`````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಓದುಗರಿಗೆ ಮತ್ತು ನಮ್ಮ ಜಾಹೀರಾತುದಾರರಿಗೆ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು``````````````

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌: ಭೂಸ್ವಾಧೀನಕ್ಕೆ ಹೆಚ್ಚಿನ ಪರಿಹಾರಕ್ಕೆ ಸಚಿವ ಸಂಪುಟ ಅನುಮೋದನೆ

ಬೆಂಗಳೂರು: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರೋಡ್)ಗಾಗಿ ಭೂ ಸ್ವಾಧೀನಪಡಿಸಿಕೊಳ್ಳುವ ಜನರಿಗೆ ಭೂಸ್ವಾಧೀನ ಕಾಯ್ದೆಯಡಿ ನೀಡಲಾಗುತ್ತಿರುವ ಪರಿಹಾರಕ್ಕಿಂತ ಹೆಚ್ಚಿನ ಪರಿಹಾರವನ್ನು ನೀಡುವ ಮಾರ್ಪಡಿಸಿದ ಆದೇಶಕ್ಕೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದಿನಾಂಕ: 19.09.2024 ರಂದು ಸಲ್ಲಿಸಿರುವ ಪ್ರಸ್ತಾವನೆಯನ್ವಯ ಈಗಾಗಲೇ ದಿನಾಂಕ: 12.09.2024 ರಂದು ಹೊರಡಿಸಿರುವ ಸರ್ಕಾರಿ ಆದೇಶದ ಭಾಗ ಕ್ರಮ ಸಂಖ್ಯೆ (3)ರ ಅಂಶವನ್ನು ರದ್ದುಪಡಿಸಿ ತಿದ್ದುಪಡಿ ಆದೇಶವನ್ನು ಹೊರಡಿಸಿರುವ ಕ್ರಮಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ರಿಂಗ್ ರಸ್ತೆ)ನ ಯೋಜನೆಯಲ್ಲಿ ಒಳಗೊಂಡಿರುವ ಗ್ರಾಮಗಳ ಜಮೀನಿನ ಮಾರ್ಗಸೂಚಿ ದರಗಳು ವಿಭಿನ್ನವಾಗಿರುವುದರಿಂದ ಭೂ ಸ್ವಾಧೀನ ಪಡಿಸಿಕೊಳ್ಳುವ ಜಮೀನಿನ ಭೂಮಾಲೀಕರಿಗೆ ಆಯಾ ಗ್ರಾಮವಾರು ಮಾರ್ಗಸೂಚಿ ದರವನ್ನು ಗಮನದಲ್ಲಿರಿಸಿಕೊಂಡು ಸಂಧಾನ ಸೂತ್ರ (ಸಂಧಾನಿತ ಮೊತ್ತ)ದ ಮೂಲಕ ಭೂಸ್ವಾಧೀನ ಕಾಯ್ದೆ 1894ರ ಅಡಿ ನಿಗಧಿಪಡಿಸಬಹುದಾದ ಭೂಪರಿಹಾರ ಮೊತ್ತಕ್ಕಿಂತ ಹೆಚ್ಚಿನ ಪರಿಹಾರ ಮೊತ್ತವನ್ನು ನಿಗಧಿಪಡಿಸಲು ಅಥವಾ ಭೂಮಾಲೀಕರು ಒಪ್ಪಿದಲ್ಲಿ ಟಿ.ಡಿ.ಆರ್ ನೀಡಲು ಸಂಪುಟ ನಿರ್ಧರಿಸಿದೆ.

ಸಂಪುಟ ಸಭೆಯ ಇತರ ನಿರ್ಣಯಗಳು…

  • ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ 4.25 ಎಕರೆ ಜಮೀನಿನಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ (KSMCL)ದಿಂದ ಸಂಪೂರ್ಣ ಬಂಡವಾಳ ಹೂಡಿಕೆಯೊಂದಿಗೆ 527.50 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ “ರೇಷ್ಮೆ ಭವನ” ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.

  • ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯನ್ನು 200 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.

  • ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿ ಯರಿಗೆ ಪ್ರಸಕ್ತ ಸಾಲಿಗೆ ಐಸಿಡಿಎಸ್‌ ಯೋಜನೆಯಡಿ 13.75 ಕೋಟಿ ರೂ. ವೆಚ್ಚದಲ್ಲಿ ಸಮವಸ್ತ್ರ ಪೂರೈಸುವ ಪ್ರಸ್ತಾವನೆಗೆ ಒಪ್ಪಿಗೆ.

  • ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೆ ಸೇರಿದ ಬೆಂಗಳೂರಿನ ಪೀಣ್ಯ ಕೈಗಾರಿಕಾ ವಸಾಹತು ಜಾಗವನ್ನು ಸಣ್ಣ ಕೈಗಾರಿಕೆಗಳ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮಕ್ಕೆ ಹಂಚಿಕೆ ವಾರ್ಷಿಕ 1 ರೂ. ಸಾಂಕೇತಿಕ ದರದಲ್ಲಿ 30 ವರ್ಷಗಳ ಗುತ್ತಿಗೆ ನೀಡಲು ಸಂಪುಟ ನಿರ್ಧರಿಸಿತು.

  • ಚಿಕ್ಕಮಗಳೂರಿನ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್‌ಗಿರಿ ಪೀಠ/ದರ್ಗಾದ ವ್ಯವಸ್ಥಾಪನಾ ಸಮಿತಿಗೆ ಇಬ್ಬರು ಅನಧಿಕೃತ ಸದಸ್ಯರ ನೇಮಕ, ಅದಿತಿ ಡಿ ಅವರನ್ನು ಅನುಕಂಪದ ಆಧಾರದ ಮೇಲೆ ಕಾರ್ಯದರ್ಶಿಯಾಗಿ ನೇಮಿಸುವುದು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

No Comments

Leave A Comment