ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶನ, ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಹೊಡೆದಾಟ
ಸಂವಿಧಾನದ 370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಯಿತು. ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹಮದ್ ಬ್ಯಾನರ್ ಪ್ರದರ್ಶಿಸಿದ್ದರು. ಇದಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾನರ್ ಕಿತ್ತುಕೊಳ್ಳಲು ಮುಂದಾದ ಬಿಜೆಪಿ ಶಾಸಕರು, ಪಿಡಿಪಿ, ಎನ್ಸಿ ಶಾಸಕರ ನಡುವೆ ಹೊಡೆದಾಟವೇ ನಡೆಯಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ಮರು ಜಾರಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಗೊತ್ತುವಳಿಯನ್ನು ಭಾರಿ ಗದ್ದಲದ ನಡುವೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಅಂಗೀಕರಿಸಿದೆ.
ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಗೊತ್ತುವಳಿ ಮಂಡಿಸಿದ ಉಪಮುಖ್ಯಮಂತ್ರಿ ಸುರಿಂದರ್ ಚೌದರಿ ಅವರು, ವಿಶೇಷ ಸ್ಥಾನಮಾನದ ಮಹತ್ವ ಮತ್ತು ರಾಜ್ಯದ ಜನರ ಹೆಗ್ಗುರುತು, ಸಂಸ್ಕೃತಿ ಹಾಗೂ ಹಕ್ಕುಗಳನ್ನು ರಕ್ಷಿಸುವ ಸಾಂವಿಧಾನಿಕ ಗ್ಯಾರಂಟಿಯನ್ನು ಈ ವಿಧಾನಸಭೆ ದೃಢೀಕರಿಸುತ್ತದೆ. ಇಂತಹ ವಿಶೇಷ ಸ್ಥಾನಮಾನವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದ ಕ್ರಮದ ಕುರಿತು ಕಳವಳ ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದರು.
ವಿಪಕ್ಷ ಬಿಜೆಪಿ ಸದಸ್ಯರು ಗೊತ್ತುವಳಿ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಲಾಪದ ಪಟ್ಟಿಯಲ್ಲಿ ಇರದ ವಿಷಯುವನ್ನು ಮಂಡಿಸಲಾಗಿದೆ. ನಾವು ಇದನ್ನು ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ. ಸಂಸತ್ ಕೈಗೊಂಡ ನಿರ್ಧಾರವನ್ನು ಬದಲಾಯಿಸಲಾಗದು ಎಂದು ಗೊತ್ತಿದ್ದರೂ ಪ್ರಚಾರಕ್ಕಾಗಿ ಸುಮ್ಮನೆ ಗದ್ದಲ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ಈ ವೇಳೆ ಗದ್ದಲ ಉಂಟಾಗಿದೆ.
ಇದಾದ ನಂತರ ವಿರೋಧ ಪಕ್ಷದ ನಾಯಕ ಸುನೀಲ್ ಶರ್ಮಾ ಬ್ಯಾನರ್ ತೋರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಗದ್ದಲದ ನಂತರ ಮಾರ್ಷಲ್‌ಗಳು ಮಧ್ಯಪ್ರವೇಶಿಸಿ ಶಾಸಕರನ್ನು ಪ್ರತ್ಯೇಕಿಸಿದರು.