ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ: ಭಾರೀ ಮಳೆಗೆ ದೊಡ್ಡನಗುಡ್ಡೆ ಸರಕಾರಿ ಶಾಲೆಯ ಗೋಡೆ ಕುಸಿತ- ತಪ್ಪಿದ ಅನಾಹುತ
ಉಡುಪಿ:ಜು. 15ಭಾರೀ ಮಳೆಗೆ ದೊಡ್ಡನಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿದಿದೆ.ಮಳೆ ನೀರಿನಿಂದ ಅಡುಗೆ ಮನೆಯ ಗೋಡೆ ಒದ್ದೆಯಾಗಿದ್ದು, ಗೋಡೆಯ ಭಾಗ ಕುಸಿದಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಅನಾಹುತದಿಂದ ಪಾರಾಗಿದ್ದಾರೆ.ಗೋಡೆ ಕುಸಿದ ಪರಿಣಾಮ ಅಡುಗೆ ಸಾಮಗ್ರಿಗಳು, ಗ್ಯಾಸ್ ಸಿಲಿಂಡರ್‌ಗಳು, ವಿದ್ಯಾರ್ಥಿಗಳ ಊಟಕ್ಕೆ ಬಳಸುತ್ತಿದ್ದ 40ಕ್ಕೂ ಹೆಚ್ಚು ಸ್ಟೀಲ್ ಪ್ಲೇಟ್‌ಗಳು ಮಣ್ಣಿನಡಿಯಲ್ಲಿ ಹೂತು ಹೋಗಿವೆ.
1990ರ ಸುಮಾರಿಗೆ ಸಾಲ ಯೋಜನೆಯಡಿ ಅಂಗನವಾಡಿ ನಿರ್ಮಿಸಲಾಗಿತ್ತು. ನಂತರ ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಅಂಗನವಾಡಿಯ ಒಂದು ಭಾಗವನ್ನು ಅಡುಗೆ ಮನೆ ಬಳಕೆಗೆ ಮೀಸಲಿಡಲಾಗಿತ್ತು. ಅಂಗನವಾಡಿ ಗೋಡೆಯ ಒಂದು ಭಾಗ ಕುಸಿದಿದ್ದು, ಅಡುಗೆ ಕೋಣೆಯನ್ನು ಸಮೀಪದ ಶಾಲಾ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಅಡುಗೆ ಸಾಮಾನುಗಳು, ಕುರ್ಚಿ, ಟೇಬಲ್ ಗಳು ಸೇರಿ 40ಕ್ಕೂ ಹೆಚ್ಚು ಸ್ಟೀಲ್ ಪ್ಲೇಟ್ ಗಳು ಮಣ್ಣಿನಡಿ ಹೂತು ಹೋಗಿವೆ. ಶಾಲೆಯ ಕೆಲ ಕೊಠಡಿಗಳ ಚಾವಣಿ ಸೋರುತ್ತಿದೆ.
ಶಾಲೆಯ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಮಾತನಾಡಿ, ‘ಶಿಕ್ಷಕರು, ಅಡುಗೆಯವರು, ಸಹಾಯಕರು ತಿರುಗಾಡುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದರೆ ಭಾರೀ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಹಿರಿಯ ಸಿಬ್ಬಂದಿ ಗೀತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸಿ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ರೂಪುರೇಷೆಗಳನ್ನು ಮಾಡಲಾಗಿದೆ. ಶಿಕ್ಷಣ ಇಲಾಖೆ ನಷ್ಟವನ್ನು ಭರಿಸಿ ಕಟ್ಟಡ ದುರಸ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.