ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಗ್ರೇಟರ್ ಬೆಂಗಳೂರು ವಿಧೇಯಕ ಪರಾಮರ್ಶೆಗೆ ಸದನ ಸಮಿತಿ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕದ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯವಿರುವುದರಿಂದ ವಿಧೇಯಕ ಹಿಂಪಡೆದು ಸದನ ಸಮಿತಿ ರಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ ಮುಡಾ ಹಗರಣದ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿರುವುದರ ನಡುವೆಯೇ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗ್ರೇಟರ್ ಬೆಂಗಳೂರು ಮಸೂದೆಯನ್ನು ಪರ್ಯಾಲೋಚನೆಗಾಗಿ ಮಂಡಿಸಿ ಮಾತನಾಡಿದರು.
ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆ ಇರುವ ಬೆಂಗಳೂರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಡಳಿತ ಸುಧಾರಣೆಯಾಗಬೇಕು. ನಾಗರಿಕ ಸೌಲಭ್ಯಗಳನ್ನು ನೀಡಬೇಕು. ಈ ಮೂಲಕ ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರಕ್ಕೆ ಹೊಸ ರೂಪ ನೀಡಬೇಕು, ಬ್ರಾಂಡ್ ಬೆಂಗಳೂರು ಆಗಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು, ಈ ಮಸೂದೆಯ ಬಗ್ಗೆ ಹೆಚ್ಚು ಚರ್ಚೆ ಆಗಬೇಕು. ಬೆಂಗಳೂರನ್ನು ವಿಭಜಿಸುವುದನ್ನು ತಮ್ಮ ಪಕ್ಷ ಒಪ್ಪುವುದಿಲ್ಲ. ಈ ಸಂಬಂಧ ಶಾಸಕರು ಮತ್ತು ಎಂಎಲ್‌ಸಿಗಳನ್ನು ಒಳಗೊಂಡ ಸದನ ಸಮಿತಿಯನ್ನು ರಚಿಸಬೇಕು. “ಆಗ ಮಾತ್ರ ಬೆಂಗಳೂರಿಗೆ ಒಂದು ರೂಪ ನೀಡಬಹುದು” ಎಂದು ಸಲಹೆ ನೀಡಿದರು. “ಕೇವಲ ಅಧಿಕಾರಿಯ ವರದಿಯನ್ನು ಆಧರಿಸಿ, ಕೆಲಸ ಮಾಡಿದರೆ, ಅದು ಬೆಂಗಳೂರಿಗೆ ಅಪಾಯಕಾರಿ. ಈ ಮಸೂದೆಯನ್ನು ಬಾಕಿ ಇರಿಸಬೇಕು ಮತ್ತು ಸದನ ಸಮಿತಿಯನ್ನು ರಚಿಸಬೇಕು” ಎಂದು ಆಗ್ರಹಿಸಿದರು.
ಮತ್ತೊಬ್ಬ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಮಾತನಾಡಿ, ಉಪಮುಖ್ಯಮಂತ್ರಿ ಅವರು ಐತಿಹಾಸಿಕ ವಿಧೇಯಕವನ್ನು ತಂದಿದ್ದಾರೆ. ಆದರೆ ಅದನ್ನು ವಿಸ್ತೃತವಾಗಿ ಚರ್ಚಿಸಬೇಕಾಗಿದೆ. ಸದನ ಸಮಿತಿಯನ್ನು ರಚಿಸುವ ಮೂಲಕ, ಶಾಸಕರು ಮತ್ತು ಎಂಎಲ್‌ಸಿಗಳನ್ನು ಈ ಸಮಿತಿಯ ಭಾಗವಾಗಿ ಮಾಡಬೇಕು. ಮಸೂದೆಯ ಬಗ್ಗೆ ವಿವರವಾಗಿ ಚರ್ಚಿಸಬೇಕು ಎಂದರು.
ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, ಬೆಂಗಳೂರಿಗೆ ಆರ್ಥಿಕ ಶಕ್ತಿ ಹಾಗೂ ಆಡಳಿತದಲ್ಲಿ ಹೊಸ ರೂಪ ನೀಡುವ ಉದ್ದೇಶದಿಂದ ರೂಪಿಸಲಾಗಿರುವ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಪರಾಮರ್ಶಿಸಲು ಸದನ ಸಮಿತಿ ರಚನೆಗೆ ನಮ್ಮ ಒಪ್ಪಿಗೆ ಇದೆ ಎಂದು ಹೇಳಿದರು.
ಬೆಂಗಳೂರಿನ ಶಾಸಕರಾದ ಸತೀಶ್ ರೆಡ್ಡಿ, ರಾಮಮೂರ್ತಿ ಅವರು ನನ್ನನ್ನು ಭೇಟಿ ಮಾಡಿ ಒಂದಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನಮಗೂ ಸಹ ತರಾತುರಿಯಲ್ಲಿ ಈ ಬಿಲ್ ಅನ್ನು ತರುವ ಆಲೋಚನೆ ಇಲ್ಲ. ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ರಿಜ್ವಾನ್ ಅರ್ಷದ್, ಕೃಷ್ಣಬೈರೇಗೌಡ ಅವರ ಬಳಿಯೂ ಈ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ಈ ವಿಚಾರವಾಗಿ ಸದನ ಸಮಿತಿ ರಚನೆ ಮಾಡಲು ನಮ್ಮ ಒಪ್ಪಿಗೆಯಿದೆ ಎಂದು ಡಿಸಿಎಂ ತಿಳಿಸಿದರು.