Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

“ಭಾರತದಿಂದ ಮಾತ್ರವೇ ವಿಶ್ವಶಾಂತಿ ಸಾಧ್ಯ’

ಉಡುಪಿ: ಅಮೆರಿಕದಲ್ಲಿ ಶ್ರೀಕೃಷ್ಣನ ಪ್ರತಿಷ್ಠೆ ನೆರವೇರಿಸಿದ್ದಕ್ಕಾಗಿ ನಡೆದ ಅಭಿನಂದನೆಯನ್ನು ಕೃಷ್ಣಾ ರ್ಪಣ ಮಾಡುವುದಾಗಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.

ಉಡುಪಿಯ ಶ್ರೀಕೃಷ್ಣನನ್ನು ಕಡಲಾಚೆಗೆ ಸಾಲಿಗ್ರಾಮ ಶಿಲೆಯಲ್ಲಿ ಕಡೆದು ನಿಲ್ಲಿಸಿರುವುದಕ್ಕಾಗಿ ಉಡುಪಿ ನಾಗರಿಕರ ಅಭಿನಂದನೆಯನ್ನು ಶನಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಪಾದರು, 25 ದೇಶಗಳಲ್ಲಿ ಜಗತ್ತನ್ನು ಸುತ್ತಾಡಿದ ಬಳಿಕ ಆದ ಅನುಭವವೆಂದರೆ ನಮ್ಮ ಧರ್ಮದ ಮೌಲ್ಯ ಶ್ರೇಷ್ಠವಾದುದು. ಜಗತ್ತಿನ ಯಾವ ರಾಷ್ಟ್ರದ ಮೇಲೂ ಆಕ್ರಮಣ ನಡೆಸದ ಭಾರತದಿಂದ ಮಾತ್ರ ಜಗತ್ತಿನಲ್ಲಿ ವಿಶ್ವಶಾಂತಿ ನೆಲೆಸಲು ಸಾಧ್ಯ. ಹೀಗಾಗಿಯೇ ಭಾರತ ಜಗದ್ಗುರುವಾಗಲಿದೆ ಎಂದರು.

ನಾವು ಯಾವುದನ್ನೂ ಮಾಡಲಿಲ್ಲ. ದಾಸರು “ಹರಿಚಿತ್ತ ಸತ್ಯ ಹರಿಚಿತ್ತ’ ಎಂದು ಹಾಡಿದಂತೆ ಶ್ರೀಕೃಷ್ಣನೇ ಎಲ್ಲವನ್ನೂ ಮಾಡಿಸಿದ. ಶ್ರೀಕೃಷ್ಣನ ಸಂಕಲ್ಪದಂತೆ ಇದೆಲ್ಲವೂ ಸಾಧ್ಯವಾಯಿತು. ಭಗವಂತನ ಯೋಜನೆಯನ್ನು ಕಂಡು ಹಿಡಿದು ಅದರಂತೆ ನಡೆದರೆ ಅದು ಯಶಸ್ವಿಯಾಗುತ್ತದೆ ಎಂದು ಪುತ್ತಿಗೆ ಶ್ರೀಗಳು ಹೇಳಿದರು.

ಶ್ಲಾಘನೀಯ: ಪೇಜಾವರ ಶ್ರೀ ವಿದೇಶ ಪ್ರಯಾಣದ ಬಗ್ಗೆ ಭಿನ್ನ ಅಭಿಪ್ರಾಯಗಳಿದ್ದರೂ ಪುತ್ತಿಗೆ ಶ್ರೀಗಳು ನಡೆಸಿದ ಸಾಧನೆ ಶ್ಲಾಘನೀಯ. ಆಂಜನೇಯ ಸಮುದ್ರವನ್ನು ಹಾರಿ ಸೀತೆಗೆ ರಾಮನ ಸಂದೇಶವನ್ನು ನೀಡಿದರೆ, ಪುತ್ತಿಗೆ ಶ್ರೀಗಳು ವಿಮಾನದಲ್ಲಿ ಹಾರಿ ರಾಮ- ಕೃಷ್ಣನ ಸಂದೇಶವನ್ನು ಬಿತ್ತಿದ್ದಾರೆ. ಅವರು ಭಾರತ- ವಿದೇಶಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಭಕ್ತಿ ಸಿದ್ಧಾಂತದ ಪ್ರಸಾರದ ಅಂಗವಾಗಿ ಅಮೆರಿಕದಲ್ಲಿ ಶ್ರೀಕೃಷ್ಣ ಪ್ರತಿಷ್ಠೆ, ಈ ಸಾಧನೆಗಾಗಿ ಅಭಿನಂದನೆ ಇವೆರಡೂ ನಮ್ಮ ಪರ್ಯಾಯ ಅವಧಿಯಲ್ಲಿ ನಡೆದುದು ಸಂತೋಷವೆನಿಸುತ್ತಿದೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ಹೇಳಿದರು.

ಇನ್ನಷ್ಟು ಅವಕಾಶ: ಡಾ| ಹೆಗ್ಗಡೆ ಭಾರತದ ಆಧ್ಯಾತ್ಮಿಕ ಸಂದೇಶವನ್ನು ಹಲವು ರಾಷ್ಟ್ರಗಳಲ್ಲಿ ಪಸರಿಸಿದ ಪುತ್ತಿಗೆ ಶ್ರೀಗಳು ತಮ್ಮ ಸಾಮರ್ಥ್ಯದಿಂದ ವಿದೇಶಗಳಲ್ಲಿ ಜನಮನ್ನಣೆ ಗಳಿಸಿದ್ದಾರೆ. ನಾವು ಸಂಪ್ರದಾಯಬದ್ಧವಾಗಿ ವಿಚಾರ
ಗಳನ್ನು ಒಪ್ಪಿದರೆ ವಿದೇಶೀಯರು ಪ್ರಶ್ನಿಸಿ ಒಪ್ಪುತ್ತಾರೆ. ಇಲ್ಲಿ ಜಾತಿ, ಊರು, ಭಾಷೆಗಳಿಂದ ಗುರುತಿಸಿಕೊಂಡರೆ ಅಲ್ಲಿ ಭಾರತೀಯತೆಯಿಂದ ಗುರುತಿಸುತ್ತಾರೆ. ಪುತ್ತಿಗೆ ಶ್ರೀಗಳಿಗೆ ಇನ್ನಷ್ಟು ಬೆಳೆಯಲು ಅವಕಾಶಗಳಿವೆ. ಅವರು ಇದರಲ್ಲಿ ಯಶಸ್ವಿಯಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಜಗತ್ತಿಗೆ ಜಗದ್ಗುರು ಸಂದೇಶ: ಪ್ರಮೋದ್‌ ಜಗದ್ಗುರು ಶ್ರೀಕೃಷ್ಣನ ಸಂದೇಶವನ್ನು ಶ್ರೀ ಪುತ್ತಿಗೆ ಶ್ರೀಗಳು ಜಗತ್ತಿಗೆ ಪಸರಿಸುತ್ತಿದ್ದಾರೆಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಶಾಸಕ ವಿನಯಕುಮಾರ ಸೊರಕೆ, ಅಮೆರಿಕ ಕನ್ನಡ ಕೂಟದ ಕಾರ್ಯದರ್ಶಿ ಚಿಕ್ಕಮಗಳೂರು ಮೂಲದ ಡಾ| ಹಳೆಕೋಟೆ ವಿಶ್ವಾಮಿತ್ರ, ವಿದ್ವಾಂಸ ಗೋಪಾಲಾಚಾರ್‌ ಅಭಿನಂದಿಸಿದರು.  ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಬೇಲಿ ಮಠದ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಚೀಟಿಯನ್ನು ಅಂಚೆ ಅಧೀಕ್ಷಕ ಜಶೇಖರ ಭಟ್‌ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು. ನಗರ ಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮೂಡಬಿದಿರೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ,  ವೈದ್ಯ ಡಾ| ಪಿ. ವಿ. ಅಶೋಕ ಕುಮಾರ್‌, ಸ್ವಾಗತ ಸಮಿತಿ ಪದಾಧಿಕಾರಿಗಳಾದ  ಕೆ. ರಘುಪತಿ ಭಟ್‌, ಶ್ರೀಕೃಷ್ಣರಾವ್‌ ಕೊಡಂಚ, ಮಂಜುನಾಥ  ಉಪಾಧ್ಯಾಯ, ಗುರ್ಮೆ ಸುರೇಶ ಶೆಟ್ಟಿ, ಶ್ರೀಕಾಂತ ಉಪಾಧ್ಯಾಯ, ನಾಗರಾಜ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು. ಬೆಳಪು ದೇವಿಪ್ರಸಾದ
ಶೆಟ್ಟಿ ಸ್ವಾಗತಿಸಿ ಆದ್ಯ ಪ್ರಸನ್ನ ಕಾರ್ಯ ಕ್ರಮ ನಿರ್ವಹಿಸಿದರು. ಬೈಕಾಡಿ ಸುಪ್ರಸಾದ ಶೆಟ್ಟಿ ವಂದಿಸಿದರು.

ಬಲಿ-ಪಾತಾಳ-ಸಗರ-ಗಂಗೆಯ ಹಿನ್ನೆಲೆ
ಪುರಾಣಗಳಲ್ಲಿ ಬಲಿ ಚಕ್ರವರ್ತಿ ಕತೆಯನ್ನು ಕೇಳುತ್ತೇವೆ. ಅವನನ್ನು ವಾಮನ ತ್ರಿವಿಕ್ರಮನಾಗಿ ಪಾತಾಳಕ್ಕೆ ಕಳುಹಿಸಿದ. ಬಲಿ “ನೀನೂ ಬಾ’ ಎಂದಾಗ ಭಗವಂತ ಕಪಿಲ ಮುನಿಯಾಗಿ ಹೋದ. ಆ ಪಾತಾಳವೇ ಅಮೆರಿಕ ಖಂಡ. ಹೀಗಾಗಿ ಅಮೆರಿಕವನ್ನು ಕಂಡು ಹಿಡಿದದ್ದು ಕೊಲಂಬಸ್‌ ಅಲ್ಲ, ಬಲಿ. ಇನ್ನೊಂದು ಕತೆಯಲ್ಲಿ ಸಗರ ಚಕ್ರವರ್ತಿ 100 ಅಶ್ವಮೇಧ ಯಾಗ ಮಾಡಲು ಸಂಕಲ್ಪಿಸಿದಾಗ 99 ಮುಗಿಯುವವರೆಗೆ ಸುಮ್ಮನಿದ್ದ ಇಂದ್ರ 100ನೆಯದನ್ನು ಮಾಡುವಾಗ ಅಶ್ವವನ್ನು ಅಪಹರಿಸಿ ಕಪಿಲ ಮುನಿಯ ಸ್ಥಳದಲ್ಲಿ ಇಟ್ಟ. ಸಗರನ ಮಕ್ಕಳು ಇದನ್ನು ನೋಡಿ ಆಕ್ರಮಣವೆಸಗಿದಾಗ ಭಸ್ಮವಾದರು. ಸಗರನ ಮೊಮ್ಮಗ ಭಗೀರಥ ಕುದುರೆ ಹುಡುಕಿಕೊಂಡು ಹೋದಾಗ ಇದೆಲ್ಲ ತಿಳಿಯಿತು. ಸತ್ತು ಹೋದ ಪೂರ್ವಜರಿಗೆ ಸದ್ಗತಿಯಾಗಲು ಪರಿಹಾರವನ್ನು ಕೇಳಿದಾಗ ಗಂಗೆಯನ್ನು ತರಿಸಲು ಹೇಳಿದ.

ಅದರಂತೆ ಮಾಡಿದ. ಈಗಲೂ ಅಲ್ಲಿ ಆ್ಯಶ್‌ಲ್ಯಾಂಡ್‌ ಎಂಬ ಜಾಗವಿದೆ. ಚಟ್ಟೋಪಾಧ್ಯಾಯ ಚಟರ್ಜಿ, ಮುಖ್ಯೋಪಾಧ್ಯಾಯ ಮುಖರ್ಜಿ, ಬಂದೋಪಾಧ್ಯಾಯ ಬ್ಯಾನರ್ಜಿ ಆದಂತೆ ಕಪಿಲ ಮುನಿಯ ಜಾಗ ಕ್ಯಾಲಿಫೋರ್ನಿಯವಾದರೆ, ಭಸ್ಮವಾದ ಜಾಗ ಆ್ಯಶ್‌ಲ್ಯಾಂಡ್‌ ಎನಿಸಿದೆ. ಹೀಗೆ ಬಲಿ, ಕಪಿಲ ಮುನಿಗಳ ಸ್ಥಳದಲ್ಲಿ ಅವರ ಸಂಕಲ್ಪವನ್ನು ಪುತ್ತಿಗೆ ಶ್ರೀಗಳು ಆಗಗೊಳಿಸಿದ್ದಾರೆ. ಉಡುಪಿಯಲ್ಲಿ ಮಧ್ವ ಕರಾರ್ಚಿತ ವಿಗ್ರಹವಿದ್ದರೆ, ಈಗ ಅಮೆರಿಕದಲ್ಲಿ ಶ್ರೀವಿಶ್ವೇಶಕರಾರ್ಚಿತ ವಿಗ್ರಹವನ್ನು ಪುತ್ತಿಗೆ ಶ್ರೀಗಳು ಪ್ರತಿಷ್ಠಾಪಿಸಿದರು. ಮಧ್ವಾಚಾರ್ಯರು ಎಂಟು ಮಠಗಳನ್ನು ಸ್ಥಾಪಿಸಿದರೆ ಪುತ್ತಿಗೆ ಶ್ರೀಗಳು ಎಂಟು ರಾಷ್ಟ್ರಗಳಲ್ಲಿ ಕೃಷ್ಣನ ಕೇಂದ್ರವನ್ನು ಸ್ಥಾಪಿಸಿದರು.
– ಶ್ರೀ ಶಿವರುದ್ರ ಸ್ವಾಮೀಜಿ, ಶ್ರೀಬೇಲಿ ಮಠಾಧೀಶರು

 

No Comments

Leave A Comment