ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಮದ್ವೆಯಾಗಿದ್ರೂ ಕಾಲೇಜು ವಿದ್ಯಾರ್ಥಿನಿ ಜತೆ ಲವ್: ವಿಡಿಯೋ ಮಾಡಿಟ್ಟು ಸಾವಿಗೆ ಶರಣಾದ ಪ್ರೇಮಿಗಳು
ಬೆಂಗಳೂರು: ಜುಲೈ 3 : ಮನೆಯಿಂದ ನಾಪತ್ತೆಯಾಗಿದ್ದ ಪ್ರೇಮಿಗಳು ಬೆಂಗಳೂರಿನ ನೈಸ್ ರಸ್ತೆ ಅಂಜನಾಪುರದ ತುಳಸಿಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ಅಂಜನಾ(20) ಮತ್ತು ಶ್ರೀಕಾಂತ್(25) ಎಂದು ಗುರುತಿಸಲಾಗಿದೆ. ಶ್ರೀಕಾಂತ್‌ಗೆ ಈಗಾಗಲೇ ಮದುವೆಯಾಗಿದ್ದರೂ ಸಹ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಅಂಜನಾಳನ್ನ ಪ್ರೀತಿ ಮಾಡುತ್ತಿದ್ದ. ಆದರೆ ಇಬ್ಬರು ಒಟ್ಟಿಗೆ ಬದುಕಲು ಆಗಲ್ಲ ಎಂದು ತಿಳಿದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅಚ್ಚರಿ ಅಂದರೆ ಶ್ರೀಕಾಂತ್ ಪತ್ನಿ ಸಹ ವಿಚ್ಛೇದನ ನೀಡುತ್ತೇನೆ ನೀವು ಲವರ್ ಜೊತೆ ಸಂತೋಷದಿಂದ ಇರು ಎಂದು ಹೇಳಿದ್ದಳಂತೆ. ಆದರೂ ಸಹ ಶ್ರೀಕಾಂತ್ ಪ್ರೇಯತಮೆ ಜೊತೆ ಸಾವಿಗೆ ಶರಣಾಗಿದ್ದಾನೆ.
ಬಿಬಿಎ ವಿದ್ಯಾರ್ಥಿಯಾಗಿದ್ದ ಅಂಜನಾ ತಲಘಟ್ಟಪುರ ಸಮೀಪದ ಅಂಜನಾಪುರ ನಿವಾಸಿ. ಬಿಕಾಂ ವ್ಯಾಸಂಗ ಮಾಡುತ್ತಿದ್ದ ಶ್ರೀಕಾಂತ್ ಕೋಣನಕುಂಟೆ ನಿವಾಸಿ. ನಾಪತ್ತೆ ಹಿನ್ನೆಲೆಯಲ್ಲಿ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್ನು ಡೆತ್ ನೋಟ್ ಪತ್ತೆಯಾಗಿದ್ದು, ನಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಉಲ್ಲೇಖಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರಲ್ಲಿ ಶ್ರೀಕಾಂತ್ ವಿವಾಹಿತನಾಗಿದ್ದ. ಆದರೆ ಅಂಜನಾಳನ್ನು ಪ್ರೀತಿಸುತ್ತಿದ್ದ. ಹೀಗಾಗಿ ಇವರಿಬ್ಬರ ಪ್ರೀತಿಗೆ ವಿದ್ಯಾರ್ಥಿನಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಇವರಿಬ್ಬರೂ ಜುಲೈ 1ರಂದು ನಾಪತ್ತೆಯಾಗಿದ್ದರು. ಇಬ್ಬರೂ ದಾರದಿಂದ ಕೈ ಕಟ್ಟಿಕೊಂಡು ಅಂಜನಾಪುರದ ತುಳಸಿಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲವರ್ ಜೊತೆ ಇರು ಎಂದಿದ್ದ ಶ್ರೀಕಾಂತ್ ಪತ್ನಿ
ಶ್ರೀಕಾಂತ್ ಈಗಾಗಲೇ ಪ್ರೀತಿಸಿ ಓರ್ವಳನ್ನ ಕಳೆದ 2 ವರ್ಷದ ಹಿಂದೆ ವಿವಾಹವಾಗಿದ್ದ. ಮದುವೆ ಬಳಿಕವು ಕಾಲೇಜಿಗೆ ಹೋಗುತ್ತಿದ್ದ ಶ್ರೀಕಾಂತ್, ಅಲ್ಲಿ ಅಂಜನಾ ಮೇಲೆ ಪ್ರೇಮಾಂಕುರವಾಗಿದೆ. ಬಳಿಕ ಶ್ರೀಕಾಂತ್ ವಿಚಾರವನ್ನು ಮನೆಯಲ್ಲಿ ಹೇಳಿದ್ದ. ಅಲ್ಲದೇ ಪತ್ನಿಗೂ ಸಹ ಈ ವಿಚಾರವನ್ನು ತಿಳಿಸಿದ್ದ. ಅವಳು ಇಲ್ಲ ಅಂದ್ರೆ ನಾನು ಬದುಕಲ್ಲ ಎಂದು ಹೆಂಡ್ತಿ ಮುಂದೆ ಹೇಳಿದ್ದ. ಇದಕ್ಕೆ ಪತ್ನಿ ಸಹ ಸಾಯುವುದು ಬೇಡ ನಾನೇ ವಿಚ್ಛೇದನ ನೀಡುತ್ತೇನೆ ಅವಳ ಜೊತೆಗೆ ಇರು ಎಂದಿದ್ದಳು. ಆದರೂ ಸಹ ಶ್ರೀಕಾಂತ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಾಯುವ ಮುನ್ನ ವಿಡಿಯೋ ಮಾಡಿಟ್ಟಿದ್ದ ಜೋಡಿ
ಇನ್ನು ಸಾವಿಗೂ ಮುನ್ನ ಯುವತಿ ಅಂಜನಾ, ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯುತ್ತಿದ್ದೇವೆ ಎಂದು ವಿಡಿಯೋ ಮಾಡಿ ಮೊಬೈಲ್ ಅನ್ನು ಆಟೋದಲ್ಲಿಟ್ಟು ಕೆರೆಗೆ ಹಾರಿದ್ದಾರೆ. ಇನ್ನು ಮೊಬೈಲ್ ಅನ್ನು ತಲಘಟ್ಟಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಈ ಪ್ರಕರಣದ ಬಗ್ಗೆ ದಕ್ಷಿಣ ವಿಭಾಗ ಡಿಸಿಪಿ ಲೋಕೆಶ್ ಜಗಲಾಸರ್ ಪ್ರತಿಕ್ರಿಯಿಸಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಇಬ್ಬರೂ ಸ್ನೇಹಿತರಾಗಿದ್ದು, ಒಟ್ಟಿಗೆ ಓಡಾಡುತ್ತಿದ್ದರು. ಇಬ್ಬರಲ್ಲಿ ಶ್ರೀಕಾಂತ್‌ಗೆ ಮದುವೆಯಾಗಿದೆ. ಮದುವೆ ಆದ ಕಾರಣ ಒಟ್ಟಿಗೆ ಇರಲು ಆಗಲ್ಲ ಅನ್ನೋ ದುಃಖ ಇತ್ತು. ಇಬ್ಬರೂ ಒಟ್ಟಿಗೆ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.