ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ಹೆಚ್. ವಿಶ್ವನಾಥ್ ಸೇರಿದಂತೆ ಮುಡಾ ನಿವೇಶನ ಪಡೆದ BJP-JDS ನಾಯಕರ ಪಟ್ಟಿ ಬಹಿರಂಗ
ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಹಂಚಿಕೆ ಹಗರಣ ರಾಜ್ಯದಲ್ಲಿ ತೀವ್ರ ಜಟಾಪಟಿಗೆ ಕಾರಣವಾಗಿದೆ. ಅಲ್ಲದೆ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿವೆ. ಈ ಮಧ್ಯೆ ಮುಡಾ ನಿವೇಶನ ಪಡೆದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಟ್ಟಿಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬಿಡುಗಡೆ ಮಾಡಿದ್ದಾರೆ.
ಮುಡಾ ನಿವೇಶನ ಬದಲಿಗೆ ಸೈಟ್ ಪಡೆದುಕೊಂಡಿರುವ ಬಿಜೆಪಿ-ಜೆಡಿಎಸ್ ನಾಯಕರು ಪಟ್ಟಿ ಬಿಡುಗಡೆ ಮಾಡುವ ಮೂಲಕ ಬೈರತಿ ಸುರೇಶ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಸಹ ಮುಡಾ ನಿವೇಶನ ಪಡೆದುಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಸುರೇಶ್, ಸಿದ್ದರಾಮಯ್ಯನವರ ಕುಟುಂಬಕ್ಕೆ ಪರ್ಯಾಯ ನಿವೇಶನ ದೊರೆತಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರೂ ಮುಡಾದಿಂದ ನಿವೇಶನ ಪಡೆದಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮುಡಾದಿಂದ 21 ಸಾವಿರ ಚದರ ಅಡಿ ಜಾಗ ಮಂಜೂರಾಗಿದ್ದು, ಬಿಜೆಪಿ ಮುಖಂಡರಾದ ಎಚ್.ವಿಶ್ವನಾಥ್ ಮತ್ತಿತರರಿಗೂ ನಿವೇಶನ ಹಂಚಿಕೆ ಮಾಡಲಾಗಿದೆ ಎಂದರು.
ಜೆಡಿಎಸ್ ಶಾಸಕ ಜಿಟಿ ದೇವೇಗೌಡರಿಗೆ ಎರಡು ಕಡೆ ಪರ್ಯಾಯ ಜಮೀನು ಮಂಜೂರು ಮಾಡಲಾಗಿದೆ ಎಂದು ಸಚಿವ ಸುರೇಶ್ ಹೇಳಿದ್ದಾರೆ. ವಿರೋಧ ಪಕ್ಷಗಳಿಗೆ ಲಗತ್ತಿಸಿರುವ ಇತರ ರಾಜಕೀಯ ನಾಯಕರಿಗೆ ಮುಡಾ ನೀಡಿರುವ ಪರ್ಯಾಯ ನಿವೇಶನಗಳ ಪಟ್ಟಿಯನ್ನೂ ಅವರು ಬಿಡುಗಡೆ ಮಾಡಿದ್ದಾರೆ.
ಮುಡಾದಿಂದ ಪರ್ಯಾಯ ನಿವೇಶನಗಳನ್ನು ಪಡೆದಿರುವ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಹೆಸರನ್ನು ಬಹಿರಂಗಪಡಿಸಲು ಅವಕಾಶ ನೀಡುವಂತೆ ಸ್ಪೀಕರ್ ಯುಟಿ ಖಾದರ್ ಅವರನ್ನು ಒತ್ತಾಯಿಸಿದ್ದೆ. ಆದರೆ, ಸ್ಪೀಕರ್ ಇದಕ್ಕೆ ಅನುಮತಿ ನಿರಾಕರಿಸಿದ್ದರು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಬಿಜೆಪಿ ನಾಯಕರ ಹಗರಣಗಳನ್ನು ಕಾಂಗ್ರೆಸ್ ಪ್ರತಿದಿನ ಬಯಲಿಗೆಳೆಯುತ್ತಿದೆ. ನಾವು ಚರ್ಚೆಗೆ ಸಿದ್ಧರಿದ್ದೇವೆ. ಆಪಾದಿತ ಬುಡಕಟ್ಟು ಕಲ್ಯಾಣ ಮಂಡಳಿ ಪ್ರಕರಣದಲ್ಲಿ ನಿಬಂಧನೆ ಇಲ್ಲದಿದ್ದರೂ ಸರ್ಕಾರ ಚರ್ಚೆಗೆ ಅವಕಾಶ ನೀಡಿತ್ತು. ಎಸ್ಟಿ ಸಚಿವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಉತ್ತರ ನೀಡಲು ಎದ್ದು ನಿಂತಾಗ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ರಾಜಕೀಯ ಪ್ರೇರಿತ ಹಾಗೂ ಗಿಮಿಕ್ ಎಂದು ಟೀಕಿಸಿದರು.