ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ, ಶಾಸಕ ದದ್ದಲ್ ನಿವಾಸದಲ್ಲಿ ಮುಂದುವರಿದ ED ಕಾರ್ಯಾಚರಣೆ, 18 ಕಡೆ ಶೋಧಕಾರ್ಯ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ (Valmiki Development Corporation) ದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ನಿನ್ನೆ ಬುಧವಾರ ಆರಂಭವಾಗಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಬೃಹತ್ ಕಾರ್ಯಾಚರಣೆ ಇಂದು ಗುರುವಾರ ಕೂಡ ಮುಂದುವರಿದಿದೆ.
ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ನಿವಾಸಗಳ ಮೇಲೆ ನಿನ್ನೆ ಆರಂಭವಾದ ಇಡಿ ಶೋಧಕಾರ್ಯ ನಿನ್ನೆ ರಾತ್ರಿ, ಇಂದು ಮುಂಜಾನೆ ಕೂಡ ಮುಂದುವರಿದಿದೆ.
ಸಚಿವ ನಾಗೇಂದ್ರ ನಿವಾಸದಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಿಂದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಶಾಸಕ ದದ್ದಲ್ ನಿವಾಸ, ಕಚೇರಿ ಸೇರಿ ಉಳಿದ ಕಡೆಯೂ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ಒಟ್ಟು ಹದಿನೆಂಟು ಕಡೆ ಜಾರಿ ನಿರ್ದೇಶನಾಲಯ ದಾಳಿ ನಡೆದಿದ್ದು, ರಾತ್ರಿ ಹನ್ನೆರಡು ಗಂಟೆಗೆ ಅಧಿಕಾರಿಗಳು ದಾಳಿಗೆ ವಿರಾಮ ನೀಡಿದ್ದರು. ದಾಳಿ ಮಾಡಿದ್ದ ಸ್ಥಳದಲ್ಲೇ ಉಳಿದುಕೊಂಡಿದ್ದರು.
ಇಡಿ ಅಧಿಕಾರಿಗಳ ಒಂದು ತಂಡ ನಾಗೇಂದ್ರ ನಿವಾಸದಲ್ಲಿ ಹಾಗೂ ಇನ್ನೊಂದು ತಂಡ ದದ್ದಲ್ ನಿವಾಸದಲ್ಲಿ ಉಳಿದುಕೊಂಡಿದ್ದರು. ಇಂದು ಬೆಳ್ಳಂಬೆಳಗ್ಗೆಯೇ ಶೋಧ ಮುಂದುವರಿಸಿದ್ದಾರೆ. ಒಂದೇ ಕಾಲಕ್ಕೆ ಹದಿನೆಂಟಕ್ಕೂ ಹೆಚ್ಚು ಸ್ಥಳದಲ್ಲಿ ತಪಾಸಣೆ ನಡೆಸಲಾಗಿತ್ತು. ಎಲ್ಲಾ ದಾಳಿ ಸ್ಥಳಗಳಲ್ಲಿ ಏನೆಲ್ಲಾ ದೊರೆತಿದೆ ಎಂದು ಪರಿಶೀಲನೆ ಮಾಡಿ, ನಂತರ ಇಂಟರ್ ಲಿಂಕ್ ಹೊಂದಿರುವ ಸ್ಥಳದಲ್ಲಿ ಮತ್ತೆ ದಾಖಲೆಗಳ ಪರಿಶೀಲನೆ ನಡೆಯುವುದಿದೆ.
ನಿನ್ನೆ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ನನ್ನು ಇಡಿ ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಇಂದು ಅಗತ್ಯ ಬಿದ್ದಲ್ಲಿ ಶಾಸಕ ದದ್ದಲ್‌ರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಯಲಹಂಕ ಬಳಿ ಇರುವ ದದ್ದಲ್ ನಿವಾಸದಲ್ಲಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ದಾಳಿ ಮುಂದುವರಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ನಾಗೇಂದ್ರ ಅವರ ಬಂಧನ ಸಾಧ್ಯತೆ ಇದೆ ಎನ್ನಲಾಗುತ್ತಿದೆ.