ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಉಡುಪಿಯ ಶ್ರೀಮದುತ್ತರಾದಿ ಮಠದಲ್ಲಿ ವಿಶ್ವದ ಮಂಗಳಕ್ಕಾಗಿ ಶ್ರೀಮನ್ಯಾಯಸುಧಾ ಗ್ರಂಥದ ಪಾರಾಯಣ ಪಂ ಆನಂದತೀರ್ಥಾಚಾರ್ ಪಗಡಾಲ್

ಉಡುಪಿ:ಶ್ರೀಮಧ್ವಾಚಾರ್ಯರ ಭವ್ಯವಾದ ಪರಂಪರೆಯಲ್ಲಿ ಬೆಳಗಿದ ಇಂದ್ರಾಂಶಸಂಭೂತರಾದ ಶ್ರೀಜಯತೀರ್ಥರು ಬ್ರಹ್ಮಸೂತ್ರ -ಅನುವ್ಯಾಖ್ಯಾನಗಳಿಗೆ ಶ್ರೀಮನ್ಯಾಯಸುಧಾ ಎನ್ನುವ ಅತ್ಯಂತ ಉತ್ಕೃಷ್ಟವಾದ ಗ್ರಂಥವನ್ನು ರಚಿಸಿದರು. ಈ ಉದ್ಗ್ರಂಥಕ್ಕೆ ನೂರಾರು ವಿದ್ವದ್ವರೇಣ್ಯರು ವ್ಯಾಖ್ಯಾನವನ್ನು ರಚಿಸಿದ್ದಾರೆ. ಮಾಧ್ವ ಪ್ರಪಂಚದಲ್ಲಿ ಶ್ರೀಮನ್ಯಾಯಸುಧಾ ಗ್ರಂಥವನ್ನು ಅಧ್ಯಯನ ಮಾಡಿದವರಿಗೆ ಸರ್ವಶ್ರೇಷ್ಠ ಮನ್ನಣೆಯನ್ನು ನೀಡಲಾಗುತ್ತಿದೆ. ಭಗವಂತನ ಸರ್ವೋತ್ತಮತ್ವವನ್ನು ಪ್ರತಿಪಾದಿಸುವ ಇಂಥಹ ಮಹೋನ್ನತ ಗ್ರಂಥವನ್ನು ಪಾರಾಯಣ ಮಾಡುವುದರಿಂದ ಭಗವಂತನ ಪರಮಾನುಗ್ರಹದಿಂದ ವಿಶ್ವಕ್ಕೆ ಸಕಲವಿಧವಾದ ಸನ್ಮಂಗಳವಾಗುವುದು ಎಂದು ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿಗಳಾದ ಪಂ ಆನಂದತೀರ್ಥಾಚಾರ್ ಪಗಡಾಲ್ ಇವರು ತಿಳಿಸಿದರು. ಒಟ್ಟು ಐದು ದಿನಗಳ ಕಾಲ ಈ ಪಾರಾಯಣ ನಡೆಯುತ್ತದೆ.

ಶ್ರೀಮನ್ಯಾಯಸುಧಾ ಗ್ರಂಥವನ್ನು ಪ್ರತಿವರ್ಷವೂ ಪಾರಾಯಣ ಮಾಡಿಸುವ ವಿಶೇಷ ಯೋಜನೆಯನ್ನು ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿಗಳಾದ ಪಂ ಆನಂದತೀರ್ಥಾಚಾರ್ ಪಗಡಾಲ್ ಇವರ ಪರಿಶ್ರಮದ ಫಲವಾಗಿ ಕಳೆದ ಅನೇಕ ವರ್ಷಗಳಿಂದ ತಿರುಮಲ ತಿರುಪತಿ ದೇವಸ್ಥಾನಗಳ ದಾಸಸಾಹಿತ್ಯ ಪ್ರಾಜೆಕ್ಟ್ ನಿಂದ ಆಯೋಜಿಸಲಾಗುತ್ತಿದೆ. ಪ್ರತಿವರ್ಷವೂ ಏಕಕಾಲದಲ್ಲಿ ತಿರುಮಲದ ಶ್ರೀನಿವಾಸನ ದಿವ್ಯ ಸನ್ನಿಧಿಯಲ್ಲಿ, ಮಳಖೇಡದ ಶ್ರೀ ಜಯತೀರ್ಥರ ಮೂಲವೃಂದಾವನದ ದಿವ್ಯ ಸನ್ನಿಧಿಯಲ್ಲಿ, ಶ್ರೀಜಯತೀರ್ಥರ ಮೃತ್ತಿಕಾವೃಂದಾವನದ ಸನ್ನಿಧಾನದ ಉಡುಪಿಯ ಶ್ರೀಮದುತ್ತರಾದಿ ಮಠದಲ್ಲಿ ಆಯೋಜಿಸಲಾಗುತ್ತಿದೆ.

ಶ್ರೀಮಜ್ಜಯತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ತಿರುಮಲ ತಿರುಪತಿ ದೇವಸ್ಥಾನಗಳ ದಾಸಸಾಹಿತ್ಯ ಪ್ರಾಜೆಕ್ಟ್ ನಿಂದ ತಿರುಮಲ-ಮಳಖೇಡ-ಉಡುಪಿ ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ನಡೆಯಲಿರುವ ಶ್ರೀಮನ್ಯಾಯಸುಧಾ ಗ್ರಂಥದ ಪಾರಾಯಣ ಕಾರ್ಯಕ್ರಮಕ್ಕೆ ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿಗಳಾದ ಪಂ. ಆನಂದತೀರ್ಥಾಚಾರ್ ಪಗಡಾಲ್ ಇವರು ಅನೇಕ ಪೀಠಾಧಿಪತಿಗಳ ಪರಮಾನುಗ್ರಹದೊಂದಿಗೆ ಈ ವರ್ಷದ ಪಾರಾಯಣ ಕಾರ್ಯಕ್ರಮವನ್ನು ಉಡುಪಿಯ ಶ್ರೀ ಉತ್ತರಾದಿ ಮಠದಲ್ಲಿ ಉದ್ಘಾಟಿಸಿ ಚಾಲನೆ ನೀಡಿದರು.

ವಿದ್ವಾಂಸರಿಗೆ ಶ್ರೀನಿವಾಸನ ಪ್ರಸಾದವನ್ನು ನೀಡಿ ಪಾರಾಮಢವು ನಿರ್ವಿಘ್ನವಾಗಿ ನಡೆಯಲಿ ಎಂದು ಹಾರೈಸಿದರು.

ಈ ಪಾರಾಯಣ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಉತ್ತರಾದಿ ಮಠದ ಅಧಿಕಾರಿಗಳಾದ ಪಂ. ಪ್ರಕಾಶಾಚಾರ್, ಪಂ. ಆನಂದತೀರ್ಥಾಚಾರ್ ಮಠದ, ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ಡಾ. ಬಿ. ಗೋಪಾಲಾಚಾರ್, ತತ್ವಸಂಶೋಧನ ಸಂಸತ್ತಿನ ನಿರ್ದೇಶಕರಾದ ಡಾ. ವಂಶಿ ಕೃಷ್ಣಾಚಾರ್, ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ವೇದಾಂತ ವಿಭಾಗದ ಮುಖ್ಯಸ್ಥರಾದ ಪಂ. ಷಣ್ಮುಖ ಹೆಬ್ಬಾರ್ ಇವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಗುಲ್ಬರ್ಗ ಪ್ರಾಂತದ ದಾಸಸಾಹಿತ್ಯ ಪ್ರಾಜೆಕ್ಟ್ ನ ಸಂಯೋಜಕರಾದ ಡಾ. ಶ್ರೀನಿವಾಸ ಪದಕಿ ಇವರು ಜೊತೆಗಿದ್ದರು.

No Comments

Leave A Comment