ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಕುಂದಾಪುರ: ನಿಂತಿದ್ದ ಇನೋವಾ ಕಾರಿಗೆ ಖಾಸಗಿ ಬಸ್ ಢಿಕ್ಕಿ : ವ್ಯಕ್ತಿಯೋರ್ವರು ಸ್ಥಳದಲ್ಲೇ ಸಾವು
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ನಿಂತಿದ್ದ ಇನೋವಾ ಕಾರಿಗೆ ಖಾಸಗಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ತಾಲೂಕಿನ ಅರಾಟೆ ಸೇತುವೆ ಬಳಿ ರಾತ್ರಿ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಭಟ್ಕಳ ಮೂಸ ನಗರದ ನಿವಾಸಿ ದಿವಂಗತ ಅಬೂಬಕರ್ ಸಿದ್ದೀಕ್ವಾ ಅವರ ಪುತ್ರ ಮೊಹಮ್ಮದ್ ನಾಸಿರ್ ಸಿದ್ದೀಕ್ವಾ ಎಂದು ತಿಳಿದು ಬಂದಿದೆ.
ಇವರು ಕುಟುಂಬದವರೊಂದಿಗೆ ಮಂಗಳೂರಿನಿಂದ ಭಟ್ಕಳದ ಮನೆಗೆ ಮರಳುತ್ತಿದ್ದ ವೇಳೆ ರಾತ್ರಿ 8:45 ರ ಸುಮಾರಿಗೆ ಅರಾಟೆ ಸೇತುವೆ ಬಳಿ ಬರುತ್ತಿದಾಗ ವಾಹನದಿಂದ ಅಸ್ವಾಭಾವಿಕ ಶಬ್ಧ ಕೇಳಿ ಬಂದ ನಂತರ ನಾಸಿರ್ ಕಾರನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ರಸ್ತೆ ಬದಿ ವಾಹನ ನಿಲ್ಲಿಸಿ ಸಮಸ್ಯೆ ಪರಿಶೀಲಿಸಲು ಮುಂದಾದರು. ಮತ್ತೆ ಅವರು ಕಾರನ್ನು ಹತ್ತಲು ಮುಂದಾದಾಗ, ಅದೇ ಮಾರ್ಗದಲ್ಲಿ ಕುಂದಾಪುರದಿಂದ ಗಂಗೊಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ ಕಾರಿನ ಡೊರಿಗೆ ಡಿಕ್ಕಿ ಹೊಡೆದಿದ್ದು, ಅಲ್ಲೇ ಇದ್ದ ನಾಸಿರ್‌ಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ತಕ್ಷಣ ನಾಸಿರ್ ಅವರನ್ನು ಇಬ್ರಾಹಿಂ ಗಂಗೊಳ್ಳಿ ಅವರು ಆಂಬ್ಯುಲೆನ್ಸ್ ನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿರುತ್ತಾರೆ. ಆದರೆ, ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ನಾಸಿರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.