ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ವಾಲ್ಮೀಕಿ ಅಭಿವೃದ್ಧಿ ನಿಗಮದ ರೀತಿಯೇ BBMPಯಲ್ಲೂ ಬಹುಕೋಟಿ ಹಗರಣ; 9 ಅಧಿಕಾರಿಗಳ ವಿರುದ್ಧ ದೂರು ದಾಖಲು, ಪಾಲಿಕೆಗೆ ಲೋಕಾಯುಕ್ತ ಪತ್ರ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ರೀತಿಯಂತೆಯೇ ಬಿಬಿಎಂಪಿಯಲ್ಲೂ ಬಹುಕೋಟಿ ಹಗರಣ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ವಾಲ್ಮೀಕಿ ನಿಗಮದ ಹಗರಣಕ್ಕಿಂತ ಬಾರಿ ದೊಡ್ಡ ಹಗರಣ ಬಿಬಿಎಂಪಿಯಲ್ಲಿ ನಡೆದಿದೆ ಎನ್ನಲಾಗಿದೆ.
ಅಸ್ತಿತ್ವದಲ್ಲೇ ಇಲ್ಲದ ಸೊಸೈಟಿಗಳಿಗೆ ಬಿಬಿಎಂಪಿಯ ಕಲ್ಯಾಣ ಇಲಾಖೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಮೂಲಗಳು ತಿಳಿಸಿವೆ.
ಅಸ್ತಿತ್ವದಲ್ಲೇ ಇಲ್ಲದ ಸೊಸೈಟಿ, ಸಹಕಾರಿ ಸಂಘ, ಕೋ ಆಪರೇಟಿವ್ ಸೊಸೈಟಿಗಳಿಗೆ ಕೊರೋನಾ ಸಮಯದಲ್ಲಿ ಅಕ್ರಮವಾಗಿ ಕೋಟಿ ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಅಕ್ರಮ ಹಣ ವರ್ಗಾವಣೆ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ 2020ರಿಂದ 2021ರ ನಡುವೆ ಈ ಬಹುಕೋಟಿ ಹಗರಣ ನಡೆದಿದ್ದು, ಒಟ್ಟು 9 ಹಣಕಾಸು ವಿಭಾಗದ ಅಧಿಕಾರಿಗಳ ಮೇಲೆ ದೂರು ದಾಖಲಾಗಿದೆ.
ರಾಜ್ಯ ಲೆಕ್ಕ ಪರಿಶೋಧನೆ ಇಲಾಖೆಯಿಂದ ಅಕ್ರಮ ನಡೆಸಿದ ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೇಳಲಾಗಿದ್ದು ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಪೂರ್ವಾನುಮತಿ ನೀಡಬೇಕು ಎಂದು ಪಾಲಿಕೆಯ ವಿಶೇಷ ಆಯುಕ್ತರಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಸುಮಾರು 102 ಕೋಟಿ ರೂ. ಹಣ ವರ್ಗಾವಣೆ ಆಗಿದೆ ಎಂದು ಲೋಕಾಯುಕ್ತಕ್ಕೆ ದೂರು ಬಂದಿದೆ. ಅಕ್ರಮದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಅಂಗವಿಕಲರು, ವಿಧವೆಯರ ಹೆಸರುಗಳಲ್ಲಿ ಅಕ್ರಮ ಹಣ ದುರ್ಬಳಕೆ ಮಾಡಿರೋದು ಬಯಲಾಗಿದೆ.
ಸುಬೇಶ್, ಎಸ್.ಎಸ್. ದೇವಕಿ, ಬಿ.ಗಾಯತ್ರಿ, ಜಿ.ಎನ್. ಸುಬ್ಬರಾಮಯ್ಯ, ಎಸ್.ವಿ.ಗಿರಿಯಪ್ಪ, ಎನ್.ಗೀತಾ, ಕುಮಾರಿ ಕುಸುಮಾ, ಲಿಂಗಣ್ಣ ಗುಂಡಳ್ಳಿ, ಸತ್ಯಮೂರ್ತಿ. ಇವರು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಹಣ ದುರುಪಯೋಗ ಕುರಿತು ಈಗಾಗಲೇ ವಿಚಾರಣೆ ನಡೆಯುತ್ತಿದೆ, ಯಾವ ಆಧಾರದಲ್ಲಿ ಆರೋಪ ಮಾಡಲಾಗಿದೆ ಎಂಬುದನ್ನು ನೋಡಬೇಕಿದೆ. ಲೋಕಾಯುಕ್ತರು ನಮ್ಮಿಂದ ವರದಿ ಕೇಳಿದ್ದಾರೆ . ನಾವು ಅದನ್ನು ನೀಡುತ್ತೇವೆ. ಅವರಿಗೆ ತೃಪ್ತಿ ಇಲ್ಲದಿದ್ದರೆ ಈ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಬಹುದು. ತನಿಖೆಗೆ ನಾವು ಒಪ್ಪಿಗೆ ನೀಡಬೇಕಿದೆ ಎಂದು ಹೇಳಿದರು.
ಈ ಬೆಳವಣಿಗೆ ಮುಖ್ಯಮಂತ್ರಿ (ಸಿಎಂ) ಕಚೇರಿಯನ್ನೂ ತಲುಪಿದ್ದು, ಮುಖ್ಯಮಂತ್ರಿಗಳ ಕಚೇರಿ ಕೂಡ ಸೋಮವಾರದೊಳಗೆ ಬಿಬಿಎಂಪಿಯಿಂದ ವರದಿ ಕೇಳಿದೆ.