ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು
ಉಡುಪಿ ಗ್ಯಾಂಗ್ ವಾರ್: 3ಆರೋಪಿಗಳು ಪೊಲೀಸರಿಗೆ ಶರಣು, ಬೆಂಗಳೂರಿಗೂ ಹಬ್ಬಿದೆ ಆರೋಪಿಗಳ ಲಿಂಕ್
ಉಡುಪಿ, ಮೇ 26: ಗ್ಯಾಂಗ್ವಾರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳು ಇಂದು (ಮೇ 26) ಕಾಪು ಪೊಲೀಸರಿಗೆ ಶರಣಾಗಿದ್ದಾರೆ. ಮೂವರು ಅರೋಪಿಗಳನ್ನು ಕಾಪು ಪೋಲೀಸರು ಉಡುಪಿ ನಗರ ಪೋಲಿಸರಿಗೆ ಒಪ್ಪಿಸಿದ್ದಾರೆ. ಗರುಡ ಗ್ಯಾಂಗ್ನ ಮಜೀದ್, ಅಲ್ಫಾಜ್, ಶರೀಫ್ ಶರಣಾದವರು.
ಗ್ಯಾಂಗ್ ವಾರ್ ಯಾಕೆ?
ಉಡುಪಿ ನಗರದ ಕುಂಜಿಬೆಟ್ಟುವಿನಲ್ಲಿ ಮೇ 18ರ ಮುಂಜಾನೆ 2 ಗಂಟೆಯ ಹೊತ್ತಿಗೆ ಕುಂಜಿಬೆಟ್ಟು ರಸ್ತೆಯಲ್ಲಿ ಒಂದೆ ಗುಂಪಿನ ಎರಡು ತಂಡಗಳು ಗಾಂಜಾ ಅಮಲಿನಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಕಾಳಗ ನಡೆಸಿದ್ದವು. ಅಲ್ಲದೆ ತಲವಾರು ಹಿಡಿದು, ಬಡಿದಾಡಿಕೊಂಡಿದ್ದವು. ನಗರವೆಲ್ಲ ಸೈಲೆಂಟ್ ಆಗಿರುವ ಹೊತ್ತಿಗೆ ಕಾರುಗಳ ಗುದ್ದಾಟ, ತಲವಾರು ಹಿಡಿದು ಬಡಿದಾಡುತ್ತಿರುವುದನ್ನು ಸುತ್ತಲಿನ ಫ್ಲ್ಯಾಟ್ ನಿವಾಸಿಗಳು ಕಂಡು ಬೆಚ್ಚಿ ಬಿದ್ದಿದ್ದಾರೆ.
ಉಡುಪಿಯ ಕಾಪುವಿನಲ್ಲಿ ಟೀಂ ಗರುಡ ಹೆಸರಿನಲ್ಲಿ ತಂಡ ಕಟ್ಟಿಕೊಂಡಿದ್ದ ಪುಂಡರು ಗಾಂಜಾ, ದನ ಕಳ್ಳತನ, ದರೋಡೆಯಲ್ಲಿ ಸಕ್ರಿಯವಾಗಿತ್ತು. ಸದಾ ತಲವಾರು, ಕತ್ತಿ, ಡ್ರ್ಯಾಗನ್ ಹಿಡಿದು ತಿರುಗಾಡುತ್ತಿದ್ದ ಈ ಗುಂಪಿಗೆ ರೌಡಿಶೀಟರ್ ಆಶಿಕ್ ಎಂಬಾತನೇ ಕ್ಯಾಪ್ಟನ್. ನಾಲ್ಕು ವರ್ಷದ ಹಿಂದೆ ಅಂದಿನ ಎಸ್ಪಿ ಡಾ. ವಿಷ್ಣುವರ್ಧನ್ ಈ ತಂಡದ ಹೆಡೆಮುರಿ ಕಟ್ಟಿದ್ದರು.
ಎರಡು ವಾರದ ಹಿಂದೆ ಆಶಿಕ್ ಮತ್ತು ಅಲ್ಫಾಝ್ ನಡುವೆ ಜಗಳ ನಡೆದಿತ್ತು. ಒಂದೇ ತಂಡ ಆಗಿದ್ದರಿಂದ “ರಾಜಿ ಆಗುವ ಬಾ, ಗಲಾಟೆ ಬೇಡ” ಅಂತ ಆಶಿಕ್‌ನನ್ನು ಅಲ್ಫಾಝ್ ಟೀಂ ಕರೆಸಿಕೊಂಡಿತ್ತು. ಆದರೆ ಅಲ್ಫಾಝ್ ವಿಷಯ ಗೊತ್ತಿದ್ದ ಆಶಿಕ್ ಕುಂಜಿಬೆಟ್ಟಿಗೆ ಬಂದವನು ಕಾರಿನಿಂದ ಇಳಿದಿರಲಿಲ್ಲ. ಹೀಗಾಗಿ ಕಾರು ಗುದ್ದಾಟದ ಮೂಲಕ ಆಶಿಕ್‌ನನ್ನ ಮಟ್ಟ ಹಾಕಲು ಅಲ್ಫಾಝ್ ಪ್ರಯತ್ನಿಸಿದನು. ಅಷ್ಟೇ ಅಲ್ಲ, ತಲವಾರು ದಾಳಿ ನಡೆಸಲು ಮುಂದಾಗಿದ್ದಾಬೆ. ಇಷ್ಟಾಗುತ್ತಲೇ ಆಶಿಕ್ ಕಡೆಯವರು ತಮ್ಮ ಸ್ವಿಫ್ಟ್ ಕಾರನ್ನ ಶರೀಫ್ ಎಂಬಾತನ ಮೇಲೆ ಹರಿಸಿದ್ದರು.
ಬೆಂಗಳೂರಿಗೂ ಹಬ್ಬಿದ ಗ್ಯಾಂಗ್
ಕರಾವಳಿಯಲ್ಲಿ ಹುಟ್ಟಿಕೊಂಡ ಈ ಗ್ಯಾಂಗ್ ರಾಜಧಾನಿವರೆಗೂ ಕೂಡ ತಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಸುಲಭದಲ್ಲಿ ಅಡ್ಡ ದಾರಿಯ ಮೂಲಕ ದುಡ್ಡು ಮಾಡುವ ಹುಚ್ಚಿಗೆ ಬಿದ್ದ ಈ ಗ್ಯಾಂಗ್ ಮಾಡಿದ್ದು ಒಂದಲ್ಲ ಎರಡಲ್ಲ.
ಗರುಡನ ಹೆಸರು ಇಟ್ಟುಕೊಂಡು ದನ ಕಳ್ಳತನ ಮಾಡಲು ಪ್ರಾರಂಭವಾದ ಈ ಗರುಡ ಗ್ಯಾಂಗ್, 10 ವರ್ಷಗಳಲ್ಲಿ ನಟೋರಿಯಸ್ಸಾಗಿ ಬೆಳೆದಿದೆ. 2022ರ ಏಪ್ರಿಲ್ನಲ್ಲಿ ಗರುಡ ಗ್ಯಾಂಗ್ನ ಆರೋಪಿ ನಂದು ಸದ್ಯ ಬಂಧನದಲ್ಲಿರುವ ಆರೋಪಿ ಆಶಿಕ್ನ ಶೂಟ್ ಔಟ್ ಮೂಲಕ ಸುದ್ದಿಯಾಗಿದ್ದನು.
ಇನ್ನು 2020ರಲ್ಲಿ ಕೊತ್ತನೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಬೆಂಗಳೂರು ಮೂಲದ ವ್ಯಕ್ತಿಯ ಕಾರನ್ನು ಅಡ್ಡಗಟ್ಟಿ ದರೋಡೆ ಮಾಡಿದ ಪ್ರಕರಣ ಆಶಿಕ್ ಮತ್ತು ಇಸಾಕ್ ಮೇಲೆ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಆಶಿಕ್ ಮತ್ತು ಇಸಾಕ್ ತಾವು ಎಷ್ಟು ನಟೋರಿಯಸ್ ಎನ್ನುವುದನ್ನು ಅವತ್ತೇ ತೋರಿಸಿದ್ದರು. ತಮ್ಮನ್ನು ಹಿಡಿಯಲು ಬಂದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ ಇವರಿಗೆ ಗುಂಡೇಟು ನೀಡಿ ಬಂಧಿಸಿದ್ದರು. ಸದ್ಯ ಹೊಸ ಪ್ರಕರಣದ ಮೂಲಕ ಮತ್ತೆ ಪೊಲೀಸ್ ಅತಿಥಿಯಾಗಿರುವ ಆಶಿಕ್ ಹಳೇ ಕೃತ್ಯವನ್ನ ಮತ್ತೆ ನೆನಪಿಸಿದ್ದಾನೆ.
ಗ್ಯಾಂಗ್ ವಾರ್ಗೂ ಮೊದಲು ಕಾಪುವಿನಲ್ಲಿ ಟಾಕ್ ವಾರ್ ಒಂದು ನಡೆದಿತ್ತು. ಇದಾದ ಬಳಿಕ ಮಜೀದ್, ಆಶಿಕ್ ತಂಡಕ್ಕೆ ಉಡುಪಿಗೆ ಬರುವಂತೆ ಆಹ್ವಾನ ನೀಡಿದ್ದ. ಉಡುಪಿಗೆ ತನ್ನ ಸಂಗಡಿಗರೊಂದಿಗೆ ಬಂದಿದ್ದ ಆಶಿಕ್ ಕಾರಿನಿಂದ ಕೆಳಗೆ ಇಳಿದೇ ಇರಲಿಲ್ಲ. ಇದರಿಂದ ಕೋಪಗೊಂಡ ಮಜೀದ್ ತನ್ನ ಕಾರಿನಿಂದ ಆಶಿಕ್ ಕಾರಿಗೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಕಾರಿನಲ್ಲಿ ತಂದಿದ್ದ ತಲ್ವಾರ್ ಡ್ಯಾಗರ್ ದೊಣ್ಣೆಗಳನ್ನ ಬಳಸಿ ಹಲ್ಲೆ ಮಾಡಲು ಯತ್ನಿಸಿದ್ದನು.
ಈ ಘಟನೆ ಸಂಬಂಧ ಈಗಾಗಲೇ ಉಡುಪಿ ನಗರ ಪೊಲೀಸರು ಗ್ಯಾಂಗ್ ವಾರ್ನಲ್ಲಿ ಭಾಗಿಯಾಗಿದ್ದ ಆಶಿಕ್, ರಾಕೀಬ್, ಸಕ್ಲೈನ್, ಮಜೀದ್, ಅಲ್ಫಾಜ್, ಶರೀಫ್ ಎಂಬುವರನ್ನು ಬಂಧಿಸಿದ್ದಾರೆ.