ಅಂಧೇರಿ ಉಪ ಚುನಾವಣೆ: ಅಭ್ಯರ್ಥಿ ಹಿಂಪಡೆದ ಬಿಜೆಪಿ, ಉದ್ಧವ್ ಠಾಕ್ರೆ ಅಭ್ಯರ್ಥಿ ಹಾದಿ ಸುಗಮ
ಮುಂಬೈ: ನವೆಂಬರ್ 3 ರಂದು ನಡೆಯುವ ಮುಂಬೈನ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ ಬವಾಂಕುಲೆ ಅವರು ಸೋಮವಾರ ಹೇಳಿದ್ದಾರೆ.
ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಸ್ಪರ್ಧಿಸದಿರಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಮುರ್ಜಿ ಪಟೇಲ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆಯಲಿದ್ದಾರೆ ಎಂದು ಬವಾಂಕುಲೆ ನಾಗಪುರದಲ್ಲಿ ತಿಳಿಸಿದ್ದಾರೆ. ಇದರಿಂದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಹಾದಿ ಸುಗಮವಾಗಿದೆ.
ಅಂಧೇರಿ ಪೂರ್ವ ವಿಧಾನಸಭಾ ಉಪಚುನಾವಣೆಗೆ ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಈ ವರ್ಷದ ಮೇನಲ್ಲಿ ಶಿವಸೇನೆ ಶಾಸಕ ರಮೇಶ್ ಲಟ್ಕೆ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣವು ಉಪಚುನಾವಣೆಯಲ್ಲಿ ರಮೇಶ್ ಲಟ್ಕೆ ಅವರ ಪತ್ನಿ ರುತುಜಾ ಲಟ್ಕೆ ಅವರನ್ನು ಕಣಕ್ಕಿಳಿಸಿದೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾನುವಾರ ಉಪಚುನಾವಣೆಯಲ್ಲಿ ರುತುಜಾ ಲಟ್ಕೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವಂತೆ ಕರೆ ನೀಡಿದ್ದರು. ಅಲ್ಲದೆ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ ಅವರು ಸಹ ದಿವಂಗತ ರಮೇಶ್ ಲಟ್ಕೆ ಅವರಿಗೆ ಗೌರವ ಸೂಚಿಸಲು ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಿಂಪಡೆಯಬೇಕು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.