ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಶಿರಾಡಿ ಘಾಟ್ನಲ್ಲಿ ಸಂಚಾರ ಬಂದ್, ಟ್ರಾಫಿಕ್ ಜಾಮ್: ಅತ್ತ ಚಾರ್ಮಾಡಿ ಘಾಟ್ನಲ್ಲೂ ಪ್ರಯಾಣ ದುಸ್ತರ
ಹಾಸನ, ಜುಲೈ: ಹಾಸನ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್ನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು ವಾಹನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇಂದು ಮುಂಜಾನೆ ದೊಡ್ಡತಪ್ಲು ಬಳಿ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡ ಕುಸಿತದಿಂದ ಸುಮಾರು 10 ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಟ್ರಕ್, ಲಾರಿ ಟ್ಯಾಕರ್ ಓಡಾಟಕ್ಕೆ ತಾತ್ಕಾಲಿಕ ತಡೆ ಹೇರಲಾಗಿದೆ.
ಹಾಸನದ ಕಂದಲಿ ಗ್ರಾಮದ ಬಳಿಯೇ ಪೊಲೀಸರು ವಾಹನಗಳನ್ನು ತಡೆಯುತ್ತಿದ್ದಾರೆ. ಅತ್ತ ಚಾರ್ಮಾಡಿ ಘಾಟ್ ರಸ್ತೆಯಲ್ಲೂ ಪ್ರಯಾಣ ದುಸ್ತರವಾಗಿದ್ದು, ಹಾಸನ ಬಳಿಯೇ ವಾಹನ ನಿಲ್ಲಿಸಲು ಪೊಲೀಸರು ಸೂಚನೆ ನೀಡುತ್ತಿದ್ದಾರೆ.
ಮಂಗಳೂರು ಬಸ್ಗಳ ಸಂಚಾರಕ್ಕೆ ತಡೆ
ಸಕಲೇಶಪುರದ ವರೆಗೆ ತೆರಳುವ ಸಾರಿಗೆ ಬಸ್ಗಳಿಗೆ ಮಾತ್ರ ತೆರಳಲು ಅವಕಾಶ ನೀಡಲಾಗುತ್ತಿದೆ. ಮಂಗಳೂರು ಕಡೆಗೆ ಹೋಗುವ ಬಸ್ಗಳಿಗೂ ಹಾಸನ ತಾಲ್ಲೂಕಿನ ಕಂದಲಿ ಬಳಿ ತಡೆಯೊಡ್ಡಲಾಗುತ್ತಿದೆ. ವಾಹನಗಳನ್ನು ತಡೆದು ಗುಡ್ಡ ಕುಸಿತದ ಬಗ್ಗೆ ಮಾಹಿತಿ ನೀಡಿ ವಾಪಸ್ ಕಳುಹಿಸಲಾಗುತ್ತಿದೆ. ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನಗಳಿಗೆ ತಡೆಯೊಡ್ಡಲಾಗುತ್ತಿದೆ.
ರಸ್ತೆಗೆ ಕುಸಿದ ಮಣ್ಣು ತೆರವು ಮಾಡಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.
ದೊಡ್ಡತಪ್ಲು ಬಳಿಯ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಡರಾತ್ರಿ ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಗುಡ್ಡ ಕುಸಿದ ಘಟನೆ ಸಂಭವಿಸಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.
ನೇತ್ರಾವತಿ ನದಿ ಹರಿವು ಏರಿಕೆ
ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಸದ್ಯ ನದಿ ನೀರಿನ ಮಟ್ಟ 7.8 ಮೀಟರ್ಗೆ ಏರಿಕೆ ಕಂಡಿದೆ. 8.5 ಮೀಟರ್ ಅಪಾಯದ ಮಟ್ಟವಾಗಿದೆ. ನದಿ ನೀರು ಏರಿಕೆಯಿಂದ ಬಂಟ್ವಾಳದ ಪಾಣೆಮಂಗಳೂರಿನ ಆಲಡ್ಕ ಎಂಬಲ್ಲಿ ಮೈದಾನಕ್ಕೆ ನೀರು ನುಗ್ಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಲಡ್ಕದ ಸುಮಾರು 10 ಜನರ ಸ್ಥಳಾಂತರ ಮಾಡಲಾಗಿದೆ. ನದಿ ತೀರದಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.