ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಪ್ಪಿನಂಗಡಿ: ಮಹಿಳೆಯ ಕೊಲೆ ಕೇಸ್: ಆರೋಪಿ ಅಪ್ರಾಪ್ತ ಬಾಲಕ ಅರೆಸ್ಟ್
ಉಪ್ಪಿನಂಗಡಿ, ಜೂ. 19,ಮನೆಯಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾದ ಹಿನ್ನೆಲೆ ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಕೃತ್ಯ ಎಸಗಿದ ಆರೋಪಿ ಅಪ್ರಾಪ್ತ ಬಾಲಕನ್ನು ಬಂಧಿಸಿದ್ದಾರೆ.
ಉಪ್ಪಿನಂಗಡಿ ಸಮೀಪದ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಮೃತ ಮಹಿಳೆ.
ಜೂನ್ 16ರ ತಡರಾತ್ರಿ ಹೇಮಾವತಿ ಅವರು ಮನೆಯ ಕೋಣೆಯಲ್ಲಿ ಮಲಗಿದ್ದ ವೇಳೆ ಅವರ ಅಕ್ಕನ ಮಗ, ಹತ್ತನೇ ತರಗತಿಯ ವಿದ್ಯಾರ್ಥಿ, ಅಪ್ರಾಪ್ತ ಬಾಲಕ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇದಕ್ಕೆ ಹೇಮಾವತಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಆರೋಪಿ ಬಾಲಕ ಹೇಮಾವತಿ ಅವರ ಕತ್ತು ಹಿಸುಕಿ ಹತ್ಯೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ.
ಹೇಮಾವತಿ ಅವರ ಸಾವಿನ ಬಗ್ಗೆ ಪತಿ ವಿಠಲ ಪೈ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನಲ್ಲಿ ನನ್ನ ಪತ್ನಿ ಹೇಮಾವತಿ ಆಕೆಯ ತಾಯಿ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆ ಮಲಗಿದಲ್ಲಿಯೇ ಸಾವನ್ನಪ್ಪಿರುವುದಾಗಿ ತನಗೆ ಮಾಹಿತಿ ಬಂದಿತ್ತು. ಆ ಬಳಿಕ ನಾನು ಪತ್ನಿಯ ಮನೆಗೆ ಹೋಗಿ ನೋಡಿದಾಗ, ಪತ್ನಿಯ ಮೃತ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದು, ಈ ಕುರಿತು ಸಂಶಯ ಬಂದಿದೆ. ಜೂ. 16ರಂದು ರಾತ್ರಿ ಪತ್ನಿಯ ಅಕ್ಕನ ಮಗ ಪತ್ನಿಯ ಮನೆಗೆ ಬಂದಿದ್ದು, ರಾತ್ರಿ ಪತ್ನಿಯ ತಾಯಿ, ಪತ್ನಿಯ ಅಕ್ಕನ ಮಗ ಮತ್ತು ಪತ್ನಿ ಊಟ ಮಾಡಿ ಮಲಗಿದ್ದರು. ಆ ಬಳಿಕ ರಾತ್ರಿಯಿಂದ 17ರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಪತ್ನಿಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದರು.
ಪತಿ ವಿಠಲ ಪೈ ದೂರಿನ ಮೇರೆಗೆ ತನಿಖೆಯನ್ನು ಕೈಗೆತ್ತಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ಅಪ್ರಾಪ್ತ ಬಾಲಕನ ಹೇಳಿಕೆಯ ಮೇರೆಗೆ ಬಂಧಿಸಿ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.