ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವದ ಸ೦ಭ್ರಾಮಾಚರಣೆ ಅದ್ದೂರಿಯ ಚಾಲನೆ

ನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆ ಇಂದಿನ ಅಗತ್ಯವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹೇಳಿದರು.

ಭಾನುವಾರ ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಂಗದ ಪ್ರಕ್ರಿಯೆಗಳು ವರ್ಚುವಲ್ ಮೂಲಕ ನಡೆಸುವುದರಿಂದ ಕಕ್ಷಿದಾರರಿಗೆ ಪಾರದರ್ಶಕತೆ ತೋರ್ಪಡಿಸುವುದರ ಜೊತೆಗೆ ನ್ಯಾಯಾಧೀಕರಣದ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸಲು ಪೂರಕವಾಗುತ್ತದೆ. ಮಾತ್ರವಲ್ಲದೇ ಕಕ್ಷಿದಾರರಿಗೆ ಸಮಯ ಮತ್ತು ಹಣದ ಉಳಿತಾಯವೂ ಸಾಧ್ಯ ಎಂದವರು ಪ್ರತಿಪಾದಿಸಿದರು.

ವಿಳಂಬ ನ್ಯಾಯದಾನದ ಹಿನ್ನೆಲೆಯಲ್ಲಿ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳ ವಿಲೇ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆಯ ತೀರ್ಮಾನ ಮತ್ತು ಲೋಕ ಅದಾಲತ್ ಮೂಲಕ ಸಾಧ್ಯವಾದಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಹಾಗೂ ವ್ಯಾಜ್ಯಗಳನ್ನು ಪದೇ ಪದೇ ಮುಂದೂಡುವುದು ಅಪೇಕ್ಷಣೀಯವಲ್ಲ ಎಂದು ನ್ಯಾ. ಅರವಿಂದಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ| ಎನ್.ವಿ ಅಂಜಾರಿಯಾ, ನ್ಯಾಯಾಂಗ ಮತ್ತು ಸಾರ್ವಜನಿಕರ ನಡುವೆ ಅವಿನಾಭಾವ ಸಂಬಂಧ ಇದೆ. ವಕೀಲರು ಮತ್ತು ನ್ಯಾಯಾಧೀಶರು ನ್ಯಾಯದಾನದಲ್ಲಿ ನೈತಿಕತೆ, ನ್ಯಾಯಪರತೆ ಹೊಂದಿರಬೇಕು. ಹೊಸ ಹೊಸ ನ್ಯಾಯಾಲಯಗಳ ಸ್ಥಾಪನೆಯೊಂದಿಗೆ ಪೂರಕ ಮೂಲಭೂತ ಸೌಕರ್ಯ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಹೈಕೋರ್ಟ್ ನ್ಯಾಯಾಧೀಶ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ| ಇ.ಎಸ್. ಇಂದಿರೇಶ್, 125ರ ಸ್ಮರಣ ಸಂಚಿಕೆ ನಾವರಣಗೊಳಿಸಿದರು.

ವಿಶೇಷ ಆಹ್ವಾನಿತರಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಎಸ್. ಶೆಟ್ಟಿ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆಗಮಿಸಿದ್ದರು.
ಅಭ್ಯಾಗತರಾಗಿದ್ದ ಕಾನೂನು ಸಚಿವ ಎಚ್.ಕೆ. ಪಾಟೀಲ್, ನ್ಯಾಯಾಲಯಗಳು ಮತ್ತು ವಕೀಲರು ಗಾಡಿಯೊಂದರ ಚಕ್ರಗಳಿದ್ದಂತೆ. ಕಕ್ಷಿದಾರರಿಗೆ ನ್ಯಾಯ ನೀಡುವಲ್ಲಿ ಇವರೀರ್ವರ ಪಾತ್ರ ಮಹತ್ತರವಾದುದು. ಕಾರ್ಯಾಂಗ ಮತ್ತು ಶಾಸಕಾಂಗಗಳಿಗಿಂತ ಜನತೆ ನ್ಯಾಯಾಂಗದಲ್ಲಿ ಹೆಚ್ಚಿನ ವಿಶ್ವಾಸ ಇರಿಸಿಕೊಂಡಿದ್ದಾರೆ. ಸಮರ್ಪಕ ನ್ಯಾಯದಾನ ನ್ಯಾಯಾಂಗದ ಆಶಯ ಎಂದರು.
ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ| ಎಂ.ಜಿ. ಉಮಾ, ನ್ಯಾ| ರಾಮಚಂದ್ರ ಡಿ. ಹುದ್ದಾರ್ ಮತ್ತು ನ್ಯಾ| ಟಿ. ವೆಂಕಟೇಶ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಉಡುಪಿ ವಕೀಲರ ಸಂಘದ ಸದಸ್ಯರಾಗಿ, ನ್ಯಾಯಾಧೀಶರಾಗಿ ಮತ್ತು ಸರಕಾರಿ ಅಭಿಯೋಜಕರಾಗಿ ಆಯ್ಕೆಯಾಗಿ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಉಡುಪಿ ವಕೀಲರ ಸಂಘದ ಮಾಜಿ ಸದಸ್ಯರಿಗೆ ಮತ್ತು ವಕೀಲರ ಸಂಘದ ಮಾಜಿ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.

ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಆಸ್ಪತ್ರೆಯಿಂದ ಉಡುಪಿ ವಕೀಲರ ಸಂಘದ ಸದಸ್ಯರಿಗೆ ನೀಡಲಾಗುವ ವಿಶಿಷ್ಟ ಆರೋಗ್ಯ ಕಾರ್ಡನ್ನು ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಸಮ್ಮುಖದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನ್ಯಾ| ಎಸ್.ವಿ. ಅಂಜಾರಿಯಾ ಬಿಡುಗಡೆ ಮಾಡಿದರು.

ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನಾಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು. ಶತಮಾನೋತ್ತರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಸ್ತಾವನೆಗೈದರು.ಹಿರಿಯ ವಕೀಲೆ ಮೇರಿ ಶ್ರೇಷ್ಠ ನಿರೂಪಿಸಿದರು.

ಅದಕ್ಕೂ ಮುನ್ನ ನಗರದ ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಆಂಧ್ರ ಪ್ರದೇಶದ ರಾಜ್ಯಪಾಲ ನ್ಯಾ| ಅಬ್ದುಲ್ ನಜೀರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜೇಶ್, ಶತಮಾನೋತ್ತರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಜಿಲ್ಲಾ ನ್ಯಾಯಾಲಯದ ವರೆಗೆ ಸಾಗಿಬಂದರು. ಕಲಶ ಹಿಡಿತ ವಕೀಲೆಯರು, ಚೆಂಡೆಯೊಂದಿಗೆ ವಯಲಿನ್, ಕೊಂಬು, ಹುಲಿವೇಷ, ಬ್ಯಾಂಡ್, ಗೊಂಬೆ ವೇಷಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ವಕೀಲರು, ವೈಕುಂಠ ಬಾಳಿಗ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ವ್ಯಾಜ್ಯ ಮುಂದೂಡಿಕೆ ಅನಿವಾರ್ಯ
ವಿಶೇಷ ಆಮಂತ್ರಿತರಾಗಿದ್ದ ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ| ಎಸ್. ಅಬ್ದುಲ್ ನಝೀರ್, ನ್ಯಾಯಾಧಿಕರಣ ಪ್ರಕ್ರಿಯೆಯಲ್ಲಿ ವ್ಯಾಜ್ಯಗಳ ಮುಂದೂಡಿಕೆ ಅನಿವಾರ್ಯ ಎಂದು ಪ್ರತಿಪಾದಿಸಿದರು. ಜಿಲ್ಲಾ, ರಾಜ್ಯ ಮತ್ತು ಸುಪ್ರೀಂ ಕೋರ್ಟ್‍ಗಳಲ್ಲಿ ಪ್ರತಿದಿನ ಸಾವಿರಾರು ವ್ಯಾಜ್ಯ ಪ್ರಕರಣಗಳ ಮಂಡನೆಯಾಗುತ್ತಿದ್ದು, ನ್ಯಾಯಾಧೀಶರು ಎಷ್ಟೇ ಪಂಡಿತವಾಗಿದ್ದರೂ 2-3 ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲು ಸಾಧ್ಯ. ಈ ನಿಟ್ಟಿನಲ್ಲಿ ವ್ಯಾಜ್ಯಗಳ ಮುಂದೂಡುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.

 

 

No Comments

Leave A Comment