ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಜಮ್ಮು-ಕಾಶ್ಮೀರದಲ್ಲಿ ಎನ್ಕೌಂಟರ್: ಕುಪ್ವಾರದಲ್ಲಿ 3 ಉಗ್ರರ ಸದೆಬಡಿದ ಸೇನಾಪಡೆ, ರಜೌರಿಯಲ್ಲಿ ಮುಂದುವರೆದ ಕಾರ್ಯಾಚರಣೆ
ಕುಪ್ವಾರ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಮೂವರು ಉಗ್ರರನ್ನು ಸದೆಬಡಿದಿದೆ ಎಂದು ಗುರುವಾರ ತಿಳಿದುಬಂದಿದೆ.
ಕುಪ್ವಾರ ಜಿಲ್ಲೆ ತಂಗ್ಧಾರ್ ನಲ್ಲಿ ಕೆಲ ಉಗ್ರರು ಗಡಿ ನುಸುಳಲು ಯತ್ನ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನಾಪಡೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿತ್ತು. ಇದರಂತೆ ಇದೀಗ ಮೂವರು ಉಗ್ರರನ್ನು ಹತ್ಯೆ ಮಾಡಿದ್ದು, ಕಾರ್ಯಾಚರಣೆ ಮುಂದುವರೆಸಿದೆ.
ಈ ನಡುವೆ ರಜೌರಿಯಲ್ಲಿಯೂ ಉಗ್ರರು ಹಾಗೂ ಸೇನಾಪಡೆ ನಡುವೆ ಗುಂಡಿನ ಕಾಳಗ ಮುಂದುವರೆದಿದ್ದು, ಸೇನಾಪಡೆ ಎನ್ಕೌಂಟರ್ ಆರಂಭಿಸಿದೆ.
ಖೇರಿ ಮೊಹ್ರಾ ಲಾಠಿ ಮತ್ತು ದಂತಲ್ ಪ್ರದೇಶದಲ್ಲಿ ನಿನ್ನೆ ರಾತ್ರಿ 9:30ರ ಸುಮಾರಿಗೆ ಅನುಮಾನಾಸ್ಪದ ಓಡಾಟಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೇನಾಪಡೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.
“ಶೋಧನಾ ಕಾರ್ಯಾಚರಣೆ ವೇಳೆ ರಾತ್ರಿ 11:45 ರ ಸುಮಾರಿಗೆ ಉಗ್ರರು ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಈ ವೇಳೆ ಸೇನಾಪಡೆ ಕೂಡ ದಿಟ್ಟ ಉತ್ತರ ನೀಡಿದ್ದು, ಸ್ಥಳದಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿ ಇಬ್ಬರು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಸ್ಥಳ ಸುತ್ತುವರೆದಿರುವ ಸೇನಾಪಡೆ ಉಗ್ರರ ಸದೆಬಡಿಯಲು ಕಾರ್ಯಾಚರಣೆ ಮುಂದುವರೆಸಿದೆ.