ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಗೌವರ್ನರ್ ಪತ್ರ ಸಮರಕ್ಕೆ ಪ್ರತ್ಯಸ್ತ್ರ: ಸಂಪುಟ ಸಭೆಯಲ್ಲಿ ರಾಜ್ಯಪಾಲರ ವಿರುದ್ದ ಮಹತ್ವದ ತೀರ್ಮಾನ
ಬೆಂಗಳೂರು (ಸೆಪ್ಟೆಂಬರ್ 26): ಕರ್ನಾಟಕ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ತಾರಕಕ್ಕೇರಿದ್ದು, ರಾಜ್ಯ ಸರ್ಕಾರವನ್ನ ಬಿಟ್ಟುಬಿಡದೆ ಪತ್ರದ ಮೂಲಕ ಗವರ್ನರ್ ಕಾಡುತ್ತಿದ್ದಾರೆ. ಸೇರಿಗೆ ಸವ್ವಾಸೇರು ಎಂಬಂತೆ ಪತ್ರ ಸಮರ ನಡೆಯುತ್ತಿದ್ದು, ಸರ್ಕಾರದ ವಿರುದ್ಧದ ಪ್ರತಿ ದೂರಿಗೂ ವಿವರಣೆಯನ್ನು ಕೇಳಿ ಥಾವರ್ ಚೆಂದ್ ಗೆಹಲೋತ್ ಪತ್ರ ಬರೆಯುತ್ತಿದ್ದಾರೆ. ಅಲ್ಲದೇ ರಾಜ್ಯಪಾಲರ ಪತ್ರಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಲೆಕೆಡಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರ ಪತ್ರ ಸಮರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತ್ರ ಹೂಡಿದೆ. ಹೌದು..ರಾಜ್ಯಪಾಲರ ಯಾವುದೇ ಪತ್ರಗಳಿಗೆ ಕಾರ್ಯದರ್ಶಿಗಳು ಉತ್ತರಿಸಿಂದತೆ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿದೆ.
ಇಂದು (ಸೆಪ್ಟೆಂಬರ್ 26) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಯಾವುದೇ ಪತ್ರಗಳಿಗೆ ಸಿಎಸ್ (ಸರ್ಕಾರದ ಮುಖ್ಯಕಾರ್ಯದರ್ಶಿ) ಉತ್ತರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ಯಾವುದೇ ಪತ್ರ ಬರೆದರೂ ಸಂಪುಟ ಗಮನಕ್ಕೆ ತರಲು ಸಿಎಸ್ಗೆ ಸೂಚನೆ ನೀಡಲಾಗಿದ್ದು, ನೇರವಾಗಿ ರಾಜ್ಯಪಾಲರಿಗೆ ಉತ್ತರಿಸದಂತೆ ನಿರ್ಣಯ ಮೂಲಕ ಮುಖ್ಯಕಾರ್ಯದರ್ಶಿಗೆ ತಿಳಿಸಲಾಗಿದೆ. ಅಲ್ಲದೇ ರಾಜ್ಯಪಾಲರ ಪತ್ರವನ್ನು ಸಚಿವ ಸಂಪುಟದ ಗಮನಕ್ಕೆ ತರಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
ನಿಯಮ ಪ್ರಕಾರ ಸರ್ಕಾರದ ಮುಖ್ಯಕಾರ್ಯದರ್ಶಿ ಸಂಪುಟದ ಗಮನಕ್ಕೆ ತರಬೇಕೆಂದು ನಿರ್ಣಯ ಅಂಗೀಕರಿಸಲಾಗಿದೆ. ಕಾರ್ಯದರ್ಶಿ ಬದಲು ಸಂಪುಟ ಮೂಲಕ ರಾಜ್ಯಪಾಲರ ಪತ್ರಗಳಿಗೆ ಸರ್ಕಾರದ ಉತ್ತರ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ ಅಗತ್ಯವಿದ್ದರಷ್ಟೇ ಉತ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಎಚ್ಕೆ ಪಾಟೀಲ್, ಸಂಪುಟ ಸಭೆಯಲ್ಲಿ ರಾಜ್ಯಪಾಲರ ವಿರುದ್ಧ ತೆಗೆದುಕೊಂಡ ಮಹತ್ವದ ತೀರ್ಮಾನದ ಬಗ್ಗೆ ಸ್ಪಷ್ಟಪಡಿಸಿದರು.
ಸಚಿವ ಎಚ್ಕೆ ಪಾಟೀಲ್ ಹೇಳಿದ್ದೇನು?
ರಾಜ್ಯಪಾಲರು ಅಸಹನೆಯ ವರ್ತನೆಯೊಳಗೆ ಪತ್ರ ಬರೆಯುತ್ತಿದ್ದಾರೆ. ತಕ್ಷಣ ಅಥವಾ ಇವತ್ತೇ ಮಾಹಿತಿ ಕಳುಹಿಸಿ ಎಂದು ಸೂಚಿಸುತ್ತಿದ್ದಾರೆ. ಎಲ್ಲಾ ನಿಯಮಾವಳಿ ಪರಿಶೀಲನೆ ಮಾಡಿ ಕ್ಯಾಬಿನೆಟ್ ನಿರ್ಣಯಿಸಿದೆ. ಕಾರ್ಯದರ್ಶಿಗಳು ಸಂಪುಟ ನಿರ್ಣಯದ ಮೇಲೆ ಮುಂದುವರಿಯಬೇಕು. ಮಾಹಿತಿಯನ್ನು ಕಳಿಸುವ ಮೊದಲು ಸಂಪುಟ ನಿರ್ಣಯ ಪಾಲಿಸಬೇಕು. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇವೆ. ರಾಜ್ಯಪಾಲರ ಯಾವುದೇ ಪತ್ರಕ್ಕೂ ಸಂಪುಟ ಮೂಲಕ ಉತ್ತರಿಸಬೇಕು ಎಂದು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ನಿರ್ಣಯದ ಮೂಲಕ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಿ ತಲುಪಲಿದೆ ಎನ್ನುವುದನ್ನು ಕಾದುನೋಡಬೇಕಿದೆ.