ಚಿಕ್ಕಮಗಳೂರು: ಡಿಸೆಂಬರ್​ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್​

ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್‌

ಮೈಸೂರು, ನವೆಂಬರ್​ 13: ಮುಡಾ ಹಗರಣದ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಿನ್ನೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ನೀಡಿದ್ದ ದೂರಿನ ಆಧಾರದ ಮೇಲೆ ಇಂದು ಎಫ್ಐಆರ್ ದಾಖಲಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಮುಡಾದಿಂದ ಪಡೆದ ಸೈಟ್​ ಕ್ರಯಪತ್ರದ ಮುದ್ರಾಂಕ ಶುಲ್ಕದ ಬಗ್ಗೆ ಸ್ನೇಹಮಯಿ ಕೃಷ್ಣ ಆಕ್ಷೇಪಿಸಿದ್ದರು. ಹೀಗಾಗಿ ಸ್ನೇಹಮಯಿ ಕೃಷ್ಣ ಬ್ಲಾಕ್​ಮೇಲ್ ಮಾಡುತ್ತಿದ್ದಾರೆ. ಪ್ರತಿ ನಿತ್ಯ ಸಿಎಂ ವಿರುದ್ಧ ಒಂದಿಲ್ಲೊಂದು ಆರೋಪಮಾಡಿ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಎಂ.ಲಕ್ಷ್ಮಣ ದೂರು ನೀಡಿದ್ದರು. ಹೀಗಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ತೇಜೋವಧೆ ಮಾಡುವುದಲ್ಲದೆ ಜನಸಾಮಾನ್ಯರಲ್ಲಿ ತಪ್ಪು ಕಲ್ಪನೆ ಮತ್ತು ತಪ್ಪಿತಸ್ಥರು ಎಂದು ಬಿಂಬಿಸುವ ಕೆಲಸವನ್ನು ಕಳೆದ 2 ತಿಂಗಳುಗಳಿಂದ ಸ್ನೇಹಮಯಿ ಕೃಷ್ಣರವರು ಮಾಡುತ್ತಿದ್ದಾರೆ. ಇದಲ್ಲದೆ ಇವರು ಮತ್ತು ಟಿಜೆ ಅಬ್ರಹಾಂ ರವರು ನ್ಯಾಯಲಯದ ಮೊರೆ ಹೋಗಿ ಮುಡಾ ವಿಚಾರಕ್ಕೆ ಲೋಕಾಯುಕ್ತ ತನಿಖೆಗೆ ವಹಿಸಬೇಕೆಂದು ಕೋರಿಕೊಂಡಿದ್ದರಿಂದ ನ್ಯಾಯಲಯ ಲೋಕಾಯುಕ್ತ ತನಿಖೆ ನಡೆಸಲು ಆದೇಶ ಮಾಡಿದೆ.

ಅದರಂತೆ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಆದರೆ ಸ್ನೇಹಮಯಿ ಕೃಷ್ಣರವರು ಲೋಕಾಯುಕ್ತ ತನಿಖೆ ಸರಿಯಾಗಿ ನಡೆಯುತ್ತಿಲ್ಲವೆಂದು ಮತ್ತು ತನಿಖಾಧಿಕಾರಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿಗೆ ದೂರನ್ನು ನೀಡುವುದಲ್ಲದೆ ತನಿಖಾಧಿಕಾರಿಯವರಿಗೆ ದಿನನಿತ್ಯ ಬ್ಲಾಕ್​ಮೇಲ್ ಮತ್ತು ಒತ್ತಡ ಹೇರಲಾಗುತ್ತಿದೆ. ತನಿಖೆಯ ವರದಿಯನ್ನು ನ್ಯಾಯಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಇನ್ನೂ ಸಲ್ಲಿಲ್ಲ. ತನಿಖೆ ಇನ್ನು ವಿಚಾರಣೆ ಹಂತದಲ್ಲಿರುವಾಗ ತನಿಖೆ ಸರಿಯಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣಗೆ ಸ್ನೇಹಮಯಿ ಕೃಷ್ಣ ಸವಾಲು

ಇನ್ನು ಅತ್ತ ಎಫ್ಐಆರ್​ ದಾಖಲಾಗುತ್ತಿದ್ದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣಗೆ ಸ್ನೇಹಮಯಿ ಕೃಷ್ಣ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಟ್ವಿಟರ್ ಖಾತೆಯಲ್ಲಿ ಬಿಡುಗಡೆಯಾಗಿದ್ದ ಧ್ವನಿ ಬಗ್ಗೆ ಸವಾಲು ಹಾಕಿದ್ದಾರೆ.  ಟ್ವಿಟರ್ ಖಾತೆಯಲ್ಲಿ ಬಿಡುಗಡೆಯಾಗಿರುವ ಹೇಳಿಕೆ ಯಾರೆಂದು ಪತ್ತೆ ಹಚ್ಚಿ. ಅದು ನನ್ನ ಧ್ವನಿ ಎಂದು ಎಫ್​ಎಸ್​ಎಲ್​ ವರದಿಯಲ್ಲಿ ದೃಢಪಟ್ಟರೆ ಹೋರಾಟ ನಿಲ್ಲಿಸುವೆ. ನಿಮ್ಮ ಧ್ವನಿ ಎಂದು ದೃಢಪಟ್ಟರೆ ರಾಜಕೀಯ ನಿವೃತ್ತಿ ಆಗ್ತೀರಾ ಎಂದು ಸವಾಲು ಹಾಕಿದ್ದಾರೆ.

ನಿಮ್ಮದೇ ಸರ್ಕಾರವಿದೆ, ಎಫ್​ಎಸ್​ಎಲ್​ಗೆ ಕಳುಹಿಸಿ ವರದಿ ಪಡೆದು ಬಿಡುಗಡೆ ಮಾಡಿ. ನನ್ನ ಧ್ವನಿ ಎಂದು ಒಪ್ಪಿಕೊಳ್ಳಲಾರದ ಹೇಡಿ ಎಂದು ನಿಮ್ಮ ಬಗ್ಗೆ ಜನ ಆಡಿಕೊಳ್ಳುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಎಂ.ಲಕ್ಷ್ಮಣ ವಿರುದ್ಧ ಸ್ನೇಹಮಯಿ ಕೃಷ್ಣ ಕಿಡಿಕಾರಿದ್ದಾರೆ.

No Comments

Leave A Comment