ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಉಪಚುನಾವಣೆ ಫಲಿತಾಂಶ: ಬಿಜೆಪಿ ಸೋಲಿಗೆ ಕಾರಣವಾಯ್ತು ಸ್ಥಳೀಯ ನಾಯಕತ್ವ ಕೊರತೆ, ಒಳಜಗಳ, ತಪ್ಪು ಲೆಕ್ಕಾಚಾರ
ಕರ್ನಾಟಕ ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಆಘಾತ ನೀಡಿದ್ದು ಸುಳ್ಳಲ್ಲ. ಮೂರು ಕ್ಷೇತ್ರಗಳ ಪೈಕಿ ಕನಿಷ್ಠ 2ರಲ್ಲಿ ಗೆದ್ದೇ ಗೆಲ್ಲುವ ಭರವಸೆಯಲ್ಲಿದ್ದ ಬಿಜೆಪಿ, ಇದೀಗ ಶೂನ್ಯ ಸಾಧನೆ ಮಾಡಿದೆ. ಮೇಲ್ನೋಟಕ್ಕೆ ನಮಗೆ ಕಾಣುವುದು, ಬಿಜೆಪಿ ಕಳೆದುಕೊಂಡಿದ್ದು ಒಂದೇ ಕ್ಷೇತ್ರ. ಯಾಕೆಂದರೆ, ಉಳಿದ ಎರಡೂ ಕೂಡ, ಕಾಂಗ್ರೆಸ್ ಮತ್ತು ಜೆಡಿಎಸ್ ಸೀಟು ಆಗಿದ್ದವು ಎಂದು ವಾದ ಮಾಡಬಹುದು. ಆದರೆ, ಪರಿಸ್ಥಿತಿ ಹಾಗಿಲ್ಲ. ಸೋಲಿಗೆ ಬಿಜೆಪಿ ನಾಯಕರು ಅದೇನೇ ಕಾರಣಗಳನ್ನು ಕೊಟ್ಟರೂ, ಬಿಜೆಪಿ ಜೆಡಿಎಸ್ ಮಿತ್ರಪಕ್ಷಗಳ ಇಬ್ಬರು ಮಾಜಿ ಸಿಎಂಗಳ (ಹಾಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ) ಮಕ್ಕಳನ್ನೇ ಗೆಲ್ಲಿಸಿಕೊಂಡು ಬರಲಾಗದೆ ಮುಜುಗರಕ್ಕೆ ಒಳಗಾಗಿರುವುದು ನಿಜ.
ಹಾಗಾದರೆ ಬಿಜೆಪಿ ಸೋಲಿಗೆ ಕಾರಣಗಳೇನು? ಕಮಲ ಪಡೆ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದ್ದು ಹೇಗೆ? ಬಿಜೆಪಿ ಎಡವಿದ್ದೆಲ್ಲಿ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಹೊರಟರೆ ಹಲವು ಕಾರಣಗಳು ಕಣ್ಣಮುಂದೆ ಬರುತ್ತವೆ.
ಪ್ರಭಾವಿ ನಾಯಕತ್ವದ ಕೊರತೆ
ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಕರ್ನಾಟಕದಲ್ಲಿ ಪಕ್ಷವನ್ನು ಮುನ್ನಡೆಸುವ ಪ್ರಭಾವಿ ನಾಯಕ ಸಿಗದೇ ಬಿವೈ ವಿಜಯೇಂದ್ರ ಗೆ ಪಕ್ಷದ ಚುಕ್ಕಾಣಿ ಕೊಟ್ಟಿದ್ದರು. ಪಕ್ಷ ಕಟ್ಟಲು ವಿಜಯೇಂದ್ರ ಬೆವರು ಸುರಿಸುತ್ತಿದ್ದಾರೆ. ತನು, ಮನ ಮತ್ತು ಧನ ಅರ್ಪಿಸಿ ಶ್ರಮಿಸುತ್ತಿದ್ದಾರೆ ಎಂಬುದೇನೋ ನಿಜ. ಹಾಗೆ ನೋಡಿದರೆ, ಅವರಲ್ಲಿ ಕೆಲವು ತುಂಬಾ ಒಳ್ಳೆಯ ಗುಣಗಳಿವೆ. ಮಾತು ಕಡಿಮೆ. ಅದರಲ್ಲಿಯೂ ಪಕ್ಷದ ಸಿದ್ಧಾಂತವನ್ನು ವಿರೋಧಿಸುವವರನ್ನು ಅವರು ಘಾಸಿಗೊಳಿಸದೇ ಟೀಕಿಸುತ್ತಾರೆ! ಇವೆಲ್ಲ ಮೆಚ್ಚಬೇಕಾದದ್ದೇ. ಆದರೆ, ಅದು ಸಾಕಾಗಿಲ್ಲ ಎಂಬುದಕ್ಕೆ ಇಂದಿನ ಉಪಚುನಾವಣೆ ಸಾಕ್ಷಿ. ಕಾರಣ ಹಲವಾರು ಇರಬಹುದು; ಅವರಿಗೆ ಎಲ್ಲರನ್ನೂ ಒಳಗೊಂಡು ಕರೆದುಕೊಂಡು ಹೋಗುವ ಗುಣ ಇನ್ನೂ ಸಿದ್ಧಿಸಿಲ್ಲ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಇತ್ಯಾದಿ.
ಎಲ್ಲದಕ್ಕಿಂತ ಮುಖ್ಯವಾಗಿ, ಅವರ ಬಗ್ಗೆ ಬರೀ ಪಕ್ಷದವರಿಗೆ ಮಾತ್ರ ಅಲ್ಲ, ಹೊರಗಿನವರಿಗೂ ಒಂದು ಸಂಶಯವಿದೆ: ಅವರದ್ದು ಹೊಂದಾಣಿಕೆ ರಾಜಕಾರಣ (Adjustment Politics) ಎಂಬುದು. ಅಂದರೆ, ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಜೊತೆ ಒಳ ಒಪ್ಪಂದ ಯಾವಾಗಲೂ ಮಾಡಿದ ನಂತರವೇ ತಮ್ಮ ಪಕ್ಷದ ತಂತ್ರ ಹೆಣೆಯುತ್ತಾರೆ, ಎಂದು ಸ್ವಪಕ್ಷದ ನಾಯಕರೇ ಆರೋಪಿಸಿದ್ದಾರೆ. ಈ ಅಪವಾದದಿಂದ ಹೊರಬರದಿದ್ದರೆ, ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕದ ಬಗ್ಗೆ ಜಾಸ್ತಿ ನಿರೀಕ್ಷೆ ಇಟ್ಟುಕೊಳ್ಳುವುದು ದುರಾಸೆ ಆಗಬಹುದು ಮತ್ತು ಕರ್ನಾಟಕದಲ್ಲಿ ಪಕ್ಷ ಬೆಳೆಯುತ್ತಿದೆ ಎಂಬ ಹುಸಿ ನಿರೀಕ್ಷೆಯಲ್ಲಿದ್ದಂತಾಗುತ್ತದೆ.
ವಿಜಯೇಂದ್ರ ವೈಯಕ್ತಿಕ ಲೆಕ್ಕಾಚಾರದಿಂದ ಸಂಡೂರಿನಲ್ಲಿ ನಷ್ಟ
ಉದಾಹರಣೆಗೆ; ಸಂಡೂರನ್ನೇ ತೆಗೆದುಕೊಳ್ಳೋಣ. ಪಕ್ಷದ ಅಭ್ಯರ್ಥಿ ಅಲ್ಲಿಯವರಲ್ಲ ಎಂಬ ಗುಲ್ಲಿದೆ. ಅದರಲ್ಲಿ ನಿಜಾಂಶ ಕೂಡ ಇದೆ. ಪ್ರತಿ ಚುನಾವಣೆಗೆ ಹೊಸ ಮುಖ ತರುತ್ತಾ ಹೋದರೆ, ಹೇಗೆ ಜನ ಆ ಪಕ್ಷವನ್ನು ಗೆಲ್ಲಿಸುತ್ತಾರೆ? ವಿಜಯೇಂದ್ರ ಸ್ಥಳೀಯ ನಾಯಕತ್ವವನ್ನು ಬೆಳೆಸಬೇಕು ಎಂಬುದನ್ನು ಈ ಚುನಾವಣೆಯ ಫಲಿತಾಂಶ ಹೇಳುತ್ತಿದೆ. ವಿಜಯೇಂದ್ರ ಅವರ ಯಾವುದೋ ವೈಯಕ್ತಿಕ ಲೆಕ್ಕಾಚಾರಕ್ಕಾಗಿ ಒಂದು ಸೀಟು ಕಳೆದುಕೊಳ್ಳುವ ಸ್ಥಿತಿ ಬಿಜೆಪಿಗೆ ಬಂದಿದೆ. ಇದು ವಿಜಯೇಂದ್ರ ಅವರಿಗೆ ಒಂದು ಪಾಠ ಆಗಬೇಕಿದೆ.
ವಿಜಯೇಂದ್ರ ಬಗ್ಗೆ ವರಿಷ್ಠರಿಗೂ ಇದೆಯೇ ಗುಮಾನಿ?
ಈ ಹಿಂದೆ, ಬಿಎಸ್ ಯಡಿಯೂರಪ್ಪನವರು ಕರ್ನಾಟಕದಲ್ಲಿ ಪ್ರಭಾವಿಯಾಗಿ ಬೆಳೆದಿದ್ದಲ್ಲದೆ ಪಕ್ಷ ಸಂಘಟಿಸಿದವರು. ಪಕ್ಷ ಸಂಘಟನೆಯಲ್ಲಿ ತಾವೇ ಸೈ ಎಂದು ಬೆಳೆದವರು. ಆದರೆ, ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಪಕ್ಷದ ತಳಮಟ್ಟದ ನಾಯಕರನ್ನು ಕಡೆಗಣಿಸಿದ್ದು, ಪಕ್ಷದ ವರ್ಚಸ್ಸನ್ನು ಮೀರಿ ಬೆಳೆಯಲು ಯತ್ನಿಸಿದ್ದು ಕಣ್ಣಮುಂದಿದೆ. ಅನಿವಾರ್ಯ ಸಂದರ್ಭದಲ್ಲಿ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಬಿಜೆಪಿ ಹೈಕಮಾಂಡ್ಗೆ ಯಡಿಯೂರಪ್ಪನವರ ಹಾದಿಯಲ್ಲಿಯೇ ವಿಜಯೇಂದ್ರ ಸಾಗಿದರೆ ಎಂಬ ಅನುಮಾನವೂ ಇದ್ದಂತಿದೆ. ಇದೇ ಕಾರಣದಿಂದ ಅವರಿಗೆ ತಡೆಯೊಡ್ಡುವುದಕ್ಕೋ ಏನೋ, ಕೆಲವು ಹಿರಿಯ ನಾಯಕರನ್ನು ಅವರ ವಿರುದ್ಧ ಮುಂದೆ ಬಿಟ್ಟಂತಿದೆ! ಬಸನಗೌಡ ಯತ್ನಾಳ್ ಅವರಂಥ ನಾಯಕರು ವಿಜಯೇಂದ್ರ ವಿರುದ್ಧ ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದಾಗ ಈ ಅನುಮಾನ ಮೂಡುವುದು ಸಹಜ. ಇಂತಹ ನಾಯಕರು, ಪದೇಪದೇ ಪಕ್ಷ ವಿರೋಧಿ ಧ್ವನಿ ಎತ್ತುತ್ತಿರುವುದು ಕಾಂಗ್ರೆಸ್ಗೆ ಲಾಭವಾಗಿದೆ. ಈ ರೀತಿಯ ರಾಜಕೀಯ ನಿಲ್ಲದೇ ಹೋದಲ್ಲಿ, ವಿಜಯೇಂದ್ರ ಅವರಿಂದ ಮಹಾ ಬದಲಾವಣೆಯನ್ನು ನಿರೀಕ್ಷೆ ಮಾಡಲಾಗದು.
ಸೋಲಿನಲ್ಲೂ ಸಮಾಧಾನ!
ಒಂದೊಮ್ಮೆ ಶಿಗ್ಗಾಂವಿ, ಸಂಡೂರಿನಲ್ಲಿ ಬಿಜೆಪಿ ಗೆದ್ದು ಜೆಡಿಎಸ್ ಚನ್ನಪಟ್ಟಣದಲ್ಲಿ ಸೋತಿದ್ದರೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಗಾದೆ ತೆಗೆಯುತ್ತಿದ್ದರು. ವಿಜಯೇಂದ್ರ ಮತ್ತು ಬಿಜೆಪಿ ಸ್ಥಳೀಯ ನಾಯಕರ ಬಗ್ಗೆ ತಗಾದೆ ಎತ್ತುವುದರ ಜತೆಗೆ, ಕೇಂದ್ರ ಬಿಜೆಪಿ ನಾಯಕರಿಗೆ ದೂರು ನೀಡುತ್ತಿದ್ದರು. ಎಲ್ಲ ಕ್ಷೇತ್ರವಗಳನ್ನೂ ಕಾಂಗ್ರೆಸ್ ಗೆದ್ದಿರುವುದರಿಂದ, ಈಗ ಕುಮಾರಸ್ವಾಮಿ ಅದನ್ನು ಹೇಳಲಾಗದು. ಆ ದೃಷ್ಟಿಯಿಂದ, ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದ್ದು ಒಂದು ದೃಷ್ಟಿಯಿಂದ ಬಿಜೆಪಿಗೆ ಸಮಾಧಾನದ ವಿಷಯ ಎನ್ನಬಹುದೇನೋ!
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವುದಿಲ್ಲ ಎಂಬುದು ಬಿಜೆಪಿ ಕೇಂದ್ರ ನಾಯಕರಿಗೆ ಗೊತ್ತಿತ್ತು. ಅದನ್ನು ಕುಮಾರಸ್ವಾಮಿಗೆ ತಿಳಿಸಿದ್ದರು ಎಂಬುದು ಸರ್ವವೇದ್ಯ. ಹೀಗಿದ್ದರೂ, ಕುಮಾರಸ್ವಾಮಿ ಯಾಕೆ ನಿಖಿಲ್ ಅವರನ್ನೇ ಕಣಕ್ಕಿಳಿಸಿ ರಿಸ್ಕ್ ತೆಗೆದುಕೊಂಡರು ಎಂಬುದು ಯಕ್ಷ ಪ್ರಶ್ನೆ.
ಬಸವರಾಜ ಬೊಮ್ಮಾಯಿ ವೈಫಲ್ಯ
ಇನ್ನು ಬಸವರಾಜ ಬೊಮ್ಮಾಯಿ ಮಗ ಭರತ್ ಸೋತಿದ್ದರ ಕುರಿತು ಹೇಳುವುದಾದರೆ, ಇದು ಬೊಮ್ಮಾಯಿಯದ್ದೇ ವೈಫಲ್ಯ. ವೈಯಕ್ತಿಕ ನೆಲೆಗಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಏನೇ ಹೇಳಬಹುದು, ಆದರೆ, ಅವರನ್ನು ನಾಯಕನಾಗಿ ಬೆಳೆಸಲು ಎಂದು ಬಿಜೆಪಿ ಮಾಡಿದ ಸಾಹಸ, ಅಷ್ಟಿಷ್ಟಲ್ಲ. ಇಂದಿನ ಫಲಿತಾಂಶ ಅವರ ನಾಯಕತ್ವಕ್ಕೆ ಹಿಡಿದ ಕನ್ನಡಿ. ಮೊದಲನೆಯದಾಗಿ, ಶಿಗ್ಗಾವಿಯಲ್ಲಿ ಪಕ್ಷದ ಕಾರ್ಯಕರ್ತರೊಬ್ಬರನ್ನು ನಿಲ್ಲಿಸಿ ಬೆಳೆಸುವ ಉದಾರತೆಯನ್ನು ಬೊಮ್ಮಾಯಿ ತೋರಲಿಲ್ಲ. ಇದೇ ಕಾರಣಕ್ಕಾಗಿಯೇ, ಬೊಮ್ಮಾಯಿ ಅವರ ಮಗನ ವಿರುದ್ಧ ಪಕ್ಷದ ಕೆಲ ಕಾರ್ಯಕರ್ತರು ಒಳ ಹೊಡೆತ ಕೊಟ್ಟಿರುವ ಗುಮಾನಿ ಇದೆ. ಅದರ ಜೊತೆಗೆ ಇನ್ನೊಂದು ಅಂಶವನ್ನು ಬಹಳ ಜನ ಮರೆಯುತ್ತಾರೆ. ಅದು ಅವರ ನಾಯಕತ್ವದ ಬಗ್ಗೆ ಇರುವ ಪ್ರಶ್ನೆ.
‘ನಿಜವಾಗಿ ಮುಕ್ತ ಅಧಿಕಾರ ಸಿಕ್ಕಿರಲಿಲ್ಲ. ಸಿಎಂ ಆಗಿದ್ದಾಗಲೂ ಮುಕ್ತವಾಗಿ ಬಿಟ್ಟಿರಲಿಲ್ಲ. ಕೇಂದ್ರದ ನಾಯಕರು ನನಗೆ ಇನ್ನಷ್ಟು ಅಧಿಕಾರ ಕೊಟ್ಟಿದ್ದರೆ, ಮುಖ್ಯಮಂತ್ರಿಯಾಗಿ ಬದಲಾವಣೆ ಮಾಡುತ್ತಿದ್ದೆ’ ಎಂದು ಅವರು ವೈಯಕ್ತಿಕ ನೆಲೆಗಟ್ಟಿನಲ್ಲಿ ಹಲವು ಬಾರಿ ಹೇಳಿದ್ದಾರೆ. ಆದರೆ, ಅವರ ವಾದವನ್ನು ಪಕ್ಷದ ಕಾರ್ಯಕರ್ತರು ಮತ್ತು ಜನ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಅವರ ಬಗ್ಗೆ ಕೂಡ ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಆರೋಪ ಇದೆ. ಇದಕ್ಕೆ ಈಗ ಬೊಮ್ಮಾಯಿ ಹಾಗೂ ಪಕ್ಷ ತೆತ್ತಿರುವ ಬೆಲೆ ಅಷ್ಟಿಷ್ಟಲ್ಲ.