Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಗುಜರಾತ್‌: ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ಬಿಜೆಪಿ– ಕಾಂಗ್ರೆಸ್‌ ವಾಕ್ಸಮರ

ನವದೆಹಲಿ / ಅಹಮದಾಬಾದ್‌: ರಾಜ್ಯಸಭಾ ಚುನಾವಣೆಗೂ  ಮುನ್ನ ಗುಜರಾತ್‌ನಲ್ಲಿ ಕಾಂಗ್ರೆಸ್‌ ಶಾಸಕರು ನೀಡಿರುವ  ರಾಜೀನಾಮೆ ಮತ್ತು ರೆಸಾರ್ಟ್‌ ರಾಜಕಾರಣದ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಣ ವಾಕ್ಸಮರ ತಾರಕಕ್ಕೇರಿದೆ.

ರಾಜ್ಯಸಭೆಯ ಮೂರು ಸ್ಥಾನಗಳಿಗೆ ಆಗಸ್ಟ್‌ 8ರಂದು  ನಡೆಯಲಿರುವ ಚುನಾವಣೆಯಲ್ಲಿ  ಬಿಜೆಪಿ ಹಣ, ಅಧಿಕಾರ ಮತ್ತು ತೋಳ್ಬಲ ಬಳಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌, ಚುನಾವಣಾ ಆಯೋಗಕ್ಕೆ ಶನಿವಾರ ದೂರು ನೀಡಿದೆ. ಈ ಸಂಬಂಧ ವರದಿ ನೀಡುವಂತೆ ಚುನಾವಣಾ ಆಯೋಗ ಗುಜರಾತ್‌ ಸರ್ಕಾರಕ್ಕೆ ಸೂಚಿಸಿದೆ.

ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಜಾದ್‌, ಆನಂದ್‌ ಶರ್ಮಾ, ಅಭಿಷೇಕ್‌ ಮನು ಸಿಂಘ್ವಿ, ವಿವೇಕ್‌ ಟಂಖಾ ಮತ್ತು ಮನೀಶ್‌ ತಿವಾರಿ  ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದರು.

‘ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡುವುದಕ್ಕಾಗಿ ಪಕ್ಷದ ಶಾಸಕರಿಗೆ ಹಣದ, ವಿವಿಧ ಹುದ್ದೆಗಳ ಆಮಿಷವನ್ನು ತೋರಿಸಲಾಗುತ್ತಿದೆ. ಇದರ ತನಿಖೆಗಾಗಿ ಉನ್ನತ ಮಟ್ಟದ ಸಮಿತಿ ರಚಿಸಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

‘ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯ ಶಾಸಕರ ಬಲ ಇರದಿದ್ದರೂ, ಪಕ್ಷವೊಂದು ಕಾಂಗ್ರೆಸ್‌ನಿಂದ ಶಾಸಕರೊಬ್ಬರನ್ನು ಸೆಳೆದು ಮೂರನೇ ಅಭ್ಯರ್ಥಿಯಾಗಿ ಹೇಗೆ ಕಣಕ್ಕಿಳಿಸಲು ಸಾಧ್ಯ’ ಎಂದು ಆನಂದ ಶರ್ಮಾ ಅವರು ಸುದ್ದಿಗಾರರಿಗೆ ಪ್ರಶ್ನಿಸಿದರು. ಗುಜರಾತ್‌ನ  57 ಕಾಂಗ್ರೆಸ್‌ ಶಾಸಕರ ಪೈಕಿ, ಎರಡು ದಿನದಲ್ಲಿ ಆರು ಶಾಸಕರು  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಲ್ಲಿ ಮೂವರು ಬಿಜೆಪಿ ಸೇರಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಅವರು ಗುಜರಾತ್‌ನಿಂದ  ರಾಜ್ಯಸಭೆಗೆ ಪುನರಾಯ್ಕೆ ಬಯಸಿದ್ದಾರೆ. ಒಂದು ವೇಳೆ ಮತ್ತಷ್ಟು ಶಾಸಕರು ರಾಜೀನಾಮೆ ನೀಡಿದರೆ  ಅವರ ಗೆಲುವು ಕಷ್ಟವಾಗಲಿದೆ.

ಆರೋಪ–ಪ್ರತ್ಯಾರೋಪ: ‘ಇನ್ನೊಂದು ಪಕ್ಷಕ್ಕೆ ಮತಹಾಕಲು ಒಪ್ಪದ ಶಾಸಕರಿಗೆ ಬೆದರಿಕೆ ಒಡ್ಡಲಾಗುತ್ತಿದೆ. ಹಾಗಾಗಿ ಅವರ ಸುರಕ್ಷತೆ ಮತ್ತು ಭದ್ರತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಗುಜರಾತ್‌ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ನಿಶಿತ್‌ ವ್ಯಾಸ್‌  ಅವರು ಹೇಳಿದ್ದಾರೆ. ಆದರೆ, ನಿಶಿತ್‌ ಹೇಳಿಕೆಯನ್ನು ಮುಖ್ಯಮಂತ್ರಿ ವಿಜಯ ಭಾಯಿ ರೂಪಾಣಿ ತಳ್ಳಿಹಾಕಿದ್ದಾರೆ.

‘ಇದು ಕಾಂಗ್ರೆಸ್‌ ಪಕ್ಷದ ಆಂತರಿಕ ಸಮಸ್ಯೆ. ವಿರೋಧ ಪಕ್ಷದ ನಾಯಕ ಶಂಕರ್‌ಸಿಂಹ ವಾಘೆಲಾ, ಮುಖ್ಯ ಸಚೇತಕ ಬಲ್ವಂತ್‌ಸಿಂಹ ರಜಪೂತ್‌ ಮತ್ತು ವಕ್ತಾರ ತಾಜೆಶ್ರಿಬೆನ್‌ ಪಟೇಲ್‌ ಅವರು ಕಾಂಗ್ರೆಸ್‌ ತೊರೆದಿರುವುದರಿಂದ ಈ ಬಿಕ್ಕಟ್ಟು ಉಂಟಾಗಿದೆ. ತನ್ನ ಶಾಸಕರ ಮೇಲೆ ನಂಬಿಕೆ ಇಲ್ಲದಿರುವುದರಿಂದ ಕಾಂಗ್ರೆಸ್‌, ಅವರನ್ನು ಬೆಂಗಳೂರಿಗೆ  ಕರೆದುಕೊಂಡು ಹೋಗಿದೆ’ ಎಂದು ಅವರು ಹೇಳಿದ್ದಾರೆ.

ಶಾಸಕರಿಗೆ ಆಮಿಷ: ‘ರಾಜ್ಯ ಬಿಜೆಪಿಯು ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಅಧಿಕಾರ, ಹಣ, ತೋಳ್ಬಲಗಳಿಂದ ಅದು ಪಕ್ಷದ ಶಾಸಕರಿಗೆ ಆಮಿಷ ಒಡ್ಡುತ್ತಿದೆ. ಎಲ್ಲರೂ ಒಟ್ಟಾಗಿರಬೇಕು ಎಂಬ ನಿರ್ಧಾರವನ್ನು ಶಾಸಕರು ತೆಗೆದುಕೊಂಡಿದ್ದಾರೆ. ಹಾಗಾಗಿ, ಅವರೆಲ್ಲ ಬೆಂಗಳೂರಿಗೆ ಹೋಗಿದ್ದಾರೆ’ ಎಂದು ಗುಜರಾತ್‌ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ಭರತ್‌ ಸೋಲಂಕಿ ಹೇಳಿದ್ದಾರೆ.

10 ಶಾಸಕರು ಗುಜರಾತ್‌ನಲ್ಲೇ ಉಳಿದಿದ್ದಾರೆ. ಇವರಲ್ಲಿ ಇಬ್ಬರು  ಚುನಾವಣೆಗಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಉಳಿದವರು ವಾಘೆಲಾ ಹಾಗೂ ಅವರ ಬೆಂಬಲಿರು ಎಂದು ಮೂಲಗಳು  ಹೇಳಿವೆ.

ಬಿಜೆಪಿ, ವಾಘೆಲಾ ವಾಗ್ದಾಳಿ: ಶಾಸಕರನ್ನು ಬೆಂಗಳೂರಿನ ರೆಸಾರ್ಟ್‌ಗೆ ಕರೆದುಕೊಂಡು ಹೋಗಿರುವುದಕ್ಕೆ ಕಾಂಗ್ರೆಸ್‌ ವಿರುದ್ಧ ಗುಜರಾತ್‌ ಉಪಮುಖ್ಯಮಂತ್ರಿ  ನಿತಿನ್‌ ಪಟೇಲ್‌ ಮತ್ತು ಕಾಂಗ್ರೆಸ್‌ ತೊರೆದಿರುವ ಶಂಕರಸಿಂಹ ವಾಘೆಲಾ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಜನರು ತೀವ್ರ ನೆರೆಯಿಂದ ತೊಂದರೆಗೆ ಒಳಗಾಗಿದ್ದರೆ, ವಿರೋಧ ಪಕ್ಷದ ಶಾಸಕರು ರೆಸಾರ್ಟ್‌ನಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ತೀವ್ರ ನೆರೆಪೀಡಿತ ಬನಸ್ಕಂತ ಮತ್ತು ಪಠಾಣ್‌ ಜಿಲ್ಲೆಗಳ ಸಂತ್ರಸ್ತರ ರಕ್ಷಣೆಗಾಗಿ ಕೆಲಸ ಮಾಡುವುದರ ಬದಲಿಗೆ ಶಾಸಕರನ್ನು ಬೆಂಗಳೂರಿಗೆ ಕಳುಹಿಸಲಾಗಿದೆ’ ಎಂದು ನಿತಿನ್‌ ಪಟೇಲ್‌ ಹೇಳಿದ್ದಾರೆ.

‘ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸಂಕಷ್ಟದಲ್ಲಿರುವ ಜನರೊಂದಿಗೆ ಇರಬೇಕು.  ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ವಾಘೆಲಾ  ಹೇಳಿದ್ದಾರೆ. ‘ನಾನೀಗ ಕಾಂಗ್ರೆಸ್‌ನಿಂದ ಮುಕ್ತನಾಗಿದ್ದೇನೆ. ಪಕ್ಷವೂ ನನ್ನಿಂದ ಮುಕ್ತವಾಗಿದೆ. ಕೆಲವು ಶಾಸಕರು ಸಲಹೆ ಕೇಳಿ ನನಗೆ ಕರೆ ಮಾಡಿದ್ದಾರೆ. ಆದರೆ, ಪಕ್ಷಕ್ಕೆ ರಾಜೀನಾಮೆ ನೀಡಿ ಅಥವಾ ಬೇರೆ ಪಕ್ಷಕ್ಕೆ ಸೇರಿ ಎಂದು ಯಾರಿಗೂ ಸಲಹೆ ನೀಡಿಲ್ಲ’ ಎಂದು ಅವರು ಹೇಳಿದ್ದಾರೆ.
*
ಕಾಂಗ್ರೆಸ್‌ ತೊರೆಯಲಿರುವ ಮತ್ತಷ್ಟು ಶಾಸಕರು?
ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಇನ್ನಷ್ಟು ಶಾಸಕರು ಪಕ್ಷ ತೊರೆಯಲಿರುವುದರಿಂದ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್‌ ಪಟೇಲ್‌ ಜಯ ಸಾಧಿಸುವುದು ಕಷ್ಟವಾಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ರಾಘವ್‌ಜೀ ಪಟೇಲ್‌ ಹೇಳಿದ್ದಾರೆ.

ಶಂಕರ್‌ಸಿಂಹ ವಾಘೆಲಾ ಅವರಿಗೆ ಆಪ್ತರಾಗಿರುವ ರಾಘವ್‌ಜೀ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ.

‘ಈಗಿನ ಬೆಳವಣಿಗೆಗಳಿಗೆ ಪಕ್ಷದ ರಾಜ್ಯ ನಾಯಕತ್ವ ಮತ್ತು ಹೈಕಮಾಂಡ್‌ ಕಾರಣ. 20 ಶಾಸಕರಿಗೆ ಪಕ್ಷದೊಂದಿಗೆ ಸಂಬಂಧ ಚೆನ್ನಾಗಿಲ್ಲ. ಹಾಗಾಗಿ, ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವುದು ಅಹ್ಮದ್‌ ಪಟೇಲ್‌ಗೆ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಜಾಮ್‌ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ ಶಾಸಕ  ಧರ್ಮೇಂದ್ರ ಸಿಂಹ ಜಡೇಜಾ ಕೂಡ ಕಾಂಗ್ರೆಸ್‌ ತೊರೆಯಲು ಮುಂದಾಗಿದ್ದಾರೆ.

*
ಈ ಸಮಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಶಾಸಕರು ಆಹಾರ ಪೊಟ್ಟಣಗಳೊಂದಿಗೆ ಸಂತ್ರಸ್ತರ ನೆರವಿಗೆ ಬರಬೇಕು.
ಶಂಕರಸಿಂಹ ವಾಘೆಲಾ
ಕಾಂಗ್ರೆಸ್‌ ಮಾಜಿ ಮುಖಂಡ

No Comments

Leave A Comment