ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಡಿಸೆಂಬರ್ನಲ್ಲಿ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ: ಸ್ಫೋಟಕ ಸುಳಿವು ನೀಡಿದ ಜಾರಕಿಹೊಳಿ
ರಾಯಚೂರು:ನ,11: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗಳು ನಡೆದಿವೆ. ವಿಜಯೇಂದ್ರ ವಿರೋಧಿ ಬಣ ಮತ್ತಷ್ಟು ಬಲಿಷ್ಠವಾಗಿದ್ದು, ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಈಗಾಗಲೇ ಹಲವು ಸಭೆಗಳನ್ನು ಮಾಡಿ ತಮ್ಮ ಬೇಡಿಕೆಯನ್ನು ಹೈಕಮಾಂಡ್ಗೆ ರವಾನಿಸಿದೆ. ಹೀಗಾಗಿ ಡಿಸೆಂಬರ್ ಅಥವಾ ಜನವರಿಯಲ್ಲಿ ವಿಜಯೇಂದ್ರ ಬದಲಾವಣೆಯಾಗುತ್ತೆ ಎನ್ನುವ ಚರ್ಚೆಗಳು ನಡೆದಿವೆ. ಇದಕ್ಕೆ ಪೂರಕವೆಂಬಂತೆ ರಮೇಶ್ ಜಾರಕಿಹೊಳಿ ಸಹ ಕೆಲವೊಂದಿಷ್ಟು ಸೂಕ್ಷ್ಮ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ರಾಯಚೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ವಿಜಯೇಂದ್ರ ಇರುವವರೆಗೂ ನಾನು ಪ್ರಚಾರಕ್ಕೆ ಹೋಗಲ್ಲ. ವಿಜಯೇಂದ್ರ ಅಧ್ಯಕ್ಷ ಎಂದು ಒಪ್ಪಿಲ್ಲ, ಒಪ್ಪುವುದಿಲ್ಲ. ಅವರ ಸ್ಥಾನಮಾನದ ಕೆಲಸಕ್ಕೆ ನಾನು ವಿರೋಧ ಮಾಡಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವರಿಷ್ಠರು ತೀರ್ಮಾನಿಸುತ್ತಾರೆ. ಬಹಿರಂಗವಾಗಿ ನಾನು ಕೆಲವೊಂದು ವಿಷಯಗಳನ್ನ ಹೇಳಲ್ಲ. ಡಿಸೆಂಬರ್ ಅಥವಾ ಜನವರಿಯಲ್ಲಿ ಏನಾದ್ರೂ ನಿರ್ಣಯ ಆಗುತ್ತೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಬಿ.ವೈ.ವಿಜಯೇಂದ್ರ ಕಾರ್ಯವೈಖರಿ ಬಗ್ಗೆ ನನಗೆ ತೃಪ್ತಿ ಇಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾದಾಗ ಎಂಪಿ ಚುನಾವಣೆ ಇತ್ತು. ಮೋದಿ ಪ್ರಧಾನಿ ಆಗಲೆಂದು ಎಲ್ಲ ನುಂಗಿ ಕೆಲಸ ಮಾಡಿದ್ದೇವೆ. ಅದು ಮುಗಿದ ಬಳಿಕ ವರಿಷ್ಠರಿಗೆ ಎಲ್ಲಾ ಹೇಳಿದ್ದೇವೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಏನಾದ್ರೂ ನಿರ್ಣಯ ಆಗುತ್ತೆ. ನೋಡೋಣ ಆ ಆಶಾಭಾವನೆಯಲ್ಲಿದ್ದೇವೆ ಎಂದರು.
ವಿಜಯೇಂದ್ರ ವಿರುದ್ಧ ಟೀಂ ಕಟ್ಟಿದ್ರಾ ಜಾರಕಿಹೊಳಿ..?
ಯತ್ನಾಳ್ ಬಸನಗೌಡ ನಾವು ಒಂದು ಟೀಂ ಆಗಿ ರಾಜ್ಯದಲ್ಲಿ ಪ್ರವಾಸ ಆರಂಭಿಸಿದ್ದೇವೆ. ಪಕ್ಷದ ಇತಿಮಿತಿಯಲ್ಲಿ ಕೆಲಸ ಸ್ಟಾರ್ಟ್ ಮಾಡಿದ್ದೇವೆ. ಇದಕ್ಕೆ ಬೇರೆ ಅರ್ಥ ಮಾಡಿಕೊಳ್ಳೋವಂಥದ್ದೇನಿಲ್ಲ. ಇನ್ನೂ ಹತ್ತು ಹನ್ನೇರಡು ಜನ ನಾಯಕರು ಬೆಳಗಾವಿಯಲ್ಲಿ ಸಭೆ ಮಾಡಿದ್ದೇವೆ. ಮಾದ್ಯಮದಲ್ಲಿ ಮಾತನಾಡಲಾಗಲ್ಲ. ಪಕ್ಷದ ಚೌಕಟ್ಟಿನಲ್ಲಿ ಬೆಂಗಳೂರಿನ ಸಭೆಯಲ್ಲಿ ನೇರವಾಗಿ ಏನು ಹೇಳಬೇಕು ಹೇಳಿದ್ದೇವೆ. ಡಿಸೆಂಬರ್ ಒಳಗೆ ಎಲ್ಲವೂ ಸರಿ ಆಗತ್ತೆ.
ಕೆಲಸ ಮಾಡೋದಕ್ಕೆ ಗುಂಪು ಗಾರಿಕೆ ಅಂತ ಆಗತ್ತೆ. ನಮ್ಮ ಮುಂದಿನ ದಿನದಲ್ಲಿ ಒಂದು ವರ್ಷದಲ್ಲಿ ಇಲೆಕ್ಷನ್ ಬರತ್ತೋ, ಎರಡು ವರ್ಷದಲ್ಲಿ ಬರತ್ತೋ ಗೊತ್ತಿಲ್ಲ. ಯಾವಾಗ ಬರತ್ತೆ ಆವಾಗ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಈ ವರೆಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿಲ್ಲ. 130-140 ಸ್ಥಾನ ಬರೋದಕ್ಕೆ ಟೀಂ ಮಾಡಿ ಕೆಲಸ ಮಾಡ್ತಿದ್ದೇವೆ. ನಮಗೆ ಸಿಎಂ ಸ್ಥಾನ ಬೇಡ್ತಿಲ್ಲ ಏನಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು ಅಂತ ಟೀಂ ಮಾಡಿದ್ದೇವೆ. ಕಾಂಗ್ರೆಸ್ ನಲ್ಲಿ ಐದು ಬಾರಿ ಶಾಸಕ ಆಗಿದ್ದೇನೆ. ಬಿಜೆಪಿಯಲ್ಲಿ ಎರಡು ಬಾರಿ ಆಗಿದ್ದೇನೆ. ಬಿಜೆಪಿಯಲ್ಲಿ ಬಂಗಾರದಂತಹ ಕಾರ್ಯಕರ್ತರು ಇದ್ದಾರೆ. ಯಾರು ಬಿ ಫಾರ್ಮ್ ತರ್ತಾರೋ ಗೊತ್ತಿರಲ್ಲ. ಈ ವರೆಗೆ 110 ದಾಟಿಲ್ಲ. ಮುಂದೆ 130-140 ಸೀಟು ತರಲು ಟೀಂ ಮಾಡಿದ್ದೇವೆ ಎಂದು ಹೇಳಿದರು.
ಯತ್ನಾಳ್, ಜಾರಕಿಹೊಳಿ ಇಬ್ಬರಲ್ಲ.. ಸಾಮೂಹಿಕ ನಾಯಕತ್ವ ಬೇಕು. ಒಬ್ಬರೇ ನಾಯಕತ್ವ ಕೊಟ್ಟು ಬಿಜೆಪಿ ಹೀಗಾಗಿದೆ. 20-25 ಲೀಡರ್ಸ್ ತಯಾರು ಮಾಡಿ ಟಾಸ್ಕ್ ಕೊಡಿ. ಒಬ್ಬರು ಬಿಟ್ಟು ಹೋದ್ರೆ 24 ಜನ ಉಳಿತಾರೆ ಅಂತ ಹೇಳಿದ್ದೇವೆ. ಒಬ್ಬರ ಮೇಲೆ ಡಿಪೆಂಡ್ ಆಗಬಾರದು. ಆ ಪ್ರಕಾರ ನಾಯಕರು ತೀರ್ಮಾನ ತೆಗೆದುಕೊಳ್ತಾರೆ. ನನಗೆ ಆರು ಜಿಲ್ಲೆ, ಯತ್ನಾಳ್ ಆರು ಜಿಲ್ಲೆ, ಪ್ರತಾಪ್ ಸಿಂಹ ನಾಲ್ಕು ಜಿಲ್ಲೆ, ಲಿಂಬಾವಳಿ ಕೆಲವು ಜಿಲ್ಲೆ. ಹೀಗೆ ತೀರ್ಮಾನ ಮಾಡಿದ್ದೇವೆ. ಪಕ್ಷ ಸಂಘಟನೆಗೆ ಯಾರೂ ಬೇಡ ಅನ್ನಲ್ಲ. ನಾವೇನು ಅಧ್ಯಕ್ಷ ಮಾಡು ಅಂತ ಬೇಡಿಲ್ಲ. ವಿಪಕ್ಷ ನಾಯಕ ಮಾಡಿ ಅಂದಿಲ್ಲ. ನಮ್ಮ ಕಾರ್ಯಕರ್ತರು ಭಾರಿ ನರ್ವಸ್ ಆಗಿದ್ದಾರೆ. ಅವರನ್ನ ಹೊರ ತಂದು ಪಕ್ಷ ಸಂಘಟನೆ ಮಾಡಲು ಇದನ್ನ ಮಾಡಿದ್ದೇವೆ. ವಮುಂದಿನ ವಾರ ಬಳ್ಳಾರಿಗೆ ಹೋಗ್ತಿನಿ ಎಂದರು.
ಬಿವೈ ವಿಜಯೇಂದ್ರ ವಿರುದ್ಧ ಕೆಲ ಸ್ವಪಕ್ಷದ ನಾಯಕರೇ ಸಿಡಿದೆದ್ದಿದ್ದು, ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಈಗಾಗಲೇ ವಿಜಯೇಂದ್ರ ವಿರೋಧಿ ಬಣದ ನಾಯಕರು ಕೆಲ ಸಭೆಗಳನ್ನು ಮಾಡಿದ್ದು, ವಿಜಯೇಂದ್ರ ಬದಲಾವಣೆಗೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಸದ್ಯ ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರಿಂದ ಈ ಬಗ್ಗೆ ಯಾವುದೇ ಗಮನಕೊಟ್ಟಿಲ್ಲ. ಆದ್ರೆ, ಡಿಸೆಂಬರ್ ಅಥವಾ ಜನವರಿಯಲ್ಲಿ ವಿಜಯೇಂದ್ರ ಭವಿಷ್ಯ ನಿರ್ಧಾರವಾಗಲಿದೆ ಎನ್ನುವ ಚರ್ಚೆಯಂತೂ ಪಕ್ಷದಲ್ಲಿ ನಡೆದಿದೆ. ಹೀಗಾಗಿ ಹೈಕಮಾಂಡ್ ವಿಜಯೇಂದ್ರ ವಿಚಾರದಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.