Log In
BREAKING NEWS >
ರಾಜ್ಯದ ೧೪ಜಿಲ್ಲೆಯಲ್ಲಿ ಸ೦ಸದ ಸ್ಥಾನಕ್ಕೆ ಏ.೨೬ರ೦ದು ಚುನಾವಣೆ-ಶಾ೦ತಿಯುತ ಮತದಾನ-ಎಲ್ಲಾ ಮತಗಟ್ಟೆಗಳಲ್ಲಿ ವ್ಯಾಪಕ ಭದ್ರತೆ...

ಟಿ20 ವಿಶ್ವಕಪ್: 2 ಬಾರಿ ಚಾಂಪಿಯನ್ ವಿಂಡೀಸ್ ಅನ್ನು ಟೂರ್ನಿಯಿಂದಲೇ ಹೊರದಬ್ಬಿದ ಕ್ರಿಕೆಟ್ ಶಿಶು ಐರ್ಲೆಂಡ್!

ಹೋಬರ್ಟ್: ಟಿ20 ವಿಶ್ವಕಪ್ ಟೂರ್ನಿ ಇಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದ್ದು, 2 ಬಾರಿ ಚಾಂಪಿಯನ್  ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಕ್ರಿಕೆಟ್ ಶಿಶು ಐರ್ಲೆಂಡ್ ಸೋಲಿಸುವ ಮೂಲಕ ಟೂರ್ನಿಯಿಂದಲೇ ಹೊರದಬ್ಬಿದೆ.

ಆಸ್ಚ್ರೇಲಿಯಾದ ಹೋಬರ್ಟ್ ನ ಬೆಲ್ಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಐರ್ಲೆಂಡ್ ತಂಡ 9 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಆ ತಂಡವನ್ನು ಟೂರ್ನಿಯಿಂದಲೇ ಹೊರದಬ್ಬಿದೆ. ಟೂರ್ನಿಯ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ತಾನಾಡಿದ್ದ 2 ಪಂದ್ಯಗಳ ಪೈಕಿ 1 ರಲ್ಲಿ ಸೋತು 1ರಲ್ಲಿ ಗೆದ್ದಿದ್ದ ವಿಂಡೀಸ್ ಗೆ ಇಂದಿನ ಪಂದ್ಯ ಮಾಡು-ಇಲ್ಲವೇ ಮಡಿ ಎಂಬಂತಿತ್ತು. ಆದರೆ ಈ ಪಂದ್ಯದಲ್ಲೇ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದಲೇ 2 ಬಾರಿ ಚಾಂಪಿಯನ್ ತಂಡ ಹೊರಬಿದ್ದಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146ರನ್ ಗಳನ್ನು ಕಲೆಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಐರ್ಲೆಂಡ್ ತಂಡ ಪಾಲ್ ಸ್ಟರ್ಲಿಂಗ್ (ಅಜೇಯ 66), ಲಾರ್ಕನ್ ಟಕ್ಕರ್ (ಅಜೇಯ 45ರನ್) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 17.3 ಓವರ್ ನಲ್ಲಿಯೇ 1 ವಿಕೆಟ್ ಕಳೆದುಕೊಂಡು 150ರನ್ ಸಿಡಿಸಿ 9 ವಿಕೆಟ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು. ಆರಂಭಿಕ ಆಟಗಾರ ಮತ್ತು ಐರ್ಲೆಂಡ್ ತಂಡದ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 37 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಐರ್ಲೆಂಡ್ ಪರ ಗರೆಥ್ ಡೆಲಾನಿ ಮೂರು ವಿಕೆಟ್ ಪಡೆದರೆ, ಸಿಮಿ ಸಿಂಗ್ ಮತ್ತು ಬ್ಯಾರಿ ಮೆಕಾರ್ಥಿ ತಲಾ ಒಂದು ವಿಕೆಟ್ ಪಡೆದರು.

ಈ ಪಂದ್ಯದ ಸೋಲಿನ ಮೂಲಕ ಗ್ರೂಪ್ ಸ್ಟೇಜ್ ಹಂತದಲ್ಲಿ ವಿಂಡೀಸ್ ತಂಡ ತಾನಾಡಿದ 3 ಪಂದ್ಯಗಳ ಪೈಕಿ 2ರಲ್ಲಿ ಸೋತು ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದೆ. ಇಂಗ್ಲೆಂಡ್‌ನಲ್ಲಿ 2010 ರ ಆವೃತ್ತಿಯಲ್ಲಿ ಒಮ್ಮೆ ಮಾತ್ರ ಅರ್ಹತೆ ಪಡೆದ ನಂತರ T20 ವಿಶ್ವಕಪ್‌ನಲ್ಲಿ ಇದು ಐರ್ಲೆಂಡ್‌ನ ಅತ್ಯುತ್ತಮ ಪ್ರದರ್ಶನವಾಗಿದೆ. ಐರ್ಲೆಂಡ್ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದೊಂದಿಗೆ ಸೂಪರ್ 12 ಹಂತದಲ್ಲಿ ಗುಂಪು 2 ಗೆ ಸೇರುವ ಸಾಧ್ಯತೆಯಿದೆ.

ಇನ್ನು ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತ ನಾಳೆಯಿಂದ ಅಂದರೆ ಅಕ್ಟೋಬರ್ 22ರಿಂದ ಆರಂಭವಾಗಲಿದ್ದು, ಗ್ರೂಪ್ ಸ್ಟೇಜ್ ಹಂತದಲ್ಲಿ ಗ್ರೂಪ್ 1 ನಿಂದ 2 ತಂಡ ಮತ್ತು ಗ್ರೂಪ್ 2ನಿಂದ 2 ತಂಡಗಳು ಸೂಪರ್ 12 ಹಂತಕ್ಕೆ ಪ್ರವೇಶ ಪಡೆಯಲಿವೆ. ಈಗಾಗಲೇ ಗ್ರೂಪ್ 1ನಿಂದ ಶ್ರೀಲಂಕಾ ಮತ್ತು ನೆದರ್ಲೆಂಡ್ ಪ್ರವೇಶ ಪಡೆದಿದ್ದು, ಗ್ರೂಪ್ 2ನಿಂದ ಐರ್ಲೆಂಡ್ ಸೂಪರ್ 12ಹಂತಕ್ಕೆ ಪ್ರವೇಶ ಪಡೆದಿದ್ದು, 2ನೇ ತಂಡಕ್ಕಾಗಿ  ಸ್ಕಾಟ್ಲೆಂಡ್ ಮತ್ತು ಜಿಂಬಾಬ್ವೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಭಯ ತಂಡಗಳು ತಾವಾಡಿರುವ 2 ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಇಂದು ನಡೆಯಲಿರುವ ಉಭಯ ತಂಡಗಳ ವಿರುದ್ಧ ಪಂದ್ಯದಲ್ಲಿ ಗೆಲ್ಲುವ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ.

No Comments

Leave A Comment