ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

Paris Olympics 2024: ಶೂಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಮನು ಭಾಕರ್-ಸರಬ್ಜೋತ್‌ ಸಿಂಗ್ ಜೋಡಿ

ಪ್ಯಾರಿಸ್‌: ಪ್ಯಾರಿಸ್​ ಒಲಿಂಪಿಕ್ಸ್‌ 2024ನಲ್ಲಿ ಭಾರತ ಮತ್ತೊಂದು ಪದಕವನ್ನು ತನ್ನದಾಗಿಸಿಕೊಂಡಿದೆ. 10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್‌ ಸಿಂಗ್‌ ಮತ್ತು ಮನು ಭಾಕರ್​ ಜೋಡಿ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ.

2 ದಿನಗಳ ಹಿಂದಷ್ಟೇ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಮನು, ಇದೀಗ 2ನೇ ಪದಕ ಗೆಲ್ಲುವ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮುನ್ನ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್​ ಅವರು ಮೂರನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದರು.

ಇದೀಗ ಸರಬ್ಜೋತ್ ಸಿಂಗ್ ಜೊತೆಗೂಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಫರ್ಧೆದಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಮನು ಭಾಕರ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತಕ್ಕೆ 2ನೇ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇನ್ನು ಮನು ಭಾಕರ್ 25 ಮೀಟರ್ ಏರ್ ಪಿಸ್ತೂಲ್ ಮಹಿಳಾ ಸ್ಫರ್ಧೆಯಲ್ಲೂ ಭಾಗವಹಿಸುತ್ತಿದ್ದು, ಹೀಗಾಗಿ ಭಾರತೀಯ ನಾರಿಯಿಂದ ಮೂರನೇ ಪದಕ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ.

ಮಂಗಳವಾರ ನಡೆದ ಕಂಚಿನ ಪದಕ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಯೆ ಜಿನ್ ಒಹ್ ಮತ್ತು ವೊನೊಹೊ ಲೀ ವಿರುದ್ಧ 16-10 ಅಂಕಗಳಿಂದ ಗೆದ್ದು ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಸೋಮವಾರ ನಡೆದಿದ್ದ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್‌-ಸರಬ್ಜೋತ್‌ ಸಿಂಗ್‌ ಒಟ್ಟು 580 ಅಂಕ ಗಳಿಸಿದ್ದರು. ಕೊರಿಯಾದ ಜೋಡಿ 579 ಅಂಕ ಗಳಿಸಿತ್ತು.

ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ

ಈ ನಡುವೆ ಪ್ಯಾರಿಸ್​ ಒಲಿಂಪಿಕ್ಸ್‌ ನಲ್ಲಿ ಕಂಚು ಗೆದ್ದ ಸರಬ್ಜೋತ್ ಸಿಂಗ್ ಮತ್ತು ಮನು ಭಾಕರ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿಯವರು, ನಮ್ಮ ಶೂಟರ್ ಗಳು ನಮ್ಮನ್ನು ಹೆಮ್ಮೆ ಪಡಿಸುವುದನ್ನು ಮುಂದುವರೆಸಿದ್ದಾರೆ.ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಇಬ್ಬರು ಉತ್ತಮ ಕೌಶಲ್ಯ ಹಾಗೂ ಟೀಮ್ ವರ್ಕ್ ಪ್ರದರ್ಶಿಸಿದ್ದಾರೆ. ಕಂಚಿನ ಪದಕ ಗೆದ್ದಿರುವುದು ಬಹಳಷ್ಟು ಸಂತಸ ತಂದಿದೆ. ಮನು ಅವರಿಗೆ ಇದು ಸತತ 2ನೇ ಪದಕವಾಗಿದ್ದು, ಇದು ಅವರ ಶ್ರೇಷ್ಠತೆ ಹಾಗೂ ಸಮರ್ಪಣೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪೋಸ್ಟ್ ಮಾಡಿ, ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆಗಳು, ಮನು ಭಾಕರ್ ಅವರು ಒಂದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರು ನಮಗೆ ಅಪಾರ ಹೆಮ್ಮೆ ತಂದಿದ್ದಾರೆ. ಭವಿಷ್ಯದಲ್ಲಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಇನ್ನೂ ಹಲವು ಪ್ರಶಸ್ತಿಗಳನ್ನು ಪಡೆಯಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

No Comments

Leave A Comment