Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಭರವಸೆ ಈಡೇರಿಸಿದಾಗ ಸಂತೃಪ್ತಿ: ಸಚಿವ ಪ್ರಮೋದ್‌

pramodಉಡುಪಿ: ಉಡುಪಿ ತಾಲೂಕು ಅಮ್ಮುಂಜೆ (ಪರಾರಿ) ಪೆರಂಪಳ್ಳಿ-ಶೀಂಬ್ರ ನಡುವೆ ಸಂಪರ್ಕ ಕಲ್ಪಿಸುವುದಕ್ಕಾಗಿ ಸ್ವರ್ಣಾ ನದಿಗೆ ನಿರ್ಮಿಸಲಾಗುವ 10 ಕೋ. ರೂ. ವೆಚ್ಚದ ಸೇತುವೆಗೆ ಶಂಕುಸ್ಥಾಪನೆ ಅ. 5ರಂದು ನೆರವೇರಿತು.

ಕೇಂದ್ರದ ಮಾಜಿ ಸಚಿವ, ರಾಜ್ಯ ಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಮತ್ತು ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣದಿಂದಾಗಿ ಜನರ ಕನಸು ನನಸಾಗುವ ಕಾಲ ಬಂದಿದೆ. ಇಲ್ಲಿನ ಜನರ ಸಂಕಷ್ಟವನ್ನು ನಾನು ಸ್ವತಃ ಕಂಡಿದ್ದೇನೆ. ಈ ಸೇತುವೆ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳ್ಳಬೇಕು. ಅಂತೆಯೇ ಈ ಭಾಗದ ಜನರಿಗೆ ಕುಡಿಯುವ ನೀರಿನ ಪೂರೈಕೆಗೂ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಸ್ಕರ್‌ ಫೆರ್ನಾಂಡಿಸ್‌ ಹೇಳಿದರು.

ಪ್ರಮುಖ ಸೇತುವೆಗಳು ಪೂರ್ಣ ಚುನಾವಣೆ ಸಂದರ್ಭ ನೀಡಿದ ಭರವಸೆಗಳ ಪೈಕಿ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸುತ್ತಿದ್ದೇನೆ. ಇದು ನನಗೆ ಸಂತೃಪ್ತಿ ನೀಡುತ್ತಿದೆ. ಪಡುಕರೆ- ಮಲ್ಪೆ ಸೇತುವೆ 13 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ನೀಲಾ ವರ-ಕೂರಾಡಿ ಸೇತುವೆ 9 ಕೋ.ರೂ. ವೆಚ್ಚದಲ್ಲಿ ಪೂರ್ಣಗೊಳ್ಳಲಿದೆ. 7 ಕೋ.ರೂ. ವೆಚ್ಚದಲ್ಲಿ ತಿಮ್ಮಣಕುದ್ರು ಸೇತುವೆ ನಿರ್ಮಾಣವಾಗಲಿದೆ. ಹೊಳಾìಲಿ- ಶೀರೂರು ಸೇತುವೆಯ ಕುರಿತಾಗಿ ಲೋಕೋಪಯೋಗಿ ಸಚಿವರ ಜತೆಗೆ ಮಾತುಕತೆ ನಡೆಸಿದ್ದೇನೆ. 2025ರ ವೇಳೆಗೆ ಪೂರ್ಣಗೊಳಿಸಬೇಕೆಂದು ತೀರ್ಮಾನಿಸಿದ್ದ ಯೋಜನೆಗಳು ಕೂಡಕಳೆದ 3 ವರ್ಷಗಳಲ್ಲೇ ಪೂರ್ಣಗೊಂಡಿವೆ.

ಉಪ್ಪೂರಿನಲ್ಲಿ 43 ಕೋ.ರೂ. ವೆಚ್ಚದಲ್ಲಿ ಸರಕಾರಿ ತಾಂತ್ರಿಕ ತರಬೇತಿ ಕೇಂದ್ರ ಆರಂಭಗೊಳ್ಳಲಿದೆ. ಶೀಂಬ್ರದಲ್ಲಿ ಎಡಿಬಿಮತ್ತು ಅಮೃತ್‌ ಯೋಜನೆಯಲ್ಲಿ 50 ಕೋ.ರೂ. ವೆಚ್ಚದಲ್ಲಿ ಸ್ವರ್ಣಾ ನದಿಗೆ ಮೂರನೇ ಅಣೆಕಟ್ಟು ನಿರ್ಮಾಣಗೊಳ್ಳ ಲಿದ್ದು ಅದರಿಂದ ಮೇಲೆತ್ತುವ ನೀರನ್ನು ಪರಾರಿ ಶೀಂಬ್ರ ಗ್ರಾಮಗಳಿಗೂ ಪೂರೈ ಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ತಿಳಿಸಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌, ಜಿ.ಪಂ. ಸದಸ್ಯರಾದ ಜನಾರ್ದನ ತೋನ್ಸೆ, ಮೈರ್ಮಾಡಿ ಸುಧಾಕರ ಶೆಟ್ಟಿ,  ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಫ‌ೂರ್‌, ಧರ್ಮಗುರುಗಳಾದ ವಿಲ್ಫೆ†ಡ್‌ ಫ್ರಾಂಕ್‌, ಡೇವಿಡ್‌ ಕ್ರಾಸ್ತಾ, ಜನಾಬ್‌ ಮಹಮ್ಮದ್‌ ಮುಸ್ಲಿಯಾರ್‌, ತಾ. ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಸಾಬೂನು ಮತ್ತು ಮಾರ್ಜಕ ನಿಗಮದ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ತಾ.ಪಂ. ಸದಸ್ಯ ದಿನಕರ ಹೇರೂರು, ನಗರ ಸಭಾ ಸದಸ್ಯರಾದ ಯುವರಾಜ್‌, ಜನಾರ್ದನ ಭಂಡಾರ್‌ಕರ್‌, ಶೋಭಾ, ನಾರಾಯಣ ಕುಂದರ್‌, ಗುತ್ತಿಗೆದಾರ ರಾದ ರವಿಕಿರಣ್‌ ಡಿ’ಕೋಸ್ತಾ ಮತ್ತುರೋಹನ್‌ ಡಿ’ಕೋಸ್ತಾ ಮೊದಲಾದ ವರು ಉಪಸ್ಥಿತರಿದ್ದರು.

ಉಪ್ಪೂರು ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕರ್ಕೇರ ಸ್ವಾಗತಿಸಿದರು. ಸುರೇಂದ್ರ ಪೂಜಾರಿ ವಂದಿಸಿದರು. ಪ್ರಶಾಂತ್‌ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು.

15 ತಿಂಗಳೊಳಗೆ ಪೂರ್ಣಗೊಳಿಸಲು ಸೂಚನೆ
ಇದು ಈ ಭಾಗದ ಜನರ ಬಹುಬೇಡಿಕೆಯ ಯೋಜನೆ. ಗುತ್ತಿಗೆದಾರರು ಸೇತುವೆ ನಿರ್ಮಾಣಕ್ಕೆ 12 ತಿಂಗಳುಗಳ ಸಮಯ ಕೇಳಿದ್ದಾರೆ. ಆದರೆ ಇದನ್ನು 15 ತಿಂಗಳೊಳಗೆ ಪೂರೈಸಿಕೊಡಬೇಕು. ಇದಕ್ಕೆ ಅಗತ್ಯ ಸಹಕಾರ ನೀಡಲು ಸರಕಾರ ಸಿದ್ಧವಿದೆ. ಅಂತೆಯೇ ಇಕ್ಕೆಲಗಳಲ್ಲಿ ಸಂಪರ್ಕ ರಸ್ತೆಗೆ ಬೇಕಾದ ಜಾಗದವರು ಕೂಡ ಸಹಕರಿಸಬೇಕು. ಅವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಪ್ರಮೋದ್‌ ತಿಳಿಸಿದರು.

ಸೇತುವೆ ಇಕ್ಕೆಲಗಳಲ್ಲಿಯೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಇಲ್ಲಿ ಸೇತುವೆ ಇಲ್ಲದ ಕಾರಣದಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಹಲವು ಮಂದಿ ದಾರಿ ಮಧ್ಯೆ ಪ್ರಾಣಬಿಟ್ಟ ಪ್ರಕರಣಗಳನ್ನು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ರಾಘವೇಂದ್ರ ರಾವ್‌ ಅವರು ಸಭೆಯಲ್ಲಿ ಪ್ರಸ್ತಾವಿಸಿದರು.

No Comments

Leave A Comment