ಮಂಗಳೂರು: ಸ್ನೇಹಿತೆ ಜೊತೆ ಮನೆ ಬಿಟ್ಟು ಹೋದ ಮಗಳು; ತಪ್ಪು ಗ್ರಹಿಕೆಯಿಂದ ಬುರ್ಖಾ ಧರಿಸಿದ್ದ ಇಬ್ಬರು ಯುವತಿಯರಿಗೆ ಕಿರುಕುಳ
ವಿಟ್ಲ: ಮನೆ ಬಿಟ್ಟು ಹೋಗಿದ್ದ ಇಬ್ಬರು ಯುವತಿಯರನ್ನು ಹುಡುಕುತ್ತಿದ್ದ ಕುಟುಂಬಸ್ಥರು, ತಪ್ಪಾಗಿ ಗ್ರಹಿಸಿ ಬೇರೆ ಇಬ್ಬರು ಯುವತಿಯರಿಗೆ ಕಿರುಕುಳ ನೀಡಿದ ಘಟನೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಬುರ್ಖಾಧಾರಿ ಯುವತಿಯರು ನಾಪತ್ತೆಯಾಗಿದ್ದ ಹುಡುಗಿಯರನ್ನೇ ಹೋಲುತ್ತಿದ್ದರಿಂದ ಈ ಅಚಾತುರ್ಯ ನಡೆದಿದೆ
ಯುವತಿಯೊಬ್ಬಳು ಕುಟುಂಬಸ್ಥರೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ತನ್ನ ಸ್ನೇಹಿತೆ ಜೊತೆ ಹೋಗಿದ್ದಳು. ಮನೆ ಬಿಟ್ಟು ಹೋಗಿದ್ದ ಮಗಳನ್ನು ಕುಟುಂಬಸ್ಥರು ಹುಡುಕಾಡುತ್ತಿದ್ದರು. ಈ ವೇಳೆ ಬುರ್ಖಾ ಧರಿಸಿದ್ದ ಇಬ್ಬರು ಯುವತಿಯರು ಕಣ್ಣಿಗೆ ಬಿದ್ದಿದ್ದಾರೆ, ಆ ಇಬ್ಬರು ಯುವತಿಯರು ನಾಪತ್ತೆಯಾಗಿದ್ದ ಇಬ್ಬರು ಯುವತಿಯರನ್ನು ಹೋಲುತ್ತಿದ್ದರು. ಅವರು ಯಾರು ಎಂಬುದನ್ನು ತಿಳಿಯದೆ ಮನೆಗೆ ಬರುವಂತೆ ಮನವೊಲಿಸಿ, ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದರು. ಈ ವೇಳೆ ಅವರ ಕೈಗಳನ್ನು ಹಿಡಿದು ಎಳೆದಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿಯರು ವಿರೋಧಿಸಿದಾಗ, ಒಬ್ಬ ಯುವಕ ಅವರಲ್ಲೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆದರೆ, ಹುಡುಗಿಯರು ತಮ್ಮ ಗುರುತನ್ನು ಬಹಿರಂಗಪಡಿಸಿದಾಗ ಕುಟುಂಬದವರು ಆಘಾತಕ್ಕೊಳಗಾಗಿದ್ದರು. ಕೂಡಲೇ ಅವರೆಲ್ಲಾ ಯುವತಿಯರ ಬಳಿ ಕ್ಷಮೆಯಾಚಿಸಿದರು.
ಅಷ್ಟೊತ್ತಿಗಾಗಲೇ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಕುಟುಂಬಸ್ಥರನ್ನು ಅಲ್ಲಿ ನೆರೆದವರು ತರಾಟೆಗೆ ತೆಗೆದುಕೊಂಡರು. ಯುವತಿಗೆ ಥಳಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಯುವತಿಯರು ದೂರು ನೀಡಲು ನಿರಾಕರಿಸಿದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದೇ ವೇಳೆ ನಾಪತ್ತೆಯಾಗಿದ್ದ ಬಾಲಕಿಯರು ಪುತ್ತೂರಿನಲ್ಲಿ ಪತ್ತೆಯಾಗಿದ್ದಾರೆ.