ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
MUDA ಜಮೀನು ಖರೀದಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ: ದಾಖಲೆಗಳ ಸಮೇತ ಸಿಎಂ ಸಿದ್ದರಾಮಯ್ಯ ಉತ್ತರ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ದಾಖಲೆಗಳ ಮೂಲಕ ಉತ್ತರ ನೀಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಮುಡಾ ಅಕ್ರಮ ಪ್ರಕರಣ ಸಂಬಂಧ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನವರು ಅರೆಬರೆ ದಾಖಲೆಗಳನ್ನು ಮುಂದಿಟ್ಟು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜ್ಯಪಾಲರಿಗೂ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು. ಮುಡಾ ನಿವೇಶನ ವಿಚಾರವಾಗಿ ಸಂಪೂರ್ಣ ದಾಖಲೆಗಳನ್ನು ಮುಂದಿಟ್ಟು ಉತ್ತರಿಸಿದರು.
ಆಸ್ತಿಯನ್ನು ಸರಕಾರ ದಲಿತ ಕುಟುಂಬಕ್ಕೆ ಮಂಜೂರು ಮಾಡಿಲ್ಲ. ಕುಟುಂಬವು ಸರ್ಕಾರದಿಂದ ಹರಾಜಿನಲ್ಲಿ ಭೂಮಿಯನ್ನು ಖರೀದಿಸಿದೆ ಮತ್ತು ಆದ್ದರಿಂದ ಈ ಪ್ರಕರಣದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆಯ ನಿಬಂಧನೆಯು ಅನ್ವಯಿಸುವುದಿಲ್ಲ. ಈ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ಆರೋಪ ಮಾಡಲು ಯತ್ನಿಸುತ್ತಿವೆ’’ ಎಂದು ಆರೋಪಿಸಿದರು. ರಾಜ್ಯ ಸರಕಾರ ಹಾಗೂ ಸಿಎಂ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕು, ಕಪ್ಪು ಚುಕ್ಕೆ ತರಬೇಕು ಅಂತ ಇಡೀ ಸದನ ಹಾಳು ಮಾಡಿದರು. 1983ರಲ್ಲಿ ನಾನು ಶಾಸಕನಾದವನು, 84ರಲ್ಲಿ ಮಂತ್ರಿಯಾದವನು. ಶಾಸಕ, ಮಂತ್ರಿ, ಉಪಮುಖ್ಯಮಂತ್ರಿ, ಸಿಎಂ ಆಗಿ ನಲವತ್ತು ವರ್ಷಗಳ ಕಾಲ ರಾಜಕೀಯವಾಗಿ ಇದ್ದೇನೆ. ಇವತ್ತಿನವರೆಗೆ ಒಂದೂ ಕಪ್ಪು ಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ಬಿಜೆಪಿ- ಜೆಡಿಎಸ್ ದ್ವೇಷದ ರಾಜಕಾರಣ ಮಾಡ್ತಾ ಇವೆ. ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಸೇರಿದರೂ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಚುನಾವಣೆಯಲ್ಲಿ ನಮಗೆ ಮೊದಲಿಗಿಂತ 13 ಪರ್ಸೆಂಟ್ ಹೆಚ್ಚು ಮತ ಬಂದಿದೆ. 2019ರಲ್ಲಿ ಒಂದು ಸ್ಥಾನ ಗೆದ್ದಿದ್ದೆವು, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ಇದರಿಂದ ಹತಾಶರಾಗಿ ಅವರು ವಾಮಮಾರ್ಗ ಹುಡುಕಿದ್ದಾರೆ.
1987ರಲ್ಲಿ ಮುಡಾ ಆಗಿದೆ. ಆವತ್ತಿನಿಂದ ಸಾವಿರಾರು ಎಕರೆಗಳನ್ನು ವಸತಿ ಬಡಾವಣೆ ಮಾಡಲಾಗುತ್ತಿದೆ. ಸರ್ವೆ ನಂ 464, 3 ಎಕರೆ 16 ಗುಂಟೆ ಜಮೀನು ಪಿಟಿಸಿಎಲ್ ಕಾಯ್ದೆ ಅಟ್ರಾಕ್ಟ್ ಮಾಡುತ್ತದೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಜಮೀನು ದಲಿತರಿಗೆ ಆಗಿದ್ದರೆ ಅದಕ್ಕೆ ಕೆಲವೊಂದು ನಿಬಂಧನೆ ಹಾಕಿರುತ್ತಾರೆ. ನಿಬಂಧನೆ ಉಲ್ಲಂಘನೆ ಆಗಿದ್ದರೆ ಪಿಟಿಸಿಎಲ್ ಕಾಯ್ದೆ ಬರುತ್ತದೆ. ಇಲ್ಲಿ ಇದು ಪಿತ್ರಾರ್ಜಿತ ಆಸ್ತಿ ಆದ್ದರಿಂದ ಪಿಟಿಸಿಎಲ್ ಕಾಯ್ದೆ ಅನ್ವಯ ಆಗುವುದಿಲ್ಲ.
ಈ ಜಮೀನಿನ ಮಾಲೀಕ ಪೂರ್ವದಲ್ಲಿ ನಿಂಗ ಬಿನ್ ಜವರ ಅಂತ. 2/8/1935 ರಲ್ಲಿ ಮೈಸೂರು ತಾಲೂಕು ಕಚೇರಿಗೆ ಒಂದು ಅರ್ಜಿ ಕೊಡ್ತಾರೆ. ಅದರ ಮೇಲೆ ಹರಾಜು ನಡೆಯುತ್ತದೆ. ಆಗ ಹರಾಜಿನ ಮೊತ್ತ ಮೂರು ರೂಪಾಯಿ. 3/10/1935 ರಲ್ಲಿ ಹರಾಜಿನಲ್ಲಿ ಭಾಗಿಯಾಗಿ ಒಂದು ರೂಪಾಯಿಗೆ ಕೂಗ್ತಾರೆ. ಆಗ ನಿಂಗ ಬಿನ್ ಜವರ ಅವರಿಗೆ ಇದು ಕ್ರಯ ಆಗುತ್ತದೆ. 13/10/1935ರಲ್ಲಿ ಅವರಿಗೆ ಸೇಲ್ ಕನ್ಫರ್ಮ್ ಆಗುತ್ತದೆ. ಹೀಗೆ ಈ ಜಮೀನು ಹರಾಜಿನ ಮೂಲಕ ಬಂದಿದ್ದು, ಸ್ವಯಾರ್ಜಿತ ಆಸ್ತಿ. ಮುಡಾದ ಸರ್ವೆ ನಂಬರ್ 464, 3.16 ಗುಂಟೆ ಜಮೀನು ಮಲ್ಲಿಕಾರ್ಜುನ ಸ್ವಾಮಿ ಕ್ರಯ ಮಾಡಿಕೊಂಡಿದ್ದಾರೆ. 2004ರಲ್ಲಿ ಇದರ ಕ್ರಯ ಆಗಿದೆ. ಈ ಜಮೀನು ಪಿಟಿಸಿಎಲ್ ಕಾಯಿದೆಗೆ ಒಳಪಟ್ಟಿಲ್ಲ.
ನಿಂಗ ಅವರಿಗೆ ಮಲ್ಲಯ್ಯ, ಮೈಲಾರಯ್ಯ, ದೇವರಾಜ್ ಮೂವರು ಮಕ್ಕಳು. ಮೈಲಾರಯ್ಯನ ಮಗ ಎಂ. ಮಂಜುನಾಥ ಸ್ವಾಮಿ, ದೇವರಾಜ ಎಲ್ಲರೂ ಸೇರಿ ವಂಶವೃಕ್ಷಕ್ಕೆ ಸಹಿ ಮಾಡಿದ್ದಾರೆ. ಅದರಂತೆ ಮೂವರು 10/05/1993ರಲ್ಲಿ ಸರ್ವೆ ನಂಬರ್ 464 ರ ಜಮೀನಿಗೆ ಯಾವುದೇ ತಕರಾರು ಇಲ್ಲ ಅಂತ ಎಲ್ಲರೂ ಸಹಿ ಮಾಡಿದ್ದಾರೆ. ಜಮೀನು ದೇವರಾಜ ಹೆಸರಿಗೆ ವರ್ಗಾವಣೆ ಮಾಡಲು ಸಹಿ ಹಾಕಿದ್ದರು. ದೇವರಾಜ ಹೆಸರಲ್ಲಿ ಪಹಣಿ ಕೂಡ ಬಂದಿದೆ. ದಾಖಲಾತಿಗಳಲ್ಲಿ ಎಲ್ಲವೂ ದಾಖಲಾಗಿದೆ.
ಮಂಜುನಾಥ್ ಸ್ವಾಮಿ ಕಳೆದ 20 ವರ್ಷಗಳಲ್ಲಿ ಯಾವುದೇ ತಕರಾರು ಮಾಡಿಲ್ಲ. ಈಗ ಮಂಜುನಾಥ್ ಅವರನ್ನ ಎತ್ತಿ ಕಟ್ಟಿ ರಾಜಕೀಯ ಮಾಡ್ತಿದ್ದಾರೆ. ಅವರಿಗೆ ಏನಾದ್ರೂ ಮಾನ ಮರ್ಯಾದೆ ಇದೆಯಾ? ಈಗ ಬಿಜೆಪಿಯವರು ನಮಗೂ ಪಾಲು ಬರಬೇಕು ಅಂತ ಮಂಜುನಾಥ್ ಸ್ವಾಮಿ ಕೈಲಿ ಹೇಳಿಸ್ತಾರಲ್ಲ. ಹತಾಶರಾಗಿ ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಅವರು ಬರೆದುಕೊಟ್ಟ ಹೇಳಿಕೆ ಮೇಲೆ ದೇವರಾಜಗೆ ಮ್ಯುಟೇಷನ್ ಆಗಿದ್ದು. 20 ವರ್ಷದಿಂದ ಜಗಳ ಇಲ್ಲದ ಕುಟುಂಬದಲ್ಲಿ ಜಗಳ ತಂದಿದ್ದಾರಲ್ಲ ಬಿಜೆಪಿಯವರು, ಇಂಥವರಿಗೆ ಏನಂತ ಕರೆಯೋದು? ಮನೆ ಮುರುಕರು ಇವರು ಎಂದು ಆರೋಪಿಸಿದ್ದಾರೆ.
ನಮ್ಮ ಮಾವನಿಗೆ ಮೂವರ ಮಕ್ಕಳು. ಮಲ್ಲಿಕಾರ್ಜುನ, ಜಗದೀಶ್, ನನ್ನ ಹೆಂಡತಿ. ಅವರು ಭಾಗ ಆದಾಗ 2010ರಲ್ಲಿ ದಾನ ಪತ್ರದ ಮೂಲಕ ಅರಿಸಿನ-ಕುಂಕುಮ ಅಂತ ನನ್ನ ಹೆಂಡತಿಗೆ ಕೊಟ್ಟಿದ್ದಾರೆ. ನಮಗೆ ಈ 2013/14ರಲ್ಲಿ ಮುಡಾ ಅಕ್ರಮವಾಗಿ ಭೂಸ್ವಾಧೀನ ಮಾಡಿದ್ದು ಗೊತ್ತಾಯಿತು. 2014ರಲ್ಲಿ ನಾವು ಅರ್ಜಿ ಹಾಕಿದೆವು. ನಮ್ಮ ಜಮೀನಿಗೆ ಪರ್ಯಾಯವಾಗಿ ಜಮೀನು ಕೊಡಿ ಅಂತ ಕೇಳಿದೆವು. ಅದರಲ್ಲಿ ತಪ್ಪೇನಿದೆ? 2 ಅರ್ಜಿ ಹಾಕಿದ್ದೇವೆ- 2014 ಹಾಗೂ 2021ರಲ್ಲಿ. ನನ್ನ ಹೆಂಡತಿ ನಾನು ಸಿಎಂ ಆಗಿದ್ದಾಗ ನನ್ನ ಗಮನಕ್ಕೆ ತಂದರು. ಅದಕ್ಕೆ, ನಾನು ಸಿಎಂ ಆಗಿದ್ದೇನೆ, ಈಗ ನಾನು ಹೇಳಲು ಬರಲ್ಲ ಅಂತ ಹೇಳಿದ್ದೆ.
ಮುಡಾದವರು ಸದರಿ ಜಮೀನು ಭೂಸ್ವಾಧೀನದಿಂದ ಕೈ ಬಿಟ್ಟಿದ್ದರೂ ಕೂಡ ಪ್ರಾಧಿಕಾರ ಆ ಜಮೀನು ಉಪಯೋಗಿಸಿಕೊಂಡಿದೆ. ಹೀಗಾಗಿ ಅರ್ಜಿದಾರರಿಗೆ ಸದರಿ ಜಮೀನಿಗೆ ಬದಲಿ ಜಮೀನು ನೀಡಲು ತೀರ್ಮಾನ ಮಾಡಲಾಗಿದೆ. ಸುಂದರಮ್ಮ ಅವರಿಗೆ ಇದ್ದ 2.17 ಎಕರೆ ಜಮೀನಿಗೆ ಡೆವಲಪ್ಡ್ ಏರಿಯಾದಲ್ಲಿ ಜಮೀನು ಕೊಡುತ್ತಾರೆ. ಈ ಕೇಸ್ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಹೀಗಾಗಿ ಸುಂದರಮ್ಮ ಅವರಂತೆಯೇ ನ್ಯಾಯ ಆಗಿದೆ. 2.17 ಜಮೀನು ಅವರಿಗೆ ಕೊಟ್ಟಿದ್ದಾರೆ. ನಾವು ಮುಡಾದವರಿಗೆ ಇಲ್ಲಿಯೇ ಜಮೀನು ಕೊಡಿ ಅಂತ ಹೇಳಿಲ್ಲ. 50:50ರಡಿ ಕೊಡಿ ಅಂತ ನಾವು ಕೇಳಿರಲಿಲ್ಲ. ದೇವರಾಯ ಬಡವಾಣೆ, ವಿಜಯನಗರ ಬಡಾವಣೆಯಲ್ಲಿಯೇ ಕೊಡಿ ಎಂದಿಲ್ಲ. ಮುಡಾದವರೇ ನಮಗೆ ಜಮೀನಿನ ಬದಲಿ ನಿವೇಶನ ಕೊಟ್ಟಿದ್ದಾರೆ. 3.16 ಎಕರೆ ಜಮೀನಿಗೆ 1.48 ಚದರ ಅಡಿ ಇದೆ. 38,284 ಚದರ ಅಡಿ ಜಮೀನು ನಮಗೆ ಬಂದಿದೆ ಎಂದು ವಿವರಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಹತಾಶರಾಗಿದ್ದಾರೆ. ಆ ಕಾರಣದಿಂದ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಡಾದಿಂದ ಸ್ವಾಧೀನಪಡಿಸಿಕೊಂಡಿರುವ ಅವರ ಭೂಮಿಗೆ ಹೋಲಿಸಿದರೆ ಹೆಚ್ಚಿನ ಆಸ್ತಿ ಮೌಲ್ಯವನ್ನು ಹೊಂದಿರುವ ಮೈಸೂರಿನ ಉತ್ತಮ ಪ್ರದೇಶದಲ್ಲಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸಿದ್ದರಾಮಯ್ಯನವರ ಹಲವಾರು ಬೆಂಬಲಿಗರು ಕೂಡ ಈ ರೀತಿ ಲಾಭ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಮುಡಾ ಪಾರ್ವತಿ ಅವರಿಗೆ 50:50 ಅನುಪಾತದ ಯೋಜನೆಯಡಿ ಅವರ 3.16 ಎಕರೆ ಜಮೀನಿಗೆ ಬದಲಾಗಿ ನಿವೇಶನಗಳನ್ನು ಮಂಜೂರು ಮಾಡಿತ್ತು, ಅಲ್ಲಿ ಮುಡಾ ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಿತು. ವಿವಾದಾತ್ಮಕ ಯೋಜನೆಯು ಲೇಔಟ್‌ಗಳನ್ನು ರೂಪಿಸಲು ಸ್ವಾಧೀನಪಡಿಸಿಕೊಂಡಿರುವ ಅಭಿವೃದ್ಧಿಯಾಗದ ಭೂಮಿಗೆ ಬದಲಾಗಿ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ 50 ಪ್ರತಿಶತವನ್ನು ಭೂಮಿ ಕಳೆದುಕೊಳ್ಳುವವರಿಗೆ ಹಂಚಿಕೆ ಮಾಡಲು ಯೋಜಿಸಲಾಗಿತ್ತು.