ಸೊಮಾಲಿಯಾದಲ್ಲಿ ಉಗ್ರರಿಂದ ಗುಂಡಿನ ದಾಳಿ-ಮಕ್ಕಳು ಸೇರಿ 9 ಸಾವು
ಕಿಸ್ಮಾಯೊ (ಸೊಮಾಲಿಯಾ), ಅ 24: ಸೊಮಾಲಿಯಾದ ಬಂದರು ನಗರ ಕಿಸ್ಮಾಯೊದಲ್ಲಿನ ಹೋಟೆಲ್‌ನಲ್ಲಿ ಅಲ್-ಶಬಾಬ್ ಉಗ್ರ ಸಂಘಟನೆ ಭಾನುವಾರ ತಡರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ.
ಸ್ಪೋಟಕಗಳನ್ನು ತುಂಬಿ ಬಂದಿದ್ದ ಕಾರು ಹೊಟೇಲ್ ತವಕಲ್ ಗೇಟ್ ಒಳಗೆ ನುಗ್ಗಿದೆ. ಕೂಡಲೇ ಕಾರಿನಲ್ಲಿದ್ದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ತತ್‌ಕ್ಷಣ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಪ್ರತಿಧಾಳಿ ನಡೆಸಿ ಮೂವರು ದಾಳಿಕೋರರನ್ನು ಹತ್ಯೆಗೈದಿದ್ದಾರೆ. ಇನ್ನೊಬ್ಬ ದಾಳಿಕೋರ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದ್ದಾನೆ ಎಂದು ಸೊಮಾಲಿಯಾದ ಜುಬ್ಬಾಲ್ಯಾಂಡ್‌ನ ಭದ್ರತಾ ಸಚಿವ ಯೂಸುಫ್ ಹುಸೇನ್ ಧುಮಾಲ್ ಹೇಳಿದ್ದಾರೆ.
ಘಟನೆಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿ ನಾಗರಿಕರು ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಅಲ್-ಶಬಾಬ್ ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿದೆ.