ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ವಾಲ್ಮೀಕಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಕೇಸ್: ಚಂದ್ರಶೇಖರನ್ ಪತ್ನಿ ಕವಿತಾ ಆರೋಗ್ಯದಲ್ಲಿ ಏರುಪೇರು
ಶಿವಮೊಗ್ಗ, ಜೂನ್ 01: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧೀಕ್ಷಕರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ನಿನ್ನೆ ಎಸ್ಐಟಿ ತನಿಖೆಗೆ ನೀಡಿದೆ. ಚಂದ್ರಶೇಖರನ್ ಆತ್ಮಹತ್ಯೆ ಸುತ್ತ ಸಾಕಷ್ಟು ಅನುಮಾನದ ಹುತ್ತ ಬೆಳೆದುಕೊಂಡಿದೆ. ಸದ್ಯ 187 ಕೋಟಿ ರೂ. ಹಗರಣದ ಆರೋಪದ ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಇದೆಲ್ಲದರ ಮಧ್ಯೆ ಮೃತ ಚಂದ್ರಶೇಖರನ್ ಪತ್ನಿ ಕವಿತಾ ಆರೋಗ್ಯದಲ್ಲಿ ಏರುಪೇರಾಗಿದೆ.
ಬೆಳಗ್ಗೆಯಿಂದ ವಾಂತಿ ಮತ್ತು ಸುಸ್ತಿನಿಂದ ಬಳಲಿದ್ದಾರೆ. ಬಳಿಕ ಕುಟುಂಬ ಸದಸ್ಯರು ಕವಿತಾರನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾದ ಸಾಗರ ನಗರ ಘಟಕದ ಅಧ್ಯಕ್ಷ ಪರಶುರಾಮ್ ನೇತೃತ್ವದಲ್ಲಿ ಸಾಗರ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದು, ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಲಾಗಿದೆ. ಪ್ರಕರಣವನ್ನು ಸಿಬಿಐಗೆ ವಹಿಸಲು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಕೊಡಬೇಕು: ಪ್ರಣವಾನಂದ ಸ್ವಾಮೀಜಿ
ಮೃತ ಚಂದ್ರಶೇಖರ್ ನಿವಾಸಕ್ಕೆ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಇಂದು ಭೇಟಿ ನೀಡಿದರು. ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಆತ್ಮಹತ್ಯೆ ಹಿಂದೆ ಬಹಳದೊಡ್ಡ ಬಲಶಾಲಿ ಇದ್ದಾರೆ. ಐಟಿ ಕಂಪನಿಗೆ ಹಣ ವರ್ಗಾವಣೆ ಆಗಿದೆ. ಆ ಕಂಪನಿ ಮಾಲೀಕರು ಯಾರು, ನಮ್ಮ ರಾಜಕಾರಣಿಗಳಿಗು ಕಂಪನಿ ಮಾಲೀಕರಿಗು ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಇಷ್ಟೊಂದು ಹಣ ಹೇಗೆ ಹೊರ ರಾಜ್ಯಕ್ಕೆ, ಐಟಿ ಕಂಪನಿಗೆ ವರ್ಗಾವಣೆ ಆಯ್ತು. ಸಚಿವ ನಾಗೇಂದ್ರ ಅವರನ್ನು ಕೈಬಿಡಬೇಕು. ಎಸ್ಐಟಿ ತನಿಖೆ ಸಿಐಡಿ ತನಿಖೆಯಿಂದ ಏನು ಆಗಲ್ಲ ಸಿಬಿಐ ತನಿಖೆಗೆ ವಹಿಸಬೇಕು. ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಕೊಡಬೇಕು. ಕುಟುಂಬಕ್ಕೆ ಸರಕಾರಿ ಕೆಲಸ ಕೊಡಬೇಕು ಎಂದಿದ್ದಾರೆ.
ಈ ಸರಕಾರಕ್ಕೆ ನಿಗಮದ ಹಣ ರಕ್ಷಣೆ ಮಾಡುವ ತಾಕತ್ತಿಲ್ಲ. ಹಣ ರಕ್ಷಣೆ ಮಾಡಲಾಗದಿದ್ದರೆ ಈ ಸರಕಾರ ವಜಾ ಮಾಡೋದು ಒಳಿತು. ಈಶ್ವರಪ್ಪ ಪ್ರಕರಣದಲ್ಲಿ ಆಹೋರಾತ್ರಿ ಧರಣಿ ಮಾಡಿದ್ರಲ್ಲಾ ಈಗ ಏಕೆ ಆ ಕೆಲಸ ಮಾಡ್ತಿಲ್ಲ. ಸಚಿವರನ್ನು ಏಕೆ ವಜಾ ಮಾಡ್ತಿಲ್ಲ. ಸಚಿವರನ್ನು ವಜಾ ಮಾಡುವವರೆಗೆ ಸರಕಾರದ ವಿರುದ್ದ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.