಿರುದ್ಧ ಪೋಕ್ಸೋ ಪ್ರಕರಣದ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಲೈಂಗಿಕ ದೌರ್ಜನ್ಯದ ಆರೋಪವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಮಠಾಧೀಶರು, ಎಸ್‌ಜೆಎಂ ಶಿಕ್ಷಣ ಸಂಸ್ಥೆಗಳ ಮಾಜಿ ಕಾರ್ಯದರ್ಶಿ ಪರಮಶಿವಯ್ಯ ಮತ್ತು ಹಾಸ್ಟೆಲ್ ವಾರ್ಡನ್ ರಶ್ಮಿ ವಿರುದ್ಧ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದಾರೆ. ಮೂರನೇ ಆರೋಪಿ, 17 ವರ್ಷದ ಅಪ್ರಾಪ್ತ ಮತ್ತು ಐದನೇ ಆರೋಪಿ ಗಂಗಾಧರಯ್ಯ ವಿರುದ್ಧ ತನಿಖೆ ನಡೆಯುತ್ತಿದೆ, ಅವರ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶಿಕ್ಷಕರು,  ಸೇರಿದಂತೆ 84 ಜನರ ವಿರುದ್ಧ  ಪೊಲೀಸರು ಸಾಕ್ಷ್ಯ ಮತ್ತು ಮಾಹಿತಿ ಸಂಗ್ರಹಿಸಿದ್ದಾರೆ.

ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸುವ ಕ್ರಮವನ್ನು ಸಮರ್ಥಿಸಿದ ಅಧಿಕಾರಿ, ಒಬ್ಬ ಹುಡುಗಿ ಒಬಿಸಿ ಸಮುದಾಯಕ್ಕೆ ಸೇರಿದ್ದರೆ, ಇನ್ನೊಬ್ಬಳು ಪರಿಶಿಷ್ಟ ಜಾತಿಗೆ ಸೇರಿದ್ದಾಳೆ, ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಸೇರಿದಂತೆ ಪ್ರತ್ಯೇಕ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಧಾರ್ಮಿಕ ಸಂಸ್ಥೆಗಳ (ದುರುಪಯೋಗ ತಡೆಗಟ್ಟುವಿಕೆ) 1988 ರ ಕಾಯಿದೆಯನ್ನು ಸಹ ಉಲ್ಲಂಘಿಸಲಾಗಿದೆ. ಚಾರ್ಜ್‌ಶೀಟ್‌ನಲ್ಲಿ ಸೆಕ್ಷನ್ 3 (ಎಫ್) ಮತ್ತು ಸೆಕ್ಷನ್ 7 ಅನ್ನು ಸಹ ಅನ್ವಯಿಸಲಾಗಿದೆ. ಸಂತ್ರಸ್ತರು ನೀಡಿದ 161 ಹೇಳಿಕೆಗಳ ಪ್ರಕಾರ, 2018 ಮತ್ತು 2020 ರಲ್ಲಿ ಮಠಾಧೀಶರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 17 ವರ್ಷದ ಬಾಲಕಿ ಆರೋಪಿಸಿದ್ದಾರೆ.  2021 ಮತ್ತು 2022 ರಲ್ಲಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಮತ್ತೊಬ್ಬ ಸಂತ್ರಸ್ತೆ ಹೇಳಿದ್ದಾಳೆ.  ಹಾಸ್ಟೆಲ್ ವಾರ್ಡನ್ ರಶ್ಮಿ ಮತ್ತು ಎಸ್‌ಜೆಎಂ ಕಾರ್ಯದರ್ಶಿ ಪರಮಶಿವಯ್ಯ ಅವರು ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಗೊತ್ತಿದ್ದರೂ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ,

ಆರೋಪಿ ಶ್ರೀಗಳು ತಮ್ಮ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ, ತಮ್ಮ ಮಲಗುವ ಕೊಠಡಿಗೆ ಬಾಲಕಿಯರನ್ನು ಒಂಚಿಯಾಗಿ ಕರೆದುಕೊಂಡು ಹೋಗುತ್ತಿದ್ದರು, ಅಲ್ಲಿ ಅವರು ನನಗೆ ಚಾಕೋಲೇಟ್ ನೀಡಿದ್ದರು. ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ನಡೆಸಿ ಬೆದರಿಕೆ ಹಾಕಿದರು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

 ರಾತ್ರಿಯ ಟ್ಯೂಷನ್‌ನ ನಂತರ ಕೊಠಡಿಯನ್ನು ಗುಡಿಸುವ ನೆಪದಲ್ಲಿ ಆಕೆಯನ್ನು ಕೋಣೆಯಲ್ಲಿ  ಉಳಿಯುವಂತೆ ಒತ್ತಾಯಿಸಲಾಗುತ್ತಿತ್ತು. ನಂತರ ಮಠಾಧೀಶರ ಕೋಣೆಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಹಣ್ಣುಗಳನ್ನು ನೀಡಿ ನನ್ನ ಬಟ್ಟೆ ತೆಗೆಯುವಂತೆ ಒತ್ತಾಯಿಸುತ್ತಿದ್ದರು ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

ಸ್ವಾಮೀಜಿಗಳು ಮದ್ಯ ಸೇವಿಸುತ್ತಿದ್ದರು, ಸ್ನಾನ ಮಾಡಲು ತೆರಳಿ ಬೆನ್ನು ಉಜ್ಜುವಂತೆ ಬಲವಂತ ಮಾಡುತ್ತಿದ್ದರು. ಯಾವ ದಿನ ಯಾರನ್ನು ಕಳುಹಿಸಬೇಕು ಎಂಬ ಪಟ್ಟಿಯನ್ನು ಹಾಸ್ಟೆಲ್ ವಾರ್ಡನ್ ಅವರಿಗೆ ನೀಡುತ್ತಿದ್ದರು. ಒಂದು ವೇಳೆ ಬಾಲಕಿಯರು ಹೋಗದಿದ್ದರೇ ಅವರಿಗೆ ಶಿಕ್ಷೆ ವಿಧಿಸಲಾಗುತ್ತಿತ್ತು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಪೊಲೀಸರು ನೇರವಾಗಿ ನ್ಯಾಯಾಲಯಕ್ಕೆ ಭಾಗಶಃ ಆರೋಪಪಟ್ಟಿ ನೀಡಿದ್ದು, ಸಂಪೂರ್ಣ ಆರೋಪಪಟ್ಟಿ ಇನ್ನೂ ಸಲ್ಲಿಕೆಯಾಗಬೇಕಿದೆ ಎಂದು ಸರ್ಕಾರಿ ಅಭಿಯೋಜಕಿ ನಾಗವೇಣಿ ತಿಳಿಸಿದ್ದಾರೆ.

No Comments

Leave A Comment