ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಮಳೆರಾಯನ ಆರ್ಭಟಕ್ಕೆ ಕಂಗಾಲಾದ ಯಾದಗಿರಿ ಜನ; ಮುಳುಗಿದ ಸೇತುವೆ, ಶಾಲೆಗೂ ನುಗ್ಗಿದ ನೀರು
ಯಾದಗಿರಿ, ಸೆ.01: ಯಾದಗಿರಿ ಜಿಲ್ಲೆಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದೆ. ನಿನ್ನೆ(ಆ.31) ಸಂಜೆ ಆರಂಭವಾದ ಮಳೆ ಇನ್ನುವರೆಗೂ ಕಮ್ಮಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ನಗರದ ಹಲವು ಕಡೆ ರಸ್ತೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ಅಂಗಡಿ, ಶಾಲೆ ಹಾಗೂ ಮನೆಗಳಿಗೂ ಸಹ ನೀರು ನುಗ್ಗಿದೆ.
ಮಳೆಯಿಂದ ಜಿಲ್ಲೆಯಲ್ಲಿ ಹಲವು ಅವಾಂತರ
ಇನ್ನು ಮಳೆಯಿಂದಾಗಿ ಯಾದಗಿರಿ ತಾಲೂಕಿನ ಪಗಲಾಪುರ ಬಳಿಯ ಸೇತುವೆ ಸಂಪೂರ್ಣವಾಗಿ ಜಲಾವೃತ್ತಗೊಂಡಿದ್ದು, ಹಳ್ಳಕ್ಕೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದ್ದ ಸೇತುವೆ ಮುಳುಗಡೆಯಾಗಿದೆ. ಪಗಲಾಪುರ, ಮುಷ್ಟುರ್, ಶೆಟ್ಟಗೇರ, ಜೀನಕೇರ ಸೇರಿದಂತೆ ಹತ್ತಾರು ಹಳ್ಳಿಯ ಜನ ಯಾದಗಿರಿ ನಗರಕ್ಕೆ ಬರಬೇಕು ಅಂದರೆ ಇದೆ ಸೇತುವೆ ಮಾರ್ಗವಾಗಿ ಬರಬೇಕು. ಆದ್ರೆ, ಸೇತುವೆ ಮುಳುಗಡೆಯಿಂದಾಗಿ ವಾಹನ ಸಂಚಾರಕ್ಕೆ ತಾಲೂಕು ಆಡಳಿತ ನಿರ್ಬಂಧ ಹೇರಿದೆ. ಹೀಗಾಗಿ ಸ್ಥಳದಲ್ಲಿ ಪೊಲೀಸರನ್ನ ನಿಯೋಜನೆ ಮಾಡಿ ವಾಹನಗಳು ಸಂಚಾರ ಮಾಡದಂತೆ ಕ್ರಮ ವಹಿಸಲಾಗಿದೆ.
ಕಷ್ಟಪಟ್ಟು ಬೆಳೆದ ಬೆಳೆ ನೀರುಪಾಲು; ಕಂಗಾಲಾದ ರೈತ
ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಮಳೆ ಹೊಡೆತಕ್ಕೆ ನೂರಾರು ಎಕರೆ ಪ್ರದೇಶ ನೀರಿನಲ್ಲಿ ಮುಳುಗಿ ಹೋಗಿದೆ. ಜಮೀನುಗಳಿಗೆ ನೀರು ನುಗ್ಗಿದ ಕಾರಣಕ್ಕೆ ರಾಶಿಗೆ ಬಂದಿದ್ದ ಬೆಳೆಗಳು ನೀರು ಪಾಲಾಗಿವೆ. ಹೆಸರು ಮತ್ತು ಉದ್ದು ಬೆಳೆಯೋಕೆ ರೈತರು ಎಕರೆಗೆ 10 ರಿಂದ 15 ಸಾವಿರ ರೂ. ಖರ್ಚು ಮಾಡಿದ್ದರು. ಸದ್ಯ ರಾಶಿ ಮಾಡುವ ಹೊತ್ತಿನಲ್ಲೇ ಮಳೆರಾಯ ಆರ್ಭಟ ತೋರಿದ್ದರಿಂದ ಕೊಯಿಲೂರ್,ಪಗಲಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಎಕರೆ ಬೆಳೆ ನೀರು ಪಾಲಾಗಿದೆ. ಕೇವಲ ಹೆಸರು ಮತ್ತು ಉದ್ದಿನ ಬೆಳೆ ಮಾತ್ರ ಅಲ್ಲದೆ ತೊಗರಿ ಮತ್ತು ಹತ್ತಿ ಬೆಳೆ ಸಹ ನೀರಿನಲ್ಲಿ ಮುಳುಗಡೆಯಾಗಿದೆ. ಬೆಳೆ ಕಳೆದುಕೊಂಡು ಅನ್ನದಾತರು ಕಂಗಲಾಗಿದ್ದಾರೆ.
ಶಾಲೆಗೆ ನುಗ್ಗಿದ ನೀರು
ಇನ್ನು ಇದೆ ಮಳೆಯಿಂದಾಗಿ ಕೊಯಿಲೂರ್ ಗ್ರಾಮದ ಪ್ರತಿಯೊಂದು ರಸ್ತೆಗಳು ಸಂಪೂರ್ಣವಾಗಿ ಜಲಾವೃತ್ತಗೊಂಡಿವೆ. ಗ್ರಾಮದಲ್ಲಿ ಜನ ಓಡಾಡುವುದಕ್ಕೂ ಸಹ ಕಷ್ಟ ಆಗಿದೆ. ಇದೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೂ ನೀರು ನುಗ್ಗಿದೆ. ಮಳೆ ನೀರು ನುಗ್ಗಿದ್ದರಿಂದ ಶಾಲೆಯ ಮೈದಾನ ಸ್ವೀಮಿಂಗ್ ಫುಲ್ ಆಗಿ ಬದಲಾಗಿದೆ. ಇನ್ನು ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮಳೆ ನೀರು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ಇನ್ನು ಮಳೆ ನೀರಿನಿಂದ ಹಾನಿಗೊಳಗಾದ ಪ್ರದೇಶಕ್ಕೆ ಯಾದಗಿರಿ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ರಸ್ತೆಗಳು ಜಮೀನುಗಳು ಜಲಾವೃತ್ತಗೊಂಡಿದ್ದು, ಜನ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ಮನೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕಾಗಿದೆ.