ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಶಂಭು ಗಡಿಯಲ್ಲಿ ರೈತರ ಪ್ರತಿಭಟನೆ: ಸರ್ಕಾರವೇ ಪರಿಹಾರ ಕಂಡುಕೊಳ್ಳಬೇಕು – ಸುಪ್ರೀಂ ಕೋರ್ಟ್
ನವದೆಹಲಿ: ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯ ಸಮಸ್ಯೆ ಪರಿಹರಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ಪಂಜಾಬ್-ಹರಿಯಾಣ “ಸರ್ಕಾರಗಳು ರೈತರ ಪ್ರತಿಭಟನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಮತ್ತು ರೈತರೊಂದಿಗೆ ಮಾತುಕತೆ ನಡೆಸುವ ಸ್ವತಂತ್ರ ವ್ಯಕ್ತಿಗಳ ಸಮಿತಿ ರಚಿಸುವಂತೆ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ಉಜ್ಜಲ್ ಭುಯಾನ್ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಹೇಳಿದೆ.
ನ್ಯಾಯಯುತ, ನ್ಯಾಯಸಮ್ಮತ ಮತ್ತು ಪ್ರತಿಯೊಬ್ಬರ ಹಿತಾಸಕ್ತಿಗಳಿಗೆ ಅನುಗುಣವಾಗಿ ಅವರ ಬೇಡಿಕೆಗಳಿಗೆ ಕಾರ್ಯಸಾಧ್ಯವಾದ ಪರಿಹಾರವನ್ನು ಕಂಡುಕೊಳ್ಳಲು ಗಣ್ಯ ವ್ಯಕ್ತಿಗಳನ್ನು ಒಳಗೊಂಡ ಸಮಿತಿ ರೈತರು ಮತ್ತು ಸರ್ಕಾರದೊಂದಿಗೆ ಮಾತುಕತೆ ನಡೆಸಬಹುದು. “ರೈತರೊಂದಿಗೆ ಮಾತುಕತೆ ನಡೆಸಲು ನೀವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರು ದೆಹಲಿಗೆ ಏಕೆ ಬರುತ್ತಾರೆ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ನೀವು ಇಲ್ಲಿಂದ ಸಚಿವರನ್ನು ಕಳುಹಿಸುತ್ತಿದ್ದೀರಿ ಮತ್ತು ಅವರ ಉತ್ತಮ ಉದ್ದೇಶದ ಹೊರತಾಗಿಯೂ ವಿಶ್ವಾಸದ ಕೊರತೆಯಿದೆ. ನೀವು ಕೇವಲ ಸ್ವಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಅವರು ಭಾವಿಸುತ್ತಾರೆ. ಸ್ಥಳೀಯ ಸಮಸ್ಯೆಗಳನ್ನು ನಿರ್ಲಕ್ಷಿಸಿ ನೀವು ತಟಸ್ಥವಾಗಿರುವ ವ್ಯಕ್ತಿಯನ್ನು ಏಕೆ ಕಳುಹಿಸಬಾರದು?” ಎಂದು ಸುಪ್ರೀಂ ಪೀಠ ಕೇಳಿದೆ.
ಅಂಬಾಲಾ ಬಳಿಯ ಶಂಭು ಗಡಿಯಲ್ಲಿನ ಬ್ಯಾರಿಕೇಡಿಂಗ್ ಅನ್ನು ಒಂದು ವಾರದೊಳಗೆ ತೆಗೆದುಹಾಕುವಂತೆ ಹೇಳಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಹರಿಯಾಣ ಸರ್ಕಾರ ಜುಲೈ 15 ರಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ರೈತರು ಫೆಬ್ರವರಿ 13 ರಿಂದ ಶಂಭು ಗಡಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಜುಲೈ 10 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಶಂಭು ಗಡಿಯಲ್ಲಿನ ಬ್ಯಾರಿಕೇಡಿಂಗ್ ಅನ್ನು ತೆರವುಗೊಳಿಸುವಂತೆ ಹರಿಯಾಣ ಸರ್ಕಾರಕ್ಕೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.