Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್: ಭಾರತ ಇಂಗ್ಲೆಂಡ್ ನಡುವಿನ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭ

ಲಂಡನ್: ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಭಾನುವಾರ ಕದನ ಕುತೂಹಲ ಫೈನಲ್ ಪಂದ್ಯ ನಡೆಯಲಿದೆ.

ಆರು ಬಾರಿಯ ವಿಶ್ವ ಚಾಂಪಿಯನ್‌ ಮತ್ತು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿರುವ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆಯಾದೆಯಾದರೂ,  ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ಕಾಯ್ದುಕೊಂಡಿರುವ ಇಂಗ್ಲೆಂಡ್ ವನಿತೆಯರ ತಂಡ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಾಗಿ ಇಂದಿನ ಫೈನಲ್ ಪಂದ್ಯ ಎಲ್ಲರ ಗಮನ ಸೆಳೆದಿದೆ.ಒಂದು ವೇಳೆ ಮಿಥಾಲಿ ಪಡೆ ಗೆದ್ದರೆ ಇದು ಭಾರತಕ್ಕೆ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯಾಗಲಿದ್ದು, ಇನ್ನೊಂದೆಡೆ ತಲಾ ಮೂರು ಬಾರಿ ಚಾಂಪಿಯನ್ ಪಟ್ಟ ಮತ್ತು ರನ್ನರ್ ಅಪ್‌ ಸ್ಥಾನ ಅಲಂಕರಿಸಿರುವ ಇಂಗ್ಲೆಂಡ್‌ ತಂಡ ಮತ್ತೊಮ್ಮೆ  ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ಇನ್ನು ಟೂರ್ನಿಯಲ್ಲಿ ಆರಂಭದ ನಾಲ್ಕು ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿದರೂ ನಂತರ ಎರಡು ಪಂದ್ಯ ಸೋತು ನಿರಾಸೆ ಅನುಭವಿಸಿದ್ದ ಭಾರತ ತಂಡದವರು ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯವನ್ನು ಗೆದ್ದು  ಸೆಮಿಫೈನಲ್‌ ಪ್ರವೇಶಿಸಿತ್ತು. ಬಳಿಕ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 36 ರನ್‌ ಗಳಿಂದ ಮಣಿಸಿ ಫೈನಲ್‌ ಪ್ರವೇಶಿಸಿದೆ. ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಆತಿಥೇಯ ಇಂಗ್ಲೆಂಡ್  ತಂಡವೇ ಎದುರಾಳಿಯಾಗಿರುವುದರಿಂದ ಆಸ್ಟ್ರೇಲಿಯಾ ವಿರುದ್ಧ ತೋರಿದ ಅತ್ಯುತ್ತಮ ಪ್ರದರ್ಶನವನ್ನು ಪುನರಾವರ್ತಿಸಬೇಕಿದೆ.

ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 35 ರನ್‌ಗಳಿಂದ ಗೆದ್ದು ಭಾರತ ಅಭಿಯಾನ ಆರಂಭಿಸಿತ್ತು. ಅದೇ ತಂಡ ಅಂತಿಮ ಪಂದ್ಯದಲ್ಲೂ ಸವಾಲಿಗೆ ಸಜ್ಜಾಗಿದೆ.ತಂಡಗಳು ಇಂತಿವೆ:ಭಾರತ: ಮಿಥಾಲಿ ರಾಜ್‌ (ನಾಯಕಿ), ಹರ್ಮನ್‌ಪ್ರೀತ್‌ ಕೌರ್‌, ವೇದಾ ಕೃಷ್ಣಮೂರ್ತಿ, ಮೋನಾ ಮೇಶ್ರಮ್‌, ಪೂನಮ್‌ ರಾವತ್‌, ದೀಪ್ತಿ ಶರ್ಮಾ, ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ಏಕ್ತಾ ಬಿಷ್ಠ್‌, ಸುಶ್ಮಾ ವರ್ಮಾ, ಮಾನಸಿ ಜೋಶಿ,  ರಾಜೇಶ್ವರಿ ಗಾಯಕವಾಡ್‌, ಪೂನಮ್‌ ಯಾದವ್‌, ನುಶತ್ ಪರ್ವೀನ್‌, ಸ್ಮೃತಿ ಮಂದಾನ.

ಇಂಗ್ಲೆಂಡ್‌: ಹೀದರ್ ನೈಟ್‌ (ನಾಯಕಿ), ಟಾಮಿ ಬ್ಯೂಮೌಂಟ್‌, ಕ್ಯಾಥರಿನ್‌ ಬ್ರೂಂಟ್‌, ಜಾರ್ಜಿಯ ಎಲ್ವಿಸ್‌, ಜೆನಿ ಗೂನ್‌, ಅಲೆಕ್ಸ್ ಹಾರ್ಟ್ಲಿ, ಡ್ಯಾನಿಯೆಲ್ ಹಜೆಲ್‌, ಬೇತ್‌ ಲ್ಯಾಂಗ್‌ಸ್ಟನ್‌, ಲಾರಾ ಮಾರ್ಷ್‌, ಅನ್ಯಾ ಶ್ರುಬ್‌ಸೋಲೆ, ನಥಾಲಿ  ಶಿವರ್‌, ಸಾರಾ ಟೇಲರ್‌, ಫ್ರಾನ್‌ ವಿಲ್ಸನ್‌, ಡ್ಯಾನಿಯೆಲ್‌ ವಿಟ್‌, ಲಾರೆನ್‌ ವಿನ್‌ಫೀಲ್ಡ್‌.ಪಂದ್ಯ ಆರಂಭ: ಮಧ್ಯಾಹ್ನ 3 (ಭಾರತೀಯ ಕಾಲಮಾನ)

No Comments

Leave A Comment