ಬಂಡೇಮಠ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸು: ಕಣ್ಣೂರು ಶ್ರೀ, ಯುವತಿ ಸೇರಿ ಮೂವರ ಬಂಧನ, ತನಿಖೆ ಚುರುಕು
ಬೆಂಗಳೂರು: ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ 45 ವರ್ಷದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸಿಗೆ ಭಾನುವಾರ ದೊಡ್ಡ ತಿರುವು ಸಿಕ್ಕಿದೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಮಾಗಡಿ ತಾಲ್ಲೂಕಿನ ಕಣ್ಣೂರು ಮಠದ ಡಾ ಮೃತ್ಯುಂಜಯ ಶ್ರೀ ಹಾಗೂ ಯವತಿ ನೀಲಾಂಬಿಕೆ ಹಾಗೂ ನಿವೃತ್ತ ಶಿಕ್ಷಕ ಹಾಗೂ ವಕೀಲ ಮಹದೇವಯ್ಯ ಎಂಬುವವರನ್ನು ಬಂಧಿಸಿದ್ದಾರೆ.
ಅಲ್ಲದೆ ಕಣ್ಣೂರು ಶ್ರೀಗಳನ್ನು ಎ1, ಯುವತಿ ನೀಲಾಂಬಿಕೆ ಅಲಿಯಾಸ್ ಚಂದು ಎ2 ಮತ್ತು ನಿವೃತ್ತ ಶಿಕ್ಷಕ ಮಹದೇವಯ್ಯ ಅವರನ್ನು ಎ3 ಆರೋಪಿ ಎಂದು ಪ್ರಕರಣ ದಾಖಲಿಸಲಾಗಿದೆ. ಮಹದೇವಯ್ಯ ತುಮಕೂರಿನ ನಿವಾಸಿಯಾಗಿದ್ದಾರೆ.
ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್‍ನಲ್ಲಿ ಇವರ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ 21ವರ್ಷದ ಯುವತಿಯನ್ನು ಬಿಟ್ಟು ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಮಾಡಿಸಿರುವ ಕುರಿತು ಹಾಗೂ ಕಣ್ಣೂರು ಶ್ರೀಗಳ ಷಡ್ಯಂತ್ರ್ಯದ ಬಗ್ಗೆಯೂ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೇ ಕಣ್ಣೂರು ಸ್ವಾಮೀಜಿ ಹಾಗೂ ಇತರ ಏಳೆಂಟು ಮಂದಿಯಿಂದ ಕಿರುಕುಳ ಎದುರಾಗ್ತಿದೆ. ಅವರು ಮಠದ ವಿಚಾರದಲ್ಲಿ ಆಗಾಗ ತೊಂದರೆ ಉಂಟುಮಾಡುತ್ತಿದ್ದಾರೆ. ನನ್ನ ಸಾವಿಗೆ ಗೊತ್ತಿಲ್ಲದಿರುವ ಆ ಯುವತಿಯೇ ಕಾರಣ ಎಂದು ಸಾವಿಗೂ ಮೊದಲು ಬಂಡೆ ಮಠದ ಶ್ರೀಗಳು ಡೆತ್ ನೋಟ್ ಬರೆದಿಟ್ಟಿದ್ದರು.
ಯುವತಿ ನೀಲಾಂಬಿಕೆ ದೊಡ್ಡಬಳ್ಳಾಪುರದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣವು ಪ್ರತಿದಿನ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣ ಭೇದಿಸಲು ಮೂರು ತಂಡಗಳನ್ನು ರಚಿಸಿದ್ದಾರೆ. ನಾಲ್ವರು ಸಿಪಿಐ ಹಾಗೂ ಐದು ಜನ ಪಿಎಸ್‍ಐ ಮತ್ತು ಒಬ್ಬರು ಎವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹನಿಟ್ರ್ಯಾಪ್ ಕೇಸಿನಲ್ಲಿ ಬಸವಲಿಂಗ ಶ್ರೀಗಳನ್ನು ಸಿಕ್ಕಿಹಾಕಿಸುವ ಹಿಂದೆ ಬಹಳ ದೊಡ್ಡ ಕುತಂತ್ರವಿದೆ ಎಂದು ಹೇಳಲಾಗುತ್ತಿದೆ.