ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ತುಂಗಾ ಜಲಾಶಯ ಸಂಪೂರ್ಣ ಭರ್ತಿ, ಮೈದುಂಬಿ ಧುಮುಕುತ್ತಿರುವ ಜೋಗ್ ಫಾಲ್ಸ್
ಶಿವಮೊಗ್ಗ, (ಜೂನ್ 27): ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮಲೆನಾಡಿನ ಕೆಲಭಾಗದಲ್ಲಿ ಅಂದರೆ ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಗಾಜನೂರು ಡ್ಯಾಂ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದೆ. ಇಂದು (ಜೂನ್ 27) ತುಂಗಾ ಜಲಾಶಯದಿಂದ 6 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಪವರ್ ಪ್ಯಾಂಟ್ಗೆ ಬಿಡುಗಡೆ ಮಾಡಲಾಗಿದ್ದರೆ, ಎರಡು ಗೇಟ್ ಮೂಲಕ 1 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗಿದೆ. ಸದ್ಯ ತುಂಗಾ ಜಲಾಶಯಕ್ಕೆ 6 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಆ ಒಳ ಹರಿವಿನಷ್ಟೇ ನೀರನ್ನ ಜಲಾಶಯದಿಂದ ಹೊರ ಬಿಡಲಾಗಿದೆ. ಕಳೆದ ಒಂದು ವಾರದಿಂದ ಸುರಿದ ಉತ್ತಮ ಮಳೆಯಿಂದ 588.24 ಅಡಿಯಷ್ಟು ನೀರು ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಬಿಡಲಾಗಿದೆ. ಒಳಹರಿವು ಹೆಚ್ಚಾದರೆ ಹೊರ ಹರಿವನ್ನು ಕೂಡ ಹೆಚ್ಚಳ ಮಾಡಲಾಗುವುದು ಎಂದು ನದಿಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.
ತುಂಗಾ ಜಲಾಶಯದ ಬಗ್ಗೆ ತಿಳಿದುಕೊಳ್ಳಿ
588.24 ಮೀಟರ್ ಎತ್ತರ ಹೊಂದಿರುವ ಈ ಜಲಾಶಯ 1.50 ಟಿಎಂಸಿ ಡೆಡ್ ಸ್ಟೋರೇಜ್ ಇದೆ. ಇನ್ನು 3.24 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಅಣೆಕಟ್ಟೆಗೆ 21 ಕ್ರಸ್ಟ್ ಗೇಟುಗಳು ಇವೆ. ಅತಿ ಚಿಕ್ಕ ಜಲಾಶಯವಾಗಿರುವುದರಿಂದ ಕರ್ನಾಟಕದಲ್ಲೇ ಮೊದಲು ತುಂಬುವ ಅಣೆಕಟ್ಟು ಎಂಬ ಖ್ಯಾತಿ ಹೊಂದಿರುವ ಈ ಜಲಾಶಯ ಹೊಂದಿದ್ದು, ಈ ಜಲಾಶಯದಿಂದಲೇ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತದೆ.
ಈ ಅಣೆಕಟ್ಟಿಯ ಎಡ ಮತ್ತು ಬಲ ಕಾಲುವೆಯ ಮೂಲಕ ಶಿವಮೊಗ್ಗ ತಾಲೂಕು ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿಗೂ ನೀರು ಹರಿಸಲಾಗುತ್ತದೆ. ತುಂಗಾ ಮೇಲ್ದಂಡೆ ಯೋಜನೆಯ ಮೂಲಕ ಶಿವಮೊಗ್ಗ, ಹೊನ್ನಾಳಿ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿಗಳಿಗೆ ನೀರು ಹರಿಸಲಾಗುತ್ತದೆ.
ಮೈದುಂಬಿ ಧುಮುಕುತ್ತಿರುವ ಜೋಗ
ಇನ್ನು ಬೇಸಿಗೆ ಕಾಲದಲ್ಲಿ ನೀರಿಲ್ಲದೇ ಬತ್ತಿ ಹೋಗಿದ್ದ ವಿಶ್ವ ಪ್ರಸಿದ್ಧ ಜೋಗ ಜಲಪಾತದಲ್ಲಿ ಇದೀಗ ಜೀವ ಕಳೆಬಂದಿದೆ. ಹೌದು…ಮಲೆನಾಡಿನ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಶಿವಮೊಗ್ಗದ ಸಾಗರ ತಾಲೂಕಿನ ಜೋಗ್ ಫಾಲ್ಸ್ ಮೈದುಂಬಿ ಧುಮುಕುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.