Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ಜನಪ್ರಿಯ “ಓಲ್ಡ್ ಮಾಂಕ್” ರಮ್ ಯಶಸ್ಸಿನ ರೂವಾರಿ ಇನ್ನಿಲ್ಲ

ನವದೆಹಲಿ: ರಮ್ ಪ್ರಿಯರಿಗೆ ಓಲ್ಡ್ ಮಾಂಕ್ ಅನ್ನು ಪರಿಚಯಿಸಿದ್ದ ಕಪಿಲ್ ಮೋಹನ್ (88ವರ್ಷ) ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.

ಮೋಹನ್ ಮೆಕಿನ್ ಮದ್ಯ ಉತ್ಪಾದನಾ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದ ಮೋಹನ್ ಅವರು ಜನವರಿ 6ರಂದು ನಿಧನರಾಗಿದ್ದರು. ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಘಾಜಿಯಾಬಾದ್ ನ ಮೋಹನ್ ನಗರ್ ಪ್ರದೇಶದಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 2010ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಇವರು ಪತ್ನಿ ಪುಪ್ಪಾ ಮೋಹನ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಓಲ್ಡ್ ಮಾಂಕ್ ರಮ್ ಜನಪ್ರಿಯಗೊಳಿಸಿದ್ದು ಕಪಿಲ್:

ಮೋಹನ್ ಮೆಕಿನ್ ಅವರು ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ 1954ರ ಡಿಸೆಂಬರ್ 19ರಂದು ಓಲ್ಡ್ ಮಾಂಕ್ ರಮ್ ಅನ್ನು ಪರಿಚಯಿಸಿದ್ದರು. ಇದು ವಿಶಿಷ್ಟವಾದ ವೆನಿಲಾ ಪರಿಮಳವನ್ನು ಹೊಂದಿರುವ ಡಾರ್ಕ್ ರಮ್ ಎಂದೇ ಪ್ರಸಿದ್ಧಿ ಪಡೆದಿತ್ತು.

1855ರಲ್ಲಿ ಸ್ಕಾಟ್ಲಾಂಡ್ ಉದ್ಯಮಿ ಎಡ್ವರ್ಡ್ ಅಬ್ರಹಾಂ ಡಯರ್(ಈತ ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ಕರ್ನಲ್ ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡಯರ್ ತಂದೆ) ಬ್ರಿಟಿಷರಿಗೆ ಮದ್ಯ ಪೂರೈಸಲು ಹಿಮಾಚಲ ಪ್ರದೇಶದ ಕಸೌಲಿ ಎಂಬಲ್ಲಿ ಸಾರಾಯಿ ಭಟ್ಟಿಯನ್ನು ಪ್ರಾರಂಭಿಸಿದ್ದರು. ಇದು ಬಳಿಕ ಮೋಹನ್ ಮೆಕಿನ್ ಪ್ರೈ ಲಿಮಿಟೆಡ್ ಆಯಿತು.

1970ರಲ್ಲಿ ಹಿರಿಯ ಸಹೋದರ ವಿಆರ್ ಮೋಹನ್ ವಿಧಿವಶರಾದ ಬಳಿಕ ಕಪಿಲ್ ಮೋಹನ್ ಅವರ ಪರಿಶ್ರಮದಿಂದ ಕಂಪನಿಗೆ ಹೊಸ ಚೈತನ್ಯ ಮೂಡಿತ್ತು. ತದನಂತರ ಲಾಭಗಳಿಕೆಯತ್ತ ಮುನ್ನುಗ್ಗಿದ್ದು 3 ಡಿಸ್ಟಿಲರೀಸ್, ಎರಡು ಬ್ರಿವರೀಸ್ ಆರಂಭಿಸಿದ್ದರು. ಅಷ್ಟೇ ಅಲ್ಲ ಮೋಹನ್ ಅವರು ಸೋಲಾನ್ ನಂ1 ಹಾಗೂ ಗೋಲ್ಡನ್ ಈಗಲ್ ಎಂಬ ಬ್ರ್ಯಾಂಡ್ ಅನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರದ್ದು.

No Comments

Leave A Comment