ಚಿಕ್ಕಮಗಳೂರು: ಡಿಸೆಂಬರ್ 14 ರಂದು ದತ್ತಮಾಲಾ ಧಾರಿಗಳಿಂದ ದತ್ತ ಪಾದುಕೆ ದರ್ಶನ, ಜಿಲ್ಲೆಯಲ್ಲಿ ಹೈ ಅಲರ್ಟ್
ಮುಡಾ ಹಗರಣ: ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ, ರಾಜ್ಯಪಾಲರ ಭೇಟಿ ಮಾಡಿದ ರೈತ ಮುಖಂಡರ ನಿಯೋಗ
ಬೆಂಗಳೂರು: ಮೈಸೂರಿನ ನಗರ ಅಭಿವೃದ್ಧಿ ಪ್ರಾಧಿಕಾರದ ಹಗರಣ ಕುರಿತು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಲು ಒತ್ತಾಯಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ ರೈತ ಮುಖಂಡರು, ಮನವಿ ಸಲ್ಲಿಸಿದ್ದಾರೆ.
ಶನಿವಾರ ರಾಜಭವನಕ್ಕೆ ಬಂದ ರೈತ ಮುಖಂಡರನ್ನೊಳಗೊಂಡ ನಿಯೋಗ, ಮೈಸೂರಿನ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಾರದ ಹಗರಣ ವಾಗಿದ್ದು ಪ್ರಭಾವಿ ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರು ಭಾಗಿದಾರರಾಗಿರುವ ಕಾರಣ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇನ್ನು ಹಗರಣದಲ್ಲಿ ಪಾಲುದಾರರಾಗಿರುವ ತಪ್ಪಿತಸ್ಥರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸುವ ಕಾಯ್ದೆ ಅಡಿಯಲ್ಲಿ ಶಿಕ್ಷಿಸಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದರು. ಈ ವೇಳೆ ಹತ್ತು ನಿಮಿಷಗಳ ಕಾಲ ವಿವರವಾಗಿ ಎಲ್ಲ ಮಾಹಿತಿಯನ್ನು ನಿಯೋಗದಿಂದ ರಾಜ್ಯಪಾಲರು ಪಡೆದುಕೊಂಡರು.
ಒಂದು ವರ್ಷ ಹಿಂದೆ ಮುಡಾ ಕಚೇರಿಯಲ್ಲಿನ ದಾಖಲಾತಿಗಳು ಹಾಗೂ ಕಡತಗಳು ಕಳುವು ಆಗಿದ್ದು ಈ ಬಗ್ಗೆ ರೈತ ಸಂಘಟನೆಯಿಂದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತನಿಖೆ ನಡೆಸುವಂತೆ ಒತ್ತಾಯಿಸಲಾಗಿತ್ತು. ಅವತ್ತಿನ ದಿನ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಸರ್ಕಾರದ ಸಾವಿರಾರು ಕೋಟಿ ರೂಪಾಯಿ ಆಸ್ತಿ ಪ್ರಭಾವಿಗಳಿಂದ ಲಪಟಾಯಿಸುವುದು ತಪ್ಪುತಿತ್ತು.
ಇಂದು ಬಹುತೇಕ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಜನರೇ ಪ್ರತಿನಿಧಿಗಳಾಗಿರುವ ಕಾರಣ ಈ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ರೈತರಿಗೆ ಸಾರ್ವಜನಿಕರಿಗೆ ಬಡವರಿಗೆ ವ್ಯವಸ್ಥಿತ ವಂಚನೆ ಮಾಡುತ್ತಿದ್ದಾರೆ. ರೈತರ ಜಮೀನು ವಶಪಡಿಸಿಕೊಳ್ಳುವಾಗ ವಾಮಮಾರ್ಗಗಳನ್ನು ಬಳಸಿ ರೈತರಿಗೆ ಕಡಿಮೆ ಹಣ ನೀಡಿ ವಂಚಿಸಿ ರಿಯಲ್ ಎಸ್ಟೇಟ್ ದಲ್ಲಾಳಿಗಳು ಮೋಸ ಮಾಡುತ್ತಿದ್ದಾರೆ.
ತಮ್ಮ ಹೆಸರಿನಲ್ಲಿ ಕೃಷಿ ಭೂಮಿ ನೀಡದೇ ಇರುವ ಕೆಲವು ದಲ್ಲಾಳಿಗಳು ನಾವು ಭೂಮಿ ನೀಡಿದ್ದೇವೆ ಎಂದು ಸುಳ್ಳು ದಾಖಲೆ ನೀಡಿ ನಿವೇಶನ ಪಡೆದಿದ್ದಾರೆ. ಹಾಲಿ, ಮಾಜಿ ಜನಪ್ರತಿನಿಧಿಗಳು ಕೂಡ ಹಲವಾರು ನಿವೇಶನಗಳನ್ನು ಪಡೆದು ಸಾಮಾನ್ಯರಿಗೆ, ಬಡವರಿಗೆ ಸಿಗಬೇಕಾದ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕುರುಬೂರು ಶಾಂತಕುಮಾರ್ ಅವರು, ಈ ಹಗರಣದಲ್ಲಿ ಆಡಳಿತ -ವಿಪಕ್ಷಗಳ ಪ್ರಭಾವಿ ಮುಖಂಡರೇ ಭಾಗಿಗಳಾಗಿದ್ದಾರೆ, ಆದ್ದರಿಂದ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯ ಎತ್ತಿ ಹಿಡಿಯಲು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ಮಾಡಿಸುವುದು ಸೂಕ್ತವಾಗಿದೆ ಎಂದು ಹೇಳಿದರು.
ನಿಯೋಗದಲ್ಲಿ ಕನ್ನಡ ಚಳುವಳಿ ಸಂಘದ ರಾಜ್ಯಾಧ್ಯಕ್ಷ ಗುರುದೇವ್ ನಾರಾಯಣ್, ವಕೀಲರಾದ ಎಲ್.ರವಿಕುಮಾರ್, ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಉಡಿಗಾಲ ರೇವಣ್ಣ, ತುಮಕೂರು ಶಿವಕುಮಾರ್, ಬಾಗೇಪಲ್ಲಿ ಗೋವಿಂದರೆಡ್ಡಿ, ಸುಂದ್ರಪ್ಪ ಇತರರು ಇದ್ದರು