ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಗೃಹ ಸಚಿವರ ತವರು ಕ್ಷೇತ್ರ ತುಮಕೂರಿನಲ್ಲೇ ಮಕ್ಕಳ ಮಾರಾಟ ಜಾಲ ಪತ್ತೆ: 6 ಜನರ ಬಂಧನ
ತುಮಕೂರು, ಜೂನ್ 26: ಗುಬ್ಬಿ ಠಾಣೆಯ ಪೊಲೀಸರು ಜಿಲ್ಲೆಯಲ್ಲಿನ ಮಕ್ಕಳ ಮಾರಾಟ ಜಾಲವನ್ನು ಭೇದಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಮ್ಯಾನೇಜರ್ ಮಹೇಶ್ (39), ಆಸ್ಪತ್ರೆಯ ಸ್ಟಾಪ್ ನರ್ಸ್ಗಳಾದ ಪೂರ್ಣಿಮಾ (39) ಹಾಗೂ ಸೌಜನ್ಯ (48), ಚಿಕ್ಕನಾಯಕನಹಳ್ಳಿ ಮೂಲದ ಫಾರ್ಮಸಿಸ್ಟ್ ಮಹಬೂಬ್ ಷರೀಪ್ (52), ಟ್ಯಾಟೋ ಹಾಕುತ್ತಿದ್ದ ಕೆ.ಎನ್. ರಾಮಕೃಷ್ಣಪ್ಪ (53), ಹನುಮಂತರಾಜು (45) ಬಂಧಿತ ಆರೋಪಿಗಳು. ಬಂಧಿತರಿಂದ 1 ಕಾರು, 50 ಸಾವಿರ ನಗದು, 4 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜೂ.9ರಂದು ಗುಬ್ಬಿ ಪಟ್ಟಣದಲ್ಲಿ 11 ತಿಂಗಳ ರಾಕಿ ಎಂಬ ಗಂಡು ಮಗು ಅಪಹರಣವಾಗಿತ್ತು. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗುವಿನ ಅಪಹರಣ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಒಂದೇ ಗ್ಯಾಂಗ್ನಿಂದ 9 ಮಕ್ಕಳನ್ನು ಮಾರಾಟ ಮಾಡಿರುವ ಮಾಹಿತಿ ದೊರೆತಿದೆ. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬೆನ್ನತ್ತಿದ ಪೊಲೀಸರಿಗೆ ಇದೊಂದು ಮಕ್ಕಳ ಮಾರಾಟ ಜಾಲ ಎಂದು ತಿಳಿದಿದೆ. ಬಳಿಕ ಈ ಜಾಲದಲ್ಲಿ ತುಮಕೂರಿನ ಖಾಸಗಿ ಆಸ್ಪತ್ರೆ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರತಿದೆ.
ಆರೋಪಿಗಳು ಈ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಖಚಿತವಾಗುತ್ತಿದ್ದಂತೆ, ಪೊಲೀಸರು ಐವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ತಾವು ಮಾಡುತ್ತಿದ್ದ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಆರೋಪಿಗಳು ವಿವಾಹ ಪೂರ್ವ ಗರ್ಭಧರಿಸಿದ, ಅಕ್ರಮ ಸಂಬಂಧದಿಂದ ಜನಿಸಿದ ಮಕ್ಕಳನ್ನು ಮಾರಾಟ ಮಾಡುತ್ತಿದ್ದರು. ಅಲ್ಲದೆ ಬಡವರ ಮಕ್ಕಳನ್ನು ಅಪಹರಿಸಿ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಮಧುಗಿರಿಯ ಗೊಲ್ಲಹಳ್ಳಿ, ದಾವಣಗೆರೆ ಮತ್ತು ಮಂಡ್ಯ ಸೇರಿದಂತೆ ಹಲವು ಕಡೆ ಮಕ್ಕಳನ್ನು ಮಾರಾಟ ಮಾಡಿದ್ದರು.
ಸದ್ಯ 9 ಮಕ್ಕಳ ಪೈಕಿ 4 ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದೆ. ಮಾರಾಟವಾಗಿದ್ದ ಒಂದು ಮಗು ಮರಳಿ ಪೋಷಕರ ಮಡಿಲು ಸೇರಿದೆ.
ಇತ್ತೀಚಿಗಷ್ಟೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಮಕ್ಕಳ ಮಾರಟ ಜಾಲ ಪತ್ತೆಯಾಗಿತ್ತು. ಕಿತ್ತೂರಿನ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಗರ್ಭಪಾತ ಮಾಡಿ, ಬಳಿಕ ಮಕ್ಕಳನ್ನು ಮಾರಾಟ ಮಾಡುತ್ತಿದ್ದನು. ಈ ವಿಚಾರ ತಿಳಿದ ಬೆಳಗಾವಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಆರೋಪಿ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದರು. ರಾಜ್ಯದಲ್ಲಿ ಮಕ್ಕಳ ಮಾರಾಟ ಜಾಲ, ಭ್ರೂಣ ಹತ್ಯೆ ಗ್ಯಾಂಗ್ ಆಕ್ಟೀವ್ ಆಗಿದ್ದು ಜನರಲ್ಲಿ ಭಯ ಮೂಡಿಸಿದೆ.