ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಮಹಾರಾಷ್ಟ್ರ ಮಳೆ: ಪುಣೆಯ ಕೆಲವು ಭಾಗ ಜಲಾವೃತ, ಶಿವಾಜಿನಗರದಲ್ಲಿ ದಾಖಲೆಯ ಮಳೆ-ನಾಲ್ಕು ಸಾವು

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಭಾರೀ ಮಳೆಯು ಅಪಾರ ಹಾನಿಯನ್ನುಂಟುಮಾಡಿದೆ. ಗುರುವಾರ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ನಗರದ ತಗ್ಗು ಪ್ರದೇಶಗಳಲ್ಲಿನ ಹಲವಾರು ಮನೆಗಳು ಮತ್ತು ವಸತಿ ಸಮುಚ್ಚಯಗಳು ಜಲಾವೃತವಾಗಿದ್ದು, ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಖಡಕ್ ವಾಸ್ಲಾ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಪುಣೆ ನಗರದ ಶಿವಾಜಿನಗರದಲ್ಲಿ ಗುರುವಾರ ಬೆಳಗ್ಗೆ ಕೊನೆಗೊಂಡಂತೆ ಒಂದೇ ದಿನದಲ್ಲಿ ದಾಖಲೆಯ 114 ಮಿಮೀ ಮಳೆಯಾಗಿದೆ. ಇದು 66 ವರ್ಷಗಳಲ್ಲಿ ಒಂದೇ ದಿನದಲ್ಲಿ ಸುರಿದ ಮೂರನೇಯ ಅತಿ ಹೆಚ್ಚಿನ ಮಳೆಯಾಗಿದೆ. ಮಧ್ಯ ಪುಣೆಯ ಶಿವಾಜಿನಗರದಲ್ಲಿ ಜುಲೈ 19, 1958 ರಂದು 130.4 ಮಿಮೀ, ನಂತರ ಜುಲೈ 27, 1967 ರಂದು 117.9 ಮಿಮೀ ಮಳೆಯಾಗಿತ್ತು.

ಭಾರೀ ಮಳೆಯ ಹಿನ್ನೆಲೆಯಲ್ಲಿ ರಾಯಗಢ ಜಿಲ್ಲೆ ಮತ್ತು ಪುಣೆ ನಗರದಲ್ಲಿ ಗುರುವಾರ ಶಾಲಾ ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು. ಪಾಲ್ಘರ್ ಜಿಲ್ಲೆಯ ವಾಡಾ ಮತ್ತು ವಿಕ್ರಮಗಡ ತಾಲೂಕುಗಳಿಗೂ ಇದೇ ರೀತಿಯ ಆದೇಶ ಹೊರಡಿಸಲಾಗಿತ್ತು. ಈ ಎರಡೂ ಜಿಲ್ಲೆಗಳು ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿವೆ.

ಮುಂಜಾಗ್ರತಾ ಕ್ರಮವಾಗಿ ಸಿನ್ಹಗಡ ರಸ್ತೆಯ ಏಕತಾ ನಗರದಲ್ಲಿ ಎನ್ ಡಿಆರ್ ಎಫ್, ಸೇನಾ ತಂಡಗಳನ್ನು ನಿಯೋಜಿಸಲಾಗಿದ್ದು, ಲಾವಾಸಾದಲ್ಲಿ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ, ಇದರಲ್ಲಿ ಕೆಲವು ಮೂವರು ವ್ಯಕ್ತಿಗಳು ಸಿಲುಕಿರುವ ಭೀತಿಯಿದೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಜಿಲ್ಲಾ ಪ್ರವಾಸದ ವೇಳೆ ಹೇಳಿದರು.

ಈ ಮಧ್ಯೆ ಭಾರತೀಯ ಹವಾಮಾನ ಇಲಾಖೆ ಪುಣೆ ಜಿಲ್ಲೆಗೆ ‘ರೆಡ್ ಅಲರ್ಟ್’ ಘೋಷಿಸಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಸದ್ಯ ಸಿಂಹಗಡ ರಸ್ತೆಯಲ್ಲಿ ಯಾವುದೇ ಪ್ರವಾಹ ಉಂಟಾಗಿಲ್ಲ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಿದ್ದ ಎಲ್ಲರನ್ನೂ ಸ್ಥಳಾಂತರ ಮಾಡಲಾಗಿದೆ, ಸ್ಥಳಾಂತರಗೊಂಡವರಿಗೆ ಊಟ, ಬಟ್ಟೆ ಮತ್ತಿತರ ಪರಿಹಾರ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪವಾರ್ ತಿಳಿಸಿದರು.

ಖಡಕವಾಸ್ಲಾ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರು ಬಿಡಲಾಗಿದೆ ಎಂದು ಪುಣೆ ಜಿಲ್ಲಾಧಿಕಾರಿ ಸುಹಾಸ್ ದಿವಾಸೆ ತಿಳಿಸಿದ್ದಾರೆ. ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ, 35,000 ಕ್ಯೂಸೆಕ್‌ಗಿಂತ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ನೀರಿನ ಹೊರಹರಿವಿನಿಂದಾಗಿ, ಮುತಾ ನದಿಯ ಹಲವಾರು ತಗ್ಗು ಪ್ರದೇಶಗಳು ಜಲಾವೃತ ಮತ್ತು ಪ್ರವಾಹಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹದ ಹಿನ್ನೆಲೆಯಲ್ಲಿ ಪುಣೆ ನಗರದ ಸಿನ್ಹಗಡ್ ರಸ್ತೆ ಮತ್ತು ನದಿ ದಡದ ಇತರ ಕೆಲವು ಪ್ರದೇಶಗಳಲ್ಲಿ ಸುಮಾರು 400 ಜನರನ್ನು ಗುರುವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಯ ತಗ್ಗು ಪ್ರದೇಶಗಳಲ್ಲಿನ ಹಲವಾರು ಮನೆಗಳು ಮತ್ತು ವಸತಿ ಸಮುಚ್ಚಯಕ್ಕೆ ನೀರು ನುಗ್ಗಿದ್ದು, ಕಾರು, ದ್ವಿಚಕ್ರ ವಾಹನಗಳು ನೀರಿನಲ್ಲಿ ನಿಂತಿದ್ದವು. ಇಲ್ಲಿಯವರೆಗೆ ಸಿನ್ಹಗಡ ರಸ್ತೆಯ 400 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಹಾಸ್ ದಿವ್ಸೆ ತಿಳಿಸಿದ್ದಾರೆ.

ಗುರುವಾರ ಮುಂಜಾನೆ ನೀರಿನಲ್ಲಿ ಮುಳುಗಿದ ಕೈಗಾಡಿಯನ್ನು ಸರಿಸಲು ಪ್ರಯತ್ನಿಸುವಾಗ ಮೂವರು ವ್ಯಕ್ತಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡೆಕ್ಕನ್ ಜಿಮ್ಖಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಣ್ಣ ಉಪಾಹಾರ ಗೃಹದ ಮೇಲೆ ಭೂಕುಸಿತದಿಂದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಈ ಮಧ್ಯೆ ಲೋನಾವಾಲಾ ಗಿರಿಧಾಮ ಸಮೀಪದ ಮಲವ್ಲಿ ಪ್ರದೇಶದಲ್ಲಿನ ರೆಸಾರ್ಟ್‌ಗಳು ಮತ್ತು ಬಂಗಲೆಗಳಲ್ಲಿ ಪ್ರವಾಹದಿಂದಾಗಿ ಸಿಲುಕಿಕೊಂಡಿದ್ದ 29 ಪ್ರವಾಸಿಗರನ್ನು ಬುಧವಾರ ಸಂಜೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರೀ ಮಳೆಯಿಂದಾಗಿ ಮುಂಬೈಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಏರ್ ಇಂಡಿಯಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

No Comments

Leave A Comment